Saturday, March 10, 2012

ಹರಕೆ

ಈ ಬಾರಿ ಊರಿಗೆ ಹೋದವನಿಗೆ ಯಾವ ಮದುವೆ ಊಟವೂ ಸಿಕ್ಕಿರಲಿಲ್ಲ. ಸಂಜೆಯ ಹೊತ್ತು ಅಮ್ಮನಲ್ಲಿ ಅದನ್ನೇ ಹೇಳುತ್ತಿದ್ದೆ. ಅದಕ್ಕೆ ಕಾಯುತ್ತಿದಂತೆ ಅಮ್ಮ ಶುರು ಮಾಡಿದಳು..'ಕುರಿ ಪೂಜೆ ಹೇಳಿ ವರ್ಷ ಐದು ಮೇಲಾಯಿತು. ಇನ್ನೂ ನಿನ್ನ ಅಣ್ಣನಿಗೆ ಸಮಯ ಬರಲಿಲ್ಲ. ದೇವರ ಕೆಲಸ ಎಲ್ಲ ಹಾಗೆ ಎಷ್ಟು ದಿನ ಅಂತ ಬಾಕಿ ಇಟ್ಟುಕೊಳ್ಳುವುದು. ನಾನು ಹಣ ಕೊಡ್ತೇನೆ ಹೇಳಿದರೂ  ಹಮ್ಮಿಸಿಕೊಳ್ಳಳಿಕ್ಕೆ ಇವರಿಗೆ ಏನು ದಾಡಿಯೋ'. ಅಣ್ಣನಿಗೂ ಕೇಳಿ ಕೇಳಿ ಬೇಜಾರಾಗಿತ್ತು ಅನ್ನಿಸುತ್ತೆ..ಸುಮ್ಮನೆ ಒಪ್ಪಿಕೊಂಡ. ಮತ್ತೆ ನೋಡುವಾಗ ಮೂರು ಕುರಿ ಪೂಜೆ ಬಾಕಿ ಇತ್ತಂತೆ..ಒಂದು ಅಪ್ಪ ಹೇಳಿಕೊಂಡದ್ದು..ಏಕೆ, ಏನು ಅಂತ ಯಾರಿಗೂ ಗೊತ್ತಿಲ್ಲ. ಹೇಳಿಕೊಂಡಿದ್ದಾರೆ ಅಂತ ಹೇಗೆ ಗೊತ್ತಾಯಿತೋ ನನಗೆ ತಿಳಿಯಲಿಲ್ಲ. ಇನ್ನೆರಡೂ ಅಣ್ಣ ಹೇಳಿಕೊಂಡದ್ದು. ಒಂದು ಅಕ್ಕನ ಮದುವೆ ಸಮಯದಲ್ಲಂತೆ. ಇನ್ನೊಂದು ನಮ್ಮ ಶಿಲೆಕಲ್ಲು ವ್ಯವಹಾರ ಸ್ವಲ್ಪ ಸಂಕಷ್ಟದಲ್ಲಿದ್ದಾಗ. ಅಮ್ಮ ಹೇಳುವಂತೆ ಎರಡೂ ಬಾರಿ ಚಾಮುಂಡೇಶ್ವರಿ ಹರಿಕೆ ಪಡೆದುಕೊಂಡು ಒಳ್ಳೆ ರೀತಿಯಲ್ಲಿಕೇಳಿದ್ದನ್ನು ನಡೆಸಿಕೊಟ್ಟಿದ್ದಳು.

'ಮೂರು ಕುರಿಯೆಂದರೆ ಐದು ದಿನ ಇಟ್ಟು ತಿಂದರೂ ಮುಗಿಯುವುದಿಲ್ಲ', ಖುಷಿಯಿಂದ ಹೇಳಿದೆ. 'ಆ ಹಪ್ಪುಕ್ಕೆಟ್ಟ ಬಳೆಗಾರರು ನಮಗೆಲ್ಲಿ ಬಿಡ್ತಾರೆ, ಎಷ್ಟಿದ್ದರೂ ಅವರಿಗೆ ಸಾಲುವುದಿಲ್ಲ', ಬಳೆಗಾರರಿಗೆ ಬಯ್ಯುತ್ತ ಅಕ್ಕ ಹೊರಗಡೆ ಬಂದಳು. ನಮ್ಮ ಊರ ದೇವಸ್ಥಾನಕ್ಕೆ ಪೂಜೆ ಮಾಡುವುದು ದೇವಸ್ಥಾನದ ಸಮೀಪದಲ್ಲಿ ಇರುವ ಬಳೆಗಾರರ ಮನೆಯವರು. ಎಷ್ಟು ವರ್ಷದಿಂದ ಅಂತಹ ನನಗೂ ಸರಿಯಾಗಿ ಗೊತ್ತಿಲ್ಲ. ಮಾಂಸಾಹಾರಿ ದೇವತೆಯಾದ್ದರಿಂದ ಬ್ರಾಹ್ಮಣರ ಪೂಜೆ ಇರಲಿಲ್ಲ. ಮೊದಲೆಲ್ಲ ಒಂದೇ ಮನೆಯವರ ಪೂಜೆ ಇತ್ತು, ಬಳೆಗಾರರದ್ದು ಅವಿಭಾಜ್ಯ ಕುಟುಂಬವಾಗಿರುವಾಗ. ಕೆಲ ವರ್ಷಗಳ ಹಿಂದೆ ಅವರ ಮನೆ ಪಾಲಾದಾಗ ದೇವರನ್ನೂ ಪಾಲು ಮಾಡಿಕೊಂಡಿದ್ದರು. ಹಾಗಾಗಿ ವರ್ಷಕ್ಕೊಬ್ಬರ ಪೂಜೆ ಈಗ. 'ಈಗಿರುವ ಸಂಜು ಬಳೆಗಾರರು ತುಂಬಾ ಒಳ್ಳೆಯವರು. ಉಳಿದವರ ಹಾಗಲ್ಲ. ಪೂಜೆಯೂ ಒಳ್ಳೆ ಮಾಡ್ತಾರೆ, ಊಟ ಕೂಡ ಒಳ್ಳೆಯದಾಗಿ ಹಾಕ್ತಾರೆ', ಅಮ್ಮನ ಶಿಫಾರಿಸು ಅವರಿಗೆ.

'ಮೂರು ಕುರಿ ಪೂಜೆಯೆಂದರೆ ಖರ್ಚು ಒಟ್ಟು ಎಷ್ಟಾಗಬಹುದು' ಕೇಳಿದೆ. 'ಒಂದು ಕುರಿ ಪೂಜೆಗೆ ಏನೂ ಇಲ್ಲ ಅಂದ್ರೆ ಹೆಚ್ಚು ಕಡಿಮೆ ಹದಿನೈದರಿಂದ ಇಪ್ಪತ್ತು ಸಾವಿರ ರುಪಾಯಿ ಬೇಕು. ಇದು ಮೂರು ಒಟ್ಟಿಗೆ ಕೊಡುವದರಿಂದ ನಮಗೆ ಎರಡು ಕುರಿಗಳದ್ದು ಮಾತ್ರ ಹೆಚ್ಚಿನ ಖರ್ಚು ಬರುವುದು. ಎಲ್ಲ ಒಟ್ಟು ಮೂವತ್ತು ಸಾವಿರದ ಒಳಗೆ ಖಂಡಿತ ಮುಗಿಯತ್ತೆ', ಅಮ್ಮ ಎಲ್ಲ ಮೊದಲೇ ಲೆಕ್ಕಾಚಾರ ಹಾಕಿದ್ದಳು. ನನಗೆ ಒಮ್ಮೆಲೇ ಸಿಟ್ಟು ಬಂದಿತು, ಸುಮ್ಮ ಸುಮ್ಮನೆ ಮೂವತ್ತು ಸಾವಿರ ಖರ್ಚು ಮಾಡ್ತಾರಲ್ಲ ಅಂತ. ಈ ಊರಿನ ಜನಗಳಿಗೆ ಬೇರೆ ಕೆಲಸವಿಲ್ಲ, ಎಲ್ಲದಕ್ಕೂ ಒಂದು ಹರಕೆ ಹೇಳಿ ಕೊಳ್ಳುತ್ತಾರೆ. ಅಣ್ಣನಿಗೆ ಹಾಗೆಯೇ ಹೇಳಿದೆ. ಮತ್ತೆ ನೋಡಿದರೆ ಅಣ್ಣನಿಗೂ ಅಷ್ಟು ಖರ್ಚು ಅಂತ ಗೊತ್ತಿರಲಿಲ್ಲವಂತೆ. ನಮ್ಮನೆಯಿಂದ ಪ್ರತಿ ವರ್ಷ ಊರ ಮಾರಿ ಹಬ್ಬಕ್ಕೆ ಒಂದು ಕುರಿ ಕೊಡುತ್ತಿದ್ದರು. ಅದಕ್ಕೊಂದು ಐದಾರು ಸಾವಿರ ಖರ್ಚು, ಅಷ್ಟೇ, ಹಾಗೇ ಅಂದು ಕೊಂಡು ಎರಡು ಬಾರಿ ಕುರಿ ಪೂಜೆ ಹರಿಕೆ ಹೇಳಿದ್ದ. ಮತ್ತೆ ಗೊತ್ತಾಯಿತಂತೆ ಶಬ್ದಗಳ ಎಡವಟ್ಟು. 'ಮಾರಿ ಕುರಿ' ಮತ್ತೆ 'ಕುರಿ ಪೂಜೆ' ಎರಡು ಬೇರೆ ಬೇರೆ ಸೇವೆಗಳಂತೆ, ಯಾಕಾದರೂ ಅಷ್ಟು ಗೊಂದಲಮಯ ಹೆಸರುಗಳನ್ನಿಡುತ್ತಾರೋ. ಅಮ್ಮನಂತೂ ಸುತರಾಂ ಸಿಧ್ಧಳಿರಲಿಲ್ಲ, ದೇವರ ಜೊತೆ ಚೌಕಾಶಿ ಮಾಡಲು. ಹಾಗಾಗಿ ಮೂರು ಕುರಿ ಪೂಜೆಯ ತಯಾರಿ ಮಾಡತೊಡಗಿದೆವು.

ಕುರಿ ಪೂಜೆಗೆ ನೂರ ಇಪ್ಪತ್ತೈದು ಜನರಿಗೆ ಊಟ ಅಂತ ನಿರ್ಧಾರ ಮಾಡಿದೆವು. ನಮ್ಮ ಕಡೆಯಿಂದ ೭೫ ಜನ, ಬಳೆಗಾರರ ಕಡೆಯಿಂದ  ೫೦ ಜನ. ನಮ್ಮ ಪೂಜೆಗೆ ಬಳೆಗಾರರ ಕಡೆಯಿಂದ ಅಷ್ಟು ಜನ ಯಾಕೆ ಎಂದರೆ ಅಮ್ಮನ ಉತ್ತರ ತಯಾರಾಗಿತ್ತು, 'ಇವತ್ತು ನಿನ್ನೆಯ ಕ್ರಮವಲ್ಲ ಅದು, ಹಾಗೆ ಕುರಿ ಪೂಜೆ ಕೆಲಸಕ್ಕೆಲ್ಲ ತುಂಬಾ ಜನ ಬೇಕು, ಕರೆಯಲಿ ಬಿಡಿ'. ನಮ್ಮಲ್ಲಿ ಪೂಜೆಯ ಎಲ್ಲ ಕೆಲಸಗಳು ದೇವಸ್ತಾನದಲ್ಲಿಯೇ ನಡೆಯುವುದು. ಮಧ್ಯಾಹ್ನ ಪೂಜೆ ಮುಗಿಸಿ ಕುರಿ ಕಡಿಯಲು ಹೋಗಿ ಬಂದರೆ, ಸಂಜೆ ಊಟಕ್ಕೆ ಹೋಗುವುದು. ಉಳಿದ ಎಲ್ಲ ಕೆಲಸವೂ ಅವರೇ ನೋಡಿಕೊಳ್ಳುತ್ತಾರೆ. ನಾವು ಹಣ ಕೊಟ್ಟರೆ ಸಾಕು. ಒಂತರ ಸಂಪೂರ್ಣ ಹೊರಗುತ್ತಿಗೆ.

ಈ ಬಾರಿ ನನಗೆ ಪೂರ್ತಿಯಾಗಿ ಮಧ್ಯಾಹ್ನದ ಪೂಜೆ ನೋಡಬೇಕಿತ್ತು. ಕೊನೆಯ ಬಾರಿ ನಾನು ಮಾರಿ ಪೂಜೆ ನೋಡಿದ್ದು ಎಷ್ಟೋ ವರ್ಷಗಳ ಹಿಂದೆ. ಇಪ್ಪತ್ತು ನಿಮಿಷಗಳಲ್ಲಿ ನಲವತ್ತು ಕುರಿಗಳನ್ನು ಕಚ ಕಚ ಕೊಂದಿದ್ದರು, ನೋಡಲಾರದೆ ಕಣ್ಣು ಮುಚ್ಚಿದ್ದೆ. ಈ ಬಾರಿ ನೋಡುವ ಗಟ್ಟಿ ದೈರ್ಯ ಮಾಡಿದ್ದೆ. ಪೂಜೆ ನೋಡಲು ಜಾಸ್ತಿ ಜನ ಬಂದಿರಲಿಲ್ಲ, ನಮ್ಮ ಮನೆಯ ಪೂಜೆ ಹೆಚ್ಚು ಸಮಯ ಇರುವುದೂ ಇಲ್ಲ. 'ಅಮ್ಮನವರ' ಪಾತ್ರಿ ಉಡುಗೆ ತೊಟ್ಟುಕೊಂಡು ಸಿಧ್ಧರಾಗಿ ನಿಂತರು. ಹೆಗ್ಗಡೆಯವರು ಶಿಂಗಾರ ಹೂವನ್ನು ನೀಡಿ ನೀರನ್ನು ಕೊಟ್ಟೊಡನೆ, ಅದನ್ನು ಮುಖಕ್ಕೆಲ್ಲ ತಿಕ್ಕಿತೊಂಡು ಛಂಗನೆ ಹಾರಿ ಜೋರಾಗಿ ಚೀತ್ಕರಿಸಿದರು. ಕ್ಷಣಾರ್ಧದಲ್ಲಿ ಅವರ ಮೈಮೇಲೆ ಅಮ್ಮನವರ (ಚಾಮುಂಡೇಶ್ವರಿ) ಆಹ್ವಾಹನೆಯಾಗಿತ್ತು. ಪೂಜೆಯ ವಿಷಯ ತಿಳಿದುಕೊಂಡು ಹರಕೆಯನ್ನು ಪಡೆಯಲು ದೇವರು ಹೊರಗಡೆ ಬಂತು.

ದೇವಸ್ಥಾನದ ಎದುರಿನ ಅಂಗಳದಲ್ಲಿ ಮೂರು ಕುರಿಗಳನ್ನು ನಿಲ್ಲಿಸಿದ್ದರು. ಒಂದೊಂದು ಕುರಿ ಹಿಡಿಯಲು ಇಬ್ಬಿಬ್ಬರು. ಒಬ್ಬರು ಬಲವಾಗಿ ಹಿಂದುಗಡೆ ಹಿಡಿದರೆ ಇನ್ನೊಬ್ಬರು ಕುತ್ತಿಗೆಗೆ ಹಾಕಿದ ಹಗ್ಗವನ್ನು ಎಳೆದು ಹಿಡಿಯಲಿಕ್ಕೆ. ಮೂರು ಕುರಿಗಳಲ್ಲಿ ಒಂದು ತುಂಬಾ ಚಿಕ್ಕದು, ಬಹುಶ ವರ್ಷ ಕೂಡ ಆಗಿರಲಿಕ್ಕಿಲ್ಲ. ಇನ್ನೆರಡು ದೊಡ್ಡವು. ಎಲ್ಲವುಗಳ ಕುತ್ತಿಗೆಯನ್ನು ಚನ್ನಾಗಿ ಕ್ಷೌರ ಮಾಡಲ್ಲಾಗಿತ್ತು. ಕುರಿಗಳಿಗೆ ಕುತ್ತಿಗೆ ಕ್ಷೌರ ಮಾಡುವಾಗಲೇ ತಿಳಿಯುತ್ತದಂತೆ, ಕಡಿಯಲು ಪೂರ್ವ ತಯಾರಿ ಎಂಬುದಾಗಿ.

ಮೊದಲ ಸರದಿ ಚಿಕ್ಕ ಕುರಿಯದ್ದು. ಹರಿತವಾದ ಕತ್ತಿಯ ಮೊದಲ ಏಟಿಗೆ ರುಂಡ ಮತ್ತು ಮುಂಡ ಬೇರಾಗಿತ್ತು. ಉಳಿದೆರಡು ಕುರಿಗಳು ನೋಡಿ ಜೋರಾಗಿ ಕಿರುಚಲು ತೊಡಗಿದವು. ಅವುಗಳ ಕಿರುಚಾಟಕ್ಕೆ ದೇವರ ಅರ್ಭಟವೂ ಜೋರಾಯಿತು, ಬೆಂಕಿಗೆ ತುಪ್ಪ ಎರಚಿದಂತೆ. ಕೆಲ ಕ್ಷಣಗಳಲ್ಲಿ ಇನ್ನೊಂದು ಕುರಿಯ ಕತ್ತು ತುಂಡಾಯಿತು. ದೊಡ್ಡ ಕುರಿಗೆ ಮೂರನೇ ಏಟು ಬಿತ್ತು. ಉಳಿದೆರದಕ್ಕಿಂತ ದೊಡ್ಡದಾದ ಅದಕ್ಕೆ ಆ ಏಟು ಸಾಲಲಿಲ್ಲ. ಅರ್ಧ ಮುರಿದ ಕತ್ತಿಗೆ ಇನ್ನೊಂದು ಏಟು ಬಿತ್ತು, ಮೂರು ನಿಮಿಷಗಳಲ್ಲಿ ಕುರಿಗಳೆಲ್ಲ ನೆಲಕ್ಕುರುಳಿದವು. ದೇವರೂ ವಿಚಿತ್ರ ಸಂತೋಷದಿಂದ ಆರ್ಭಟವನ್ನು ಕಡಿಮೆ ಮಾಡಿತು. ಕಡಿದವರು ಓಕುಳಿ ಚೆಲ್ಲಿ ಸಂತೋಷದಿಂದ ದೇವರೊಡನೆ ಒಳ ಹೋದರು. ಅವರ ಮನಸ್ಸಲ್ಲಿ ಕೃತಾರ್ಥರಾದ ಭಾವವಿತ್ತು. ಧರ್ಮದಿಂದ ಇದ್ದು, ದೇವರ ಕೃಪೆ ಇದ್ದಾಗ ಮಾತ್ರ ಅಷ್ಟು ಆರಾಮವಾಗಿ ಕಡಿಯಲು ಸಾಧ್ಯವಂತೆ.

ಮರಿ ಕುರಿಗೆ ಹೆಚ್ಚು ಒದ್ದಾಟವಿರಲಿಲ್ಲ, ಒಂದು ನಿಮಿಷದ ಒಳಗಾಗಿ ಅದರ ದೇಹ ನಿಶ್ಚಲವಾಗಿತ್ತು. ಆದರೆ ಉಳಿದೆರಡು ಕುರಿಗಳು ವಿಲ ವಿಲ ಒದ್ದಾಡುತ್ತ ಇದ್ದವು. ನೋಡುತ್ತಲೇ ಹೋದೆ. ತಲೆ ಬಿದ್ದ ಸ್ಥಳದಲ್ಲಿಯೇ ಇತ್ತು, ದೇಹ ಮಾತ್ರ ಅತ್ತಿಂದಿತ್ತ ಇತ್ತಿಂದತ್ತ ಹೋಗುತ್ತಿತ್ತು. ರಕ್ತ ಬಿಡದೆ ಚಿಮ್ಮುತ್ತಲೇ ಇತ್ತು. ರಕ್ತಕ್ಕೆ ಓಕುಳಿಯ ನೀರು ಸೇರಿ ಎಲ್ಲ ಕಡೆ ಕೆಂಪು ತುಂಬಿತ್ತು. ಮೂರು ನಿಮಿಷಗಳವರೆಗೂ ಆ ಒದ್ದಾಟ ಮುಂದುವರೆಯಿತು. ಮತ್ತೆ ನಿದಾನವಾಗುತ್ತ ಸಾಗಿ ಕೊನೆಗೊಮ್ಮೆ ಶಾಂತವಾಯಿತು. ನನ್ನ ಕಣ್ಣುಗಳಲ್ಲೂ ನೀರು ಬರಲು ಶುರುವಾಯಿತು. ಇಷ್ಟನ್ನೆಲ್ಲ ನೋಡಿ ಇನ್ನು ಮೇಲೆ ಕುರಿ ತಿನ್ನುವುದು ಸಾಧ್ಯವೇ ಇಲ್ಲವೆನಿಸಿತು. ಪ್ರತಿಬಾರಿ ಮಾಂಸಾಹಾರ ನೋಡಿದಾಗಲೂ ಈ ರಕ್ತದೊಕುಳಿಯೇ ಕಣ್ಣ ಮುಂದೆ ಕುಣಿಯಬಹುದು ಅಂದುಕೊಂಡೆ.

ಪೂಜೆ ಮುಗಿಸಿ ಮನೆಗೆ ಬಂದರೂ ಕೂಡ ತಲೆಯಲ್ಲೇ ಅದೇ ಕುಳಿತಿತ್ತು. ಮನೆಗೆ ಎಲ್ಲ ಬಂದ ಮೇಲೆ ಹೇಳಿದೆ, 'ಇನ್ಯಾರು ಮುಂದೆ ಕುರಿ ಪೂಜೆ ಹೇಳಬೇಡಿ. ಹರಿಕೆ ಕೊಟ್ಟು ಪುಣ್ಯ ಪಡೆಯಲು ಪಾಪದ ಕುರಿಗಳನ್ನು ಕೊಲ್ಲುವ ಪಾಪ ಯಾಕಾದ್ರೂ ಮಾಡಬೇಕು' ಅಂದೆ. ಅಮ್ಮನಿಗೆ ಅರ್ಥವಾಗಲಿಲ್ಲ, 'ಅದು ಹೇಗೆ ಪಾಪವಾಗುತ್ತದೆ? ಕೊಂದ ಪಾಪ ತಿಂದ ಪರಿಹಾರ ಅಂತ ದೊಡ್ಡವರೆಲ್ಲ ಹೇಳಿದ್ದರಲ್ಲ'. ನಾನು ನನ್ನ ಪಾಂಡಿತ್ಯ ಬಿಚ್ಚಲು ಶುರು ಮಾಡಿದೆ. 'ತಿಂದ ಪರಿಹಾರ ಎಂದರೆ ಕುರಿ ಕೊಂದು ಚೆನ್ನಾಗಿ ಸಾಂಬಾರು ಮಾಡಿ ತಿನ್ನುವುದಲ್ಲ, ಕೊಂದದ್ದು ತಪ್ಪಾಯಿತೆಂದು ಮನಸಾರೆ ಪಶ್ಚಾತ್ತಾಪ ಪಡಬೇಕು. ನೋವನ್ನು ತಿನ್ನಬೇಕು. ಮತ್ತೆ ಅದೇ ತಪ್ಪು ಮಾಡಬಾರದು' ಎಂದೆ. ಅಮ್ಮನ ಗೊಂದಲ ಇನ್ನೂ ಜಾಸ್ತಿಯಾಯಿತು. ಅಮ್ಮ ಶಾಲೆಗೆ ಹೋದವಳಲ್ಲ. 'ಹೌದಾ, ಮತ್ತೆ ಮನೆಯ ಕೋಳಿ ಮರಿಗಳನ್ನು ಕಾಗೆ ತೆಗೆದುಕೊಂಡು ಹೋಗುವಾಗ ಕೂಡ ತಪ್ಪಿಸುವುದು ಪಾಪ ಅಂತ ಹೇಳ್ತಾರಲ್ಲ, ಅದರ ಆಹಾರಕ್ಕೆ ಅಡ್ಡ ಬಂದ ಹಾಗಂತೆ ಅದು. ಇದೂ ಕೂಡ ಹಾಗೆಯೇ ಅಲ್ಲವಾ' ಅಂದಳು. ಈಗ ನನಗೂ ಸ್ವಲ್ಪ ಗೊಂದಲವಾಯ್ತು. 'ತಿಂದ ಪರಿಹಾರ' ಎಂದರೆ 'ಪ್ರಾಯಶ್ಚಿತ್ತ' ಅಂತ ನಾನು ಎಲ್ಲಿಯೂ  ಓದಿದ್ದು ನೆನಪಿಗೆ ಬರಲಿಲ್ಲ. ಪ್ರಾಥಮಿಕ ಶಾಲೆಯಲ್ಲಿ ಯಾರೋ ಅಧ್ಯಾಪಕರು ಹೇಳಿದ ನೆನಪು, ಭಟ್ಟರು ಬೇರೆ. ಯಾವುದನ್ನು ನಂಬುವುದೆಂಬ ಗೊಂದಲ ಶುರುವಾಯಿತು. ಆದರೂ ನಾನು ಹೇಳಿದ್ದೇ ವೇದ ಎಂದು ಬೇರೆಯವರ ಬಾಯಿ ಮುಚ್ಚಿಸಿದೆ, ಮತ್ತೆ ಮನಸ್ಸಲ್ಲೇ ಯೋಚಿಸಲು ಶುರು ಮಾಡಿದೆ.

ರಾತ್ರಿ ಎಂಟು ಘಂಟೆಯ ಹೊತ್ತಿಗೆ ಊಟಕ್ಕೆ ತಯಾರಾಗಿ ಹೋದೆವು, ಹತ್ತಿರ ಹತ್ತಿರ ನೂರೈವತ್ತು ಜನ ಬಂದಿದ್ದರು. ಮೊದಲ ಪಂಕ್ತಿಯಲ್ಲೇ ಕುಳಿತೆ. ಅನ್ನ ಹಾಕಿದಷ್ಟೇ ಕುರಿ ಮಾಂಸ ಸಹ ಹಾಕಿದರು. ಚೆನ್ನಾಗಿ ತೆಂಗಿನಕಾಯಿ ಹಾಕಿ ಮಾಡಿದ ಬಿಸಿಬಿಸಿ ಪದಾರ್ಥ ಒಳ್ಳೆಯ ಪರಿಮಳ ಬರಿಸುತ್ತಿತ್ತು. ಮಧ್ಯಾಹ್ನದ ನೆನಪಾಗಲಿಲ್ಲ. ಎರಡು ಪೀಸು ತಿಂದೆ. ಮೂರನೇ ಪೀಸು ಬಾಯಿಗೆ ಹಾಕುವಾಗ ಎಲ್ಲ ನೆನಪಿಗೆ ಬಂತು. ಆಶ್ಚರ್ಯವಾಯಿತು, ಏನೂ ಅನಿಸಲಿಲ್ಲ. ತಿನ್ನುತ್ತ ಹೋದೆ. ನನ್ನ ಪಾಲಿನದು ಮುಗಿಸಿ ನನ್ನ ಹೆಂಡತಿಯ ಪಾಲಿನದ್ದು ಅರ್ಧ ಮುಗಿಸಿದೆ. ಮತ್ತೆ ಮಧ್ಯಾಹ್ನದ ಘಟನೆಯನ್ನು ಎಣಿಸಿದೆ,  ಕುರಿ ಸತ್ತದ್ದು ಬೇಜಾರೆನಿಸಿತು, ಆದರೆ  ಕುರಿ ಪದಾರ್ಥ ಚೆನ್ನಗಿತ್ತೆನಿಸಿತು. ನನ್ನಲ್ಲೇ ಏನೋ ಸಮಸ್ಯೆ ಇರಬೇಕು, ಅದಕ್ಕೆ ಈ ತರ ಮನಸ್ಸು ಬದಲಾಗುತ್ತಿದೆ ಅನ್ನಿಸಿ ಮುಂದೆ ಆಲೋಚಿಸೋದು ಬಿಟ್ಟು ಬಿಟ್ಟೆ.

ಮರುದಿನ ನನ್ನನ್ನು ಸೇರಿಸಿ ಮನೆಯವರೆಲ್ಲ ಮೂರು ಮೂರು ಬಾರಿ ಶೌಚಾಲಯಕ್ಕೆ ಹೋಗುವವರೇ. ಎಲ್ಲರೂ ನನ್ನ ಹಾಗೆ ತಿಂದಿದ್ದರು. ಗಮನಿಸಿದೆ, ಅಮ್ಮ ಮಾತ್ರ ಸರಿಯಿದ್ದಳು. ಸಂಶಯ ಬಂತು ' ನೀನ್ಯಾಕಮ್ಮ ಜಾಸ್ತಿ ತಿನ್ನಲಿಲ್ವಾ' ಕೇಳಿದೆ. 'ಇಲ್ಲವಾ, ಜಾಸ್ತಿ ತಿನ್ನಲಿಕ್ಕೆ ನನ್ನ ಹಲ್ಲು ಎಷ್ಟು ಸರಿ ಇದೆ' ಅಂತ ಉತ್ತರಕ್ಕೂ ಕಾಯದೆ ಒಳಗಡೆ ಹೋದಳು. ನನ್ನ ಸಂಶಯ ನಿವಾರಣೆಯಾಗಿರಲಿಲ್ಲ. ಅವಳ ಹಲ್ಲನ್ನು ದೂಶಿಸುವುದೋ ನನ್ನ ಪಾಂಡಿತ್ಯವನ್ನೋ ತಿಳಿಯಲಿಲ್ಲ.

ವಾಪಾಸು ಬರುವ ಹಿಂದಿನ ದಿನ ನಾನು ನಮ್ಮನೆಯಲ್ಲಿ ಇದ್ದರೆ ಹೆಂಡತಿ ತಾಯಿಯ ಮನೆಗೆ ಹೋಗಿದ್ದಳು. ಮರುದಿನ ಅಲ್ಲಿಂದಲೇ ವಿಮಾನ ಹಿಡಿಯಲು ಆರಾಮ ಆಗುತ್ತದೆ ಅಂತ. ಸಂಜೆ ಎಂಟು ಘಂಟೆಗಳ ತನಕ ಸರಿಯಾಗಿ ಇದ್ದವಳಿಗೆ ಮತ್ತೆ ಒಂದೇ ಸಮನೆ ವಾಂತಿ ಶುರುವಾಯಿತು. ಸ್ವಲ್ಪ ಸ್ವಲ್ಪ ಸಂವೇದನೆ ಮೊದಲೇ ಇದ್ದುದ್ದರಿಂದ ನಾನೂ ಜಾಸ್ತಿ ತಲೆ ಕೆಡಿಸಿಕೊಳ್ಳಲಿಲ್ಲ. ಸುಮ್ಮನೆ ಮನೆಯವರ ತಲೆ ಕೆಡಿಸೋದು ಬೇಡವೆಂದು ಯಾರಿಗೂ ಹೇಳಲಿಲ್ಲ. ನಮ್ಮ ಮನೆಯಲ್ಲಿ ಎಲ್ಲ ಮಲಗಿ ಕೊಂಡರು. ಸಮಯ ಮುಂದೆ ಹೋದಹಾಗೆ ಇವಳ ವಾಂತಿಯೂ ಮುಂದುವರಿಯುತ್ತಲೇ ಹೋಯಿತು. ಕೊನೆಗೆ ಕುಡಿದ ನೀರು ಸಹ ನಿಲ್ಲಲಿಲ್ಲ. ಹನ್ನೆರಡು ಘಂಟೆ ರಾತ್ರಿಗೆ ಅವಳ ಮನೆಯವರು ಫೋನ್ ಮಾಡಿ ಅಳತೊಡಗಿದರು. ನನಗೂ ಏನೂ ಮಾಡುವುದೆಂದು ತೋಚಲಿಲ್ಲ. ಮತ್ತೆ ಕೂಡಲೇ ಆಸ್ಪತ್ರೆಗೆ ಸೇರಿಸಿದರು. ಒಂದು ಘಂಟೆಗೆ ಫೋನ್ ಮಾಡಿದಾಗಲೂ ಏನೂ ಒಳ್ಳೆಯ ಸುದ್ದಿ ಇರಲಿಲ್ಲ. ನಾಳೆ ವಿಮಾನ ಹಿಡಿಯುವುದು ಸ್ವಲ್ಪ ಕಷ್ಟವೇ ಅಂದರು. ನನ್ನ ಚಿಂತೆ ಇನ್ನೂ ಜಾಸ್ತಿಯಾಯಿತು. ದೂರದಲ್ಲಿರುವುದರಿಂದ ಅವಳ ಅನಾರೋಗ್ಯ ಯಾವ ಪ್ರಮಾಣದಲ್ಲಿದೆ ಅನ್ನುವ ಸೂಚನೆ ಸಹ ಸರಿಯಾಗಿರಲಿಲ್ಲ, ಹೋಗೋಣವೆಂದರೆ ರಾತ್ರಿ ಒಂದು ಘಂಟೆ ಬೇರೆ. ವಿಮಾನಕ್ಕುಳಿದಿರುವುದು ಬರಿಯ ಹದಿನಾರು ಘಂಟೆ ಮಾತ್ರ. ಟಿಕೇಟು ರದ್ದು ಮಾಡಿದರೆ ಸುಮ್ಮನೆ ಎರಡು ಮೂರು ದಿನ ಹೆಚ್ಚಿನ ರಜೆ, ಅದೂ ಕೂಡಲೇ ಸಿಗುವ ಖಾತರಿ ಇಲ್ಲ, ಮೇಲೆ ಹತ್ತಿರ ಹತ್ತಿರ ನಲವತ್ತು ಸಾವಿರದ ಬರೆ. ಹರಕೆ ಹೇಳಿಕೊಳ್ಳಲೇ ಅನ್ನಿಸಿತು, ಒಂತರ ನಾಚಿಕೆಯೆನಿಸಿತು. ದೇವರ ಹತ್ತಿರ ಬೇಡುವುದು ಬಿಟ್ಟು ಎಷ್ಟೋ ವರ್ಷಗಳು ಕಳೆದಿದ್ದವು. ಆದರೆ ಅದನ್ನು ಬಿಟ್ಟು ಮಾಡಲಿಕ್ಕೆ ನನ್ನ ಕೈಯಲ್ಲಿ ಬೇರೆ ಏನೂ ಇರಲಿಲ್ಲ. ನಮ್ಮ ಮನೆಯವರು ಯಾಕೆ ಹರಕೆ ಹೇಳಿ ಕೊಳ್ಳುತ್ತಾರೆ ಅಂತ ಸ್ವಲ್ಪ ಸ್ವಲ್ಪ ಅರ್ಥವಾಯಿತು. ಹರಕೆ ಹೇಳುವುದಾದರೆ ಯಾವ ಹರಕೆ ಹೇಳುವುದು. ಕುರಿ ಪೂಜೆ, ಕೋಳಿ ಪೂಜೆ ಎಲ್ಲ ಬೇಡ ಅಂತ ನಾನೇ ಮನೆಯವರಿಗೆ ಉಪದೇಶ ಮಾಡಿ ಆಗಿದೆ. ಮತ್ತೆ ಸ್ವಲ್ಪ ಹೊತ್ತು ಆಲೋಚನೆ ಮಾಡಿದೆ. ಕೊನೆಗೆ ಹತ್ತಿರದ ಶಾಲೆಯಲ್ಲಿ ಬಡ ಮಕ್ಕಳಿಗೆ ಏನಾದರೂ ಕೊಡುವುದು ಅಂತ  ನಿರ್ಧರಿಸಿದೆ. ಹರಕೆ ನಿರ್ಧಾರ ಆಯಿತು, ಆದರೆ ಎಷ್ಟು ಕೊಡಬೇಕು ಅನ್ನುವುದು ಗೊತ್ತಾಗಲಿಲ್ಲ. ದೇವರ ಹತ್ತಿರ ವ್ಯವಹಾರ ಮಾಡಿದ ಅಭ್ಯಾಸವಿರಲಿಲ್ಲ. ನಮ್ಮ ಪ್ಯಾಕ್ಟರಿ ಮಾಡುವಾಗ ಸಬ್ಸಿಡಿಯಲ್ಲಿ ಸರಕಾರೀ ಅಧಿಕಾರಿಗಳಿಗೆ ಇಪ್ಪತ್ತೈದು ಶೇಕಡಾ ಕೊಟ್ಟಿದ್ದು ನೆನಪಿಗೆ ಬಂತು. ಟಿಕೇಟಿನ ಬೆಲೆ ನಲವತ್ತು ಸಾವಿರ, ಹಾಗಾಗಿ ಹತ್ತು ಸಾವಿರ ಸರಿ ಅನ್ನಿಸಿತು. ಮತ್ತೆ ಮನಸ್ಸು ಬದಲಾಯಿಸಿ ಹರಕೆಯನ್ನು ಹದಿನ್ನೈದು ಸಾವಿರಕ್ಕೆರಿಸಿದೆ, ಆರಾಮವಾಗಿ ವಿಮಾನ ಹತ್ತುವ ಹಾಗಾದರೆ. ಸಮಾಧಾನವಾಯಿತು, ಮಲಗಿದ ಕೂಡಲೇ ನಿದ್ದೆಯೂ ಬಂತು.

ಮರುದಿನ ಬೆಳಗ್ಗೆ ಬೇಗನೆ ಎದ್ದು ಹೊರಟೆ. ದೇವರಿಗೆ ಹರಿಕೆಯ ಕರೆ ಹೋಗಿತ್ತು ಅನಿಸುತ್ತೆ, ಹನ್ನೆರಡು ಘಂಟೆ ಹೊತ್ತಿಗೆ ಆಸ್ಪತ್ರೆಯಿಂದ ಬಿಟ್ಟರು, ನಾಲ್ಕು ಬಾಟಲ ಗ್ಲುಕೋಸ್ ಹಾಕಿದ ಬಳಿಕ. ದೇವರ ಹತ್ತಿರ ವ್ಯವಹಾರ ಪರವಾಗಿಲ್ಲ ಅನ್ನಿಸಿತು.

ಕೆಲದಿನಗಳ ಬಳಿಕ ಹೆಂಡತಿಯಲ್ಲಿ ಹೇಳಿದ್ದೆ, ಹರಕೆಯ ವಿಷಯ. ಅದಕ್ಕೆ ಕಾಯುತ್ತಿದ್ದ ಹಾಗೆ ಹೇಳಿದಳು, 'ಇನ್ನೊಮ್ಮೆ ಹರಿಕೆ ಹೇಳಿಕೋ, ಡಾಕ್ಟರ್ ಮೂರು ತಿಂಗಳಲ್ಲೇ ಗುಣವಾಗುತ್ತೆ ಅಂತ ಹೇಳಿದ ವಾಕರಿಕೆ, ಸುಸ್ತು ಇನ್ನು ಸ್ವಲ್ಪ ಕೂಡ ಹೋಗಿಲ್ಲ' ಅಂತ. ನಾನು ಅಂತರ್ಜಾಲ ಎಲ್ಲ ಜಾಲಾಡಿ ಎಲ್ಲ ರೀತಿಯ ಮನೆಯೌಷಧ ಮಾಡಿದ್ದೆ, ಯಾವುದು ಉಪಯೋಗಕ್ಕೆ ಬಂದಿರಲಿಲ್ಲ. ಇದನ್ನೂ ಒಂದು ಬಾರಿ ನೋಡಿ ಬಿಡೋಣ ಅನ್ನಿಸಿತು. ಆದರೆ ಮತ್ತದೇ ಸಮಸ್ಯೆ. ಎಷ್ಟು ಹಣ ಕೊಡಬೇಕೆಂದು. ಅವಳ ನೋವಿನ ಬೆಲೆ ನನಗೆ ತಿಳಿದಿರಲಿಲ್ಲ. ಅವಳನ್ನೇ ಕೇಳಿದೆ. ನೋವಿನ ಬೆಲೆ ಕಟ್ಟುವುದು ಅವಳ ಕೈಯಲ್ಲೂ ಆಗಲಿಲ್ಲ. ಕೊನೆಗೆ ಈವರೆಗೆ ಆದ ಖರ್ಚು ಲೆಕ್ಕ ಹಾಕತೊಡಗಿದಳು. ಎರಡು ಆಕ್ಯೂ ಪ್ರೆಶರ್ ಬ್ಯಾಂಡ್, ಒಂದು ಆಡಿಯೋ ಸಿಡಿ, ಮತ್ತಿಷ್ಟು ಶುಂಟಿ, ನೆಲ್ಲಿಕಾಯಿ. ಎಲ್ಲ ಸೇರಿ ಹತ್ತಿರ ಹತ್ತಿರ ಮೂರು ಸಾವಿರ. ಹಾಗಾಗಿ ಐದು ಸಾವಿರ ಸಾಕೆಂದಳು. ಅಷ್ಟು ಕಡಿಮೆಯಾ ಅಂತ ಕೇಳಿದ್ದಕ್ಕೆ ಇನ್ನೈದು ಸೇರಿಸಿದಳು, ಜೊತೆಗೊಂದು ಷರತ್ತು ಕೂಡ. ಇನ್ನು ಮೂರು ದಿನದಲ್ಲಿ ಗುಣವಾದರೆ ಮಾತ್ರಾ ಅಂತ.  ಆಯ್ತು ಅಂದೆ. ಮೂರು ದಿನ ಆಯ್ತು, ಆರು ದಿನ ಆಯ್ತು, ಓಂಭತ್ತಾಯ್ತು. ದೇವರ ಸುದ್ದಿಯೇ ಇಲ್ಲ. ಹರಕೆ ದೇವರಿಗೆ ಕೇಳಿಸಲಿಲ್ಲವೋ, ಷರತ್ತು ಇಷ್ಟವಾಗಲಿಲ್ಲವೋ ಗೊತ್ತಾಗಲಿಲ್ಲ. ನನಗೂ ಸಾಕಾಯ್ತು, ಇನ್ನು ಮೇಲೆ ದೇವರ ಜೊತೆ ವ್ಯವಹಾರ ಸಾಕು ಎಂದು ಮನಸ್ಸಲ್ಲೇ ನಿರ್ಧರಿಸಿಕೊಂಡೆ.

Thursday, March 1, 2012

ಪ್ರಸವ

ಪ್ರಸವ ವೇದನೆ ಶುರುವಾಗುತ್ತಿದ್ದ ಹಾಗೆ ರಾಘವ್ ನನ್ನನ್ನು ಆಸ್ಪತ್ರೆಗೆ ಕರೆತಂದಿದ್ದ, ಜಾಸ್ತಿ ತಡ ಮಾಡದೆ. ಇನ್ನೇನು ಕೆಲವೇ ಸಮಯದಲ್ಲಿ ಈ ಎಲ್ಲ ನೋವಿಗೆ ತಡೆ ಎನ್ನುವ ಅವನ ಸಾಂತ್ವನದ ಮಾತುಗಳು ನನ್ನ ಕಿವಿಯತ್ತ ತಲುಪುತ್ತಲೇ ಇರಲಿಲ್ಲ. ನಾನು ಕೂಡ ಮೊದ ಮೊದಲು ಎಷ್ಟು ಧೈರ್ಯ ತಂದುಕೊಂಡಿದ್ದೆ, ನಾನೇ ಏನೂ ಮೊದಲಲ್ಲ... ಈ ಪ್ರಪಂಚದಲ್ಲಿ ಮಗುವನ್ನು ಹೆರುವವಳು. ಎಲ್ಲರು ಅನುಭವಿಸುವ ನೋವು ನನಗೊಬ್ಬಳಿಗೆ ಮಹಾ ಎಷ್ಟು ಕಷ್ಟವಾಗಬಹುದೆಂದು. ಮೊದಲ ನಾಲ್ಕು ತಿಂಗಳಲ್ಲಿಯೇ ಹೈರಾಣಾಗಿ ಹೋಗಿದ್ದೆ...ಏನನ್ನೂ ಸರಿಯಾಗಿ ತಿನ್ನುವ ಹಾಗಿಲ್ಲ..ದಿನದ ಅರ್ಧ ಸಮಯ ತಿಂದದ್ದು ಹೊರ ಹಾಕುವುದರಲ್ಲೇ ಹೋಗುತ್ತಿತ್ತು. ಏನನ್ನೂ ತಿನ್ನಲ್ಲು ಮನಸ್ಸಾಗುತ್ತಿರಲಿಲ್ಲ..ಕೆಲವೊಮ್ಮೆ ವಾಸನೆ ನೋಡಿಯೇ ವಾಂತಿಯಾಗುತ್ತಿತ್ತು..ಅದರ ಮೇಲೆ ರಾಘವನ ಕಿರಿಕಿರಿ...ನಿನ್ನ ಹೊಟ್ಟೆಯಲ್ಲಿ ಮಗು ಬೇರೆ ಇದೆ.. ಸರಿಯಾಗಿ ತಿನ್ನು ತಿನ್ನು ಎಂದು..ಮಗುವಿರುದು ನನಗೆ ಮರೆತೇ ಹೋಗಿರುವಂತೆ..ಅದರ ಮೇಲೆ ಕಿತ್ತು ತಿನ್ನುವ ತಲೆ ನೋವು..ಸುಸ್ತು..ಮೊದಲ ವಾರ ಹೇಗೋ ಕಷ್ಟ ಪಟ್ಟು ತಡೆದುಕೊಂಡಿದ್ದೆ...ಆದರದು ಪ್ರತಿದಿನದ ಗೋಳಾದಾಗ, ಯಾಕಪ್ಪಾ ನನಗೀ ಕಷ್ಟ ಅನ್ನಿಸತೊಡಗಿತ್ತು...

ಇನ್ನು ಕೆಲವೇ ಸಮಯದಲ್ಲಿ ನಾನು ಅಮ್ಮನಾಗಲಿದ್ದೇನೆ..ಎಣಿಸಿದಾಗ ನೋವಿನಲ್ಲೂ ಏನೋ ಒಂತರ ನಲಿವು..ಬೇರೆಯವರಿಗೆ ಬಿಡಿಸಿ ಹೇಳಲಾಗದ ಭಾವನೆ..ಮೊದಲ ತಾಯ್ತನದಲ್ಲಿ ಮಾತ್ರಾ ಇಂತಹ ವಿಶೇಷ ಅನುಭೂತಿ ಸಾಧ್ಯವಂತೆ.. ಹಾಗಿದ್ದರೆ..ಅವಳೇಕೆ ನನಗಾಗಿ ನಾಲ್ಕನೇ ಬಾರಿ ಬಸುರಾದಳು..ಮೊದಲ ಮೂರು ಮಕ್ಕಳೂ ಗಂಡಾದಾಗ ಅಪ್ಪ ಸಹ ಮಗಳ ಆಶೆಯನ್ನು ಬಿಟ್ಟು ಬಿಟ್ಟಿದ್ದರನ್ತಲ್ಲ...ಮನೆಯಲ್ಲಿ ಉಳಿದ ಹಿರಿಯರಿಗಂತೂ ಹೆಣ್ಣು ಮಗು ಬೇಕಿರಲಿಲ್ಲ...ಅವರಿಗದು ಹೆಚ್ಚಿನ ಖರ್ಚು ಮಾತ್ರ...ಅಮ್ಮ ಮಾತ್ರ ಯಾರ ಮಾತು ಕೇಳದೆ, ಅಪ್ಪನನ್ನು ಕಾಡಿ ಬೇಡಿ ಒಪ್ಪಿಸಿ ನಾಲ್ಕನೇ ಬಾರಿ ಗರ್ಭ ದರಿಸಿದ್ದಳಂತೆ..ಅವಳು ಯಾವತ್ತೂ ಹೇಳುತ್ತಿದ್ದಳಲ್ಲ, ನನಗಾಗಿ ಹಾಕದ ಹರಿಕೆಯಿಲ್ಲ, ಹೋಗದೇ ಇದ್ದ ದೇವಸ್ಥಾನನವಿಲ್ಲವೆಂಬುದಾಗಿ..

ಮೊದಲ ನಾಲ್ಕು ತಿಂಗಳ ನಂತರ ಆಯಾಸ ಹಾಗೂ ತಲೆನೋವು ಸ್ವಲ್ಪ ಕಡಿಮೆಯಾಗುತ್ತ ಬಂದಿತ್ತು, ಆದರೂ ಅದು ಆರಾಮದ ಸಮಯವಾಗಿರಲಿಲ್ಲ. ಸರಿಯಾಗಿ ನಿದ್ದೆ ಬರುವುದೇ ಅಪರೂಪವಾಗಿತ್ತು..ಆದರೂ ಇಂದಿನ ನೋವು ಕಳೆದ ಒಂಭತ್ತು ತಿಂಗಳ ಕಷ್ಟಗಳನ್ನು ಕೂಡಿಸಿದರೂ ಕಡಿಮೆಯೆಂದೇ ಹೇಳಬೇಕು..ವಿಪರೀತವಾದ ನೋವು..ಈ ತರ ಕೂಡ ನೋವು ಇರಬಹುದೆಂಬ ಕಲ್ಪನೆ ಕೂಡಾ ನನಗಿರಲಿಲ್ಲ. ನಾನು ಪಡುತ್ತಿರುವ ಕಷ್ಟ ನೋಡಲಾರದೆ ರಾಘವನೂ ಒಳಗೊಳಗೇ ಒದ್ದಾಡುತ್ತಿದ್ದ.. ಬಹುಶ ಎಪಿಡ್ಯುರಲ್ ತೆಗೆದು ಕೊಂಡಿದ್ದರೆ ನೋವು ಕಡಿಮೆಯಾಗುತ್ತಿತ್ತು..ಆದರೆ ಅದರ ಬಗ್ಗೆ ನಾವು ಮೊದಲೇ  ನಿರ್ಧರಿಸಿದ್ದಾಗಿತ್ತು..ಅದರಿಂದ ಮುಂದೆ ಬೆನ್ನು ನೋವಿನ ತೊಂದರೆ ಬರುವುದಾಗಿ ಎಲ್ಲೋ ಓದಿದ್ದೆ..ಹಾಗೆ ಏನೋ ಹೇಳಿ ರಾಘವನನ್ನೂ ಒಪ್ಪಿಸಿದ್ದೆ.. ಕಾರಣ ಅದಲ್ಲ ಎಂಬುದು ನನಗೆ ಮಾತ್ರ ತಿಳಿದ ವಿಷಯ..ಬೆನ್ನು ನೋವಿನ ಪಾರ್ಶ್ವ ಪರಿಣಾಮಕಿಂತ, ನನಗೆ ಆ ನೋವನ್ನು ಅನುಭವಿಸಬೇಕಿತ್ತು..ಅಮ್ಮನ ಹಾಗೆ..ಅಮ್ಮನ ಮಾತುಗಳನ್ನು ಮರೆಯುವುದು ನನಗೆ ಸಾಧ್ಯವಿರಲಿಲ್ಲ..

'ನೀನು ಹುಟ್ಟುವಾಗ ಈಗಿನ ಹಾಗೆ ಒಳ್ಳೆ ಆಸ್ಪತ್ರೆಗಳು ಇರಲಿಲ್ಲ..ಆ ಒಂಭತ್ತು ತಿಂಗಳು ನಿನ್ನನ್ನು ಹೊಟ್ಟೆಯಲ್ಲಿಟ್ಟು ನಾ ಪಟ್ಟ  ಕಷ್ಟ ನನಗೊಬ್ಬಳಿಗೆ ಗೊತ್ತು, ದೇವರನ್ನು ಬಿಟ್ಟರೆ..ನಿನಗೆಲ್ಲಿ ಅರ್ಥವಾಗುತ್ತದೆ ಅವೆಲ್ಲ..ನೀ ಹುಟ್ಟುವ ದಿನ ಒಂಭತ್ತು ಘಂಟೆ ಕಾಲ ಹೆರಿಗೆ ನೋವಿನಲ್ಲಿ ನರಳಿದವಳು ನಾನು..ನಿನ್ನಜ್ಜಿ ಹೇಳಿದ್ದು ಸುಳ್ಳಲ್ಲ..ಹೆಣ್ಣು ಮಕ್ಕಳು ಹುಟ್ಟುವಾಗ ಗಂಡಿಗಿಂತ ಎರಡರಷ್ಟು ಕಷ್ಟ ಕೊಟ್ಟರೆ, ಮುಂದೆ ಬೆಳೆದ ಮೇಲೆ ನಾಲ್ಕರಷ್ಟು ಕೊಡುತ್ತಾರಂಥ..ಅವರ ಮಾತು ಕೇಳಿ ನಾನು ಅಂದೇ ನನ್ನ ಹಠ ಬಿಡಬೇಕಿತ್ತು..ನನ್ನ ಕರ್ಮ..ಒಂದು ಹೆಣ್ಣು, ಒಂದು ಹೆಣ್ಣು ಅನ್ನೋ ಆಸೆಯಲ್ಲಿ ಯಾರ ಮಾತಿಗೂ ಸೊಪ್ಪು ಹಾಕಲಿಲ್ಲ..ಇದು ತನಕ ನೀನು ಹೇಳಿದ್ದಕ್ಕೆಲ್ಲ ಪ್ರಶ್ನೆ ಮಾಡದೆ ತಲೆ ಅಲ್ಲಾಡಿಸುತ್ತ ಬಂದೆ, ಈಗ ಅನುಭವಿಸ ಬೇಕಾಗಿದೆ'...ಕೇಳಿ ಕೇಳಿ ನನಗೂ ಸಿಟ್ಟು ನೆತ್ತಿಗೇರಿ ಬಂದಿತ್ತು...ಸಿಟ್ಟಿನಿಂದ ಗದರಿಸಿದ್ದೆ..'ಒಂಬತ್ತು ತಿಂಗಳು ಹೆತ್ತ ಕಥೆಯನ್ನು ಕಳೆದ ಇಪ್ಪತ್ತನಾಲ್ಕು ವರ್ಷದಿಂದಲೂ ಹೇಳ್ತಾನೆ ಇದ್ದೀಯ..ನೀನೊಬ್ಬಳೆ ಅಲ್ಲ, ಈ ಪ್ರಪಂಚದಲ್ಲಿ ಹೆತ್ತವಳಿರೋದು..ಯಾರೂ ಪಡದ ಕಷ್ಟವೇನೂ ನೀನು ಪಟ್ಟಿಲ್ಲ..ಮುಂದೊಮ್ಮೆ ನಾನು ಕೂಡ ಮಗುವಿನ ತಾಯಿಯಾಗುವವಳು..ಮತ್ತೆ ಮತ್ತೆ ಅದನ್ನೇ ದೊಡ್ಡ ಕಷ್ಟ ಅಂತ ಹೇಳಬೇಡ..ನಿನ್ನ ರಾಗ ಕೇಳಿ ಕೇಳಿ ನನಗೂ ಸಾಕಾಗಿದೆ..' . ಅಮ್ಮ ಮುಂದೆ ಮಾತಾಡಲಿಲ್ಲ..ಧಾರೆ ಧಾರೆಯಾಗಿ ಹರಿಯುತ್ತಿದ್ದ ಅವಳ ಕಣ್ಣೀರು ಕಂಡೂ ಕಾಣದೆ ತೆರಳಿದ್ದೆ...

ನೋವು ಕಡಿಮೆಯಾಗುವ ಸೂಚನೆ ಕಾಣಲಿಲ್ಲ, ಹಾಗೆಯೇ ಮಗು ಹೊರ ಬರುವ ಸೂಚನೆ ಸಹ. ಇನ್ನು ನನ್ನ ಕೈಯಲ್ಲಿ ತಡೆಯುವುದು ಸಾಧ್ಯವೇ ಇಲ್ಲವೆನಿಸಿತು..ಹಿಂದೆಂದೂ ಅನುಭವಿಸದ ನೋವು..ಅದು ಯಾವ ತರಹದ ನೋವು ಎಂದು ಬೇರೆಯವಿರಿಗೆ ಹೇಳಲೂ ಸಾಧ್ಯವಿರಲಿಲ್ಲ, ಅನುಭವಿಸಿಯೇ ಅರಿವಾಗಬೇಕದು..ಅಯ್ಯೋ ದೇವರೇ ಅನ್ನುವ ನನ್ನ ಕೂಗಿಗೆ ಯಾರೂ ಕರಗಿದ ಹಾಗೆ ಕಾಣಲಿಲ್ಲ..ಅವರಿಗಿದು ಪ್ರತಿದಿನದ ಪ್ರದರ್ಶನ...ಆ ನೋವಿನಲ್ಲೂ ಆಶ್ಚರ್ಯವಾಯಿತು...ಅಷ್ಟು ಹೊತ್ತು ನೋವಿನಲ್ಲಿ ನರಳಿದರೂ, ಒಮ್ಮೆಯೂ ಅಮ್ಮಾ ಅಂದು ಕೂಗಿರಲಿಲ್ಲ..ಅಯಾಚಿತವಾಗಿ ನನ್ನ ತುಟಿಗಳು ಅಮ್ಮಾ ಅನ್ನಲೂ ಹೋದರೂ, ತಡೆದು ಅದನ್ನು ಬದಲಿಸುತ್ತಿದ್ದೆ...ಅಮ್ಮನ ಮೇಲಿನ ಕೋಪ ಇನ್ನು ಹೊಗಿರಲಿಲ್ಲವೇ..ಅಥವಾ ನನ್ನೊಳಗವಿತಿದ್ದ ಪಾಪ ಪ್ರಜ್ಞೆ ಅಮ್ಮಾ ಅನಲು ತಡೆಯುತ್ತಿತ್ತೆ.. ಸರಿಯಾಗಿ ಅರ್ಥವಾಗಲಿಲ್ಲ.

ಆ ದಿನದ ವರೆಗೆ ಅವಳು ನನಗೆ ತಾಯಿ ಮಾತ್ರಾ ಆಗಿರಲಿಲ್ಲ..ಪ್ರಾಣ ಸ್ನೇಹಿತೆ ಕೂಡ ಆಗಿದ್ದಳು.. ನನ್ನ ಪ್ರತಿಯೊಂದು ಆಸೆಗಳಿಗೆ ಅಪ್ಪನಿಂದ ಎಷ್ಟು ಬಾರಿ ಗದರಿಸಿಕೊಂಡಿದ್ದರು, ಎಷ್ಟು ಬಾರಿ ಮಾತು ಬಿಟ್ಟಿದ್ದರು ಅನ್ನುವುದು ಬಹುಶಹ ನನಗೂ ಪೂರ್ತಿಯಾಗಿ ಗೊತ್ತಿರಲಿಲ್ಲ..ನನ್ನ ಮೇಲೆ ಅಮ್ಮನಿಗೆ ಎಷ್ಟು ಅದಮ್ಯ ಪ್ರೀತಿಯಿತ್ತೋ ಅದಕ್ಕಿಂತ ಹೆಚ್ಚು ನಂಬಿಕೆಯಿತ್ತು..ಅವಳ ನಂಬಿಕೆಯಂತೆಯೇ ನಾನೂ ನಡೆದುಕೊಂಡಿದ್ದೆ..ಯಾವ ತರಗತಿಯಲ್ಲಿ ಸಹ ಮೊದಲ ಸ್ಥಾನ ಬೇರೆಯವರಿಗೆ ಬಿಟ್ಟು ಕೊಟ್ಟವಳಲ್ಲ..ಪಿಯುಸಿಯಲ್ಲಿ ಒಳ್ಳೆಯ ಅಂಕ ಗಳಿಸಿ ದೂರದ ಬೆಂಗಳೂರಿನ ಪ್ರತಿಷ್ಟಿತ ಕಾಲೇಜಿನಲ್ಲಿ ಸೀಟು ದೊರಕಿಸಿಕೊಂಡಾಗ ಮನೆಯ ಎಲ್ಲರು ನನ್ನ ವಿರುಧ್ಧವೆ ಇದ್ದರು..ಹೆಣ್ಣು ಮಗಳು ಒಬ್ಬಳೇ ಅಷ್ಟು ದೂರ ಇರುವುದು ಯಾರಿಗೂ ಸರಿ ಬಂದಿರಲಿಲ್ಲ, ಯಾರ ಮಾತು ಕೇಳದೆ ಎರಡು ದಿನ ಊಟ ಬಿಟ್ಟಿದ್ದೆ.. ನಾನಷ್ಟು ದೂರ ಹೋಗುವುದು ಅಮ್ಮನಿಗೂ ಇಷ್ಟ ಇರಲಿಲ್ಲವೆಂದು ಅವಳ ಕಣ್ಣುಗಳೇ ಹೇಳುತ್ತಿದ್ದವು..ಆದರೂ ಅದನ್ನು ತೋರಗೊಡದೆ ಎಲ್ಲರನ್ನು ಎದುರು ಹಾಕಿಕೊಂಡು ನನ್ನ ಜೊತೆ ಉಪವಾಸ ಕುಳಿತ್ತಿದ್ದಳು..ಕೊನೆಗೂ ನಾನೇ ಗೆದ್ದಿದ್ದೆ..ದೂರದ ಬೆಂಗಳೂರಿಗೆ ನಾಲ್ಕು ವರ್ಷಗಳ ಕಾಲೇಜು ಜೀವನಕ್ಕೆ ಹೊರಟ್ಟಿದ್ದೆ..ಆ ದಿನ ಅಮ್ಮನ ಕಣ್ಣಲ್ಲಿ ಧಾರಾಕಾರವಾಗಿ ಇಳಿಯುವ ನೀರನ್ನು ಮೊದಲ ಬಾರಿ ಕಂಡಿದ್ದೆ..

'ಅಯ್ಯೋ ಅಮ್ಮಾ', ತಡೆಯಲಾಗಿರಲ್ಲ...ಜೋರಾಗಿ ಕಿರಿಚಿಕೊಂಡಿದ್ದೆ..ಹೆಚ್ಚು ಸಮಯ ತುಟಿಗಳನ್ನು ತಡೆ ಹಿಡಿಯುವುದು ನನ್ನಿಂದ ಸಾಧ್ಯವಾಗಿರಲಿಲ್ಲ..ಹೆರಿಗೆ ನೋವಿನೊಂದಿಗೆ ಅಮ್ಮನ ನೆನೆಪು ಸೇರಿ ನೋವು ಇಮ್ಮಡಿಯಾಗಿತ್ತು...ನೋವಿನಲ್ಲಿ ಅಮ್ಮನಿಗೆಸೆದ ಸವಾಲು ಅರ್ಥ ಕಳೆದುಕೊಂಡಿತ್ತು..ಡಾಕ್ಟರ್, ಪ್ಲೀಸ್ ನನಗೆ ಎಪಿಡ್ಯುರಲ್ ಕೊಡಿ, ನೋವು ತಡೆಯಲಾಗುತ್ತಿಲ್ಲ, ಪ್ಲೀಸ್..ನನ್ನ ಕಿರುಚಾಟ ಜಾಸ್ತಿಯಾಗತೊಡಗಿತ್ತು..ರಾಘವಗೂ ಆಶ್ಚರ್ಯವಾಗಿತ್ತನಿಸುತ್ತದೆ..ಅಷ್ಟು ದಿನ ಬೇಡವೇ ಬೇಡವೆಂದು ಅವನೆದುರು ವಾದಿಸಿದವಳು ಹೇಗೆ ಮನಸ್ಸು ಬದಲಾಯಿಸಿದೆ ಎಂದು..ಅವನಿಗೂ ಅಪರೂಪದ ಅನುಭವ..ಕೆಲವೇ ನಿಮಿಷಗಳಲ್ಲಿ ಡಾಕ್ಟರ್ ಎಪಿಡ್ಯುರಲ್ ಹಾಕಿಸಿದರು, ನೋವು ಮೊದಲಿಗಿಂತ ಸ್ವಲ್ಪ ಕಡಿಮೆಯಾಯಿತು.

ದೂರದ ಬೆಂಗಳೂರಿನ ಜೀವನ ಮೊದಮೊದಲು ತುಂಬಾ ಕಷ್ಟವಾಗಿತ್ತು...ಯಾವಾಗಲೂ ಮನೆಯದ್ದೆ ನೆನಪು..ಒಮ್ಮೊಮ್ಮೆ ಎಲ್ಲ ಬಿಟ್ಟು ಮನೆಗೋಡೋಣ ಎನ್ನಿಸುತ್ತಿತ್ತು...ಕಾಲಕ್ರಮೇಣ ಎಲ್ಲ ಸರಿಯಾಗಿತ್ತು..ಹೊಸ ಗೆಳೆತನ..ಹೊಸ ಜಾಗ..ಹೊಸ ವಿಷಯಗಳು ನನ್ನಲ್ಲೂ ಹೊಸತನವನ್ನು ತಂದಿತ್ತು..ಮನೆಯಿಂದ ದೂರ ಹೋದವರು ಮನಸ್ಸಿಂದಲೂ ದೂರ ಹೋಗುತ್ತಾರಂತೆ..ನಿದಾನವಾಗಿ ಅಮ್ಮನ ಪ್ರೀತಿಯ ಬಂಧನದಿಂದ ನನ್ನನ್ನು ಬಿಚ್ಚಿಕೊಂಡಿದ್ದೆ...ಹೆಚ್ಚು ಸಮಯ ಬಂಧನದಿಂದ ಹೊರಗಿದ್ದು ತಿಳಿಯದ ನಾನು ನನಗರಿವಿಲ್ಲದೆ ರಾಘವನ ಬಂಧನದಲ್ಲಿ ಸಿಲುಕ್ಕಿದ್ದೆ..ಅಮ್ಮನ ಬಂಧನಕ್ಕಿನ್ತಲೂ ತುಂಬಾ ಆಪ್ಯಾಯಮಾನವೆನಿಸಿತ್ತು..ಅದೇ ಬಂಧನದಲ್ಲಿ ಕೊನೆ ತನಕ ಇರಲೂ ನಿರ್ಧರಿಸಿದ್ದೆ..ಕಾಲೇಜು ಮುಗಿಯುವ ಮೊದಲೇ ಇಬ್ಬರಿಗೂ ಬೆಂಗಳೂರಿನ ಪ್ರತಿಷ್ಟಿತ ಕಂಪನಿಯೊಂದರಲ್ಲಿ ಕೆಲಸ ದೊರೆತಿತ್ತು..ಕೈ ತುಂಬಾ ಸಂಬಳ ಬೇರೆ..ಕಾಲೇಜು ಮುಗಿದು ಮನೆಗೆ ಹೋದಾಗ ಯಾರಿಂದಲೂ ಮೊದಲಿನ ತರ ವಿರೋಧ ವ್ಯಕ್ತವಾಗಿರಲಿಲ್ಲ..ಸಂಬಳ ಜಾಸ್ತಿಯೆಂದೋ, ನಮ್ಮ ಮಾತು ಇವಳು ಕೆಳುವವಳಲ್ಲ ಎಂದೋ ತಿಳಿದಿರಲಿಲ್ಲ..ಆದರೂ ರಾಘವನ ವಿಚಾರ ಎತ್ತುವುದು ನನ್ನಿಂದ ಸಾಧ್ಯವಾಗಿರಲಿಲ್ಲ..ನಮ್ಮದೋ ಮಡಿವಂತರ ಕುಟುಂಬ..ಅಪ್ಪ ಊರ ದೇವಸ್ತಾನದ ಪುರೋಹಿತರು ಬೇರೆ..ಪ್ರೀತಿಯ ಅಮಲಿನಲ್ಲಿ ತೇಲುವಾಗ ನನಗೆ ರಾಘವನ ಜಾತಿ ಬೇಕಿರಲಿಲ್ಲ..ಅವನು ಕೆಳಜಾತಿಯವನು ಎಂದು ತಿಳಿಯುವ ಹೊತ್ತಿಗೆ ಮೇಲೆ ಬರಲಾರದಷ್ಟು ಆಳದಲ್ಲಿ ಮುಳುಗಿದ್ದೆ...

ಎಪಿಡ್ಯುರಲ್ ಪ್ರಭಾವವೋ ಏನು, ಜಾಸ್ತಿ ನೋವು ತಿಳಿಯುತ್ತಿರಲಿಲ್ಲ..ಗರ್ಭಕೋಶದ ಸ್ನಾಯುಗಳು ಸಂಕುಚಿಸುವುದು ಅನುಭವಕ್ಕೆ ಬರುತ್ತಿತ್ತು..ಆದರೂ ಮಗು ಹೊರಗಡೆ ಬರಲು ಅದು ಸಾಲದು ಎಂದು ದಾದಿಯರು ಸುಮ್ಮನಿದ್ದರು..ಕೆಲವು ಹೊತ್ತುಗಳ ಬಳಿಕ ರಕ್ತದೊತ್ತಡ ವಿಪರೀತ ಏರು ಪೇರಾಗತೊಡಗಿತು..ಮೂರು ಘಂಟೆಗಳ ಕಾಲ ನನ್ನನ್ನು ನೋವಿನಲ್ಲಿ ನೂಕಿದವರು ಆವಾಗ ಎಚ್ಚೆತ್ತು ಅಪರೇಷನ್ ತಿಯೇಟರತ್ತ ನನ್ನನ್ನು ಕೊಂಡೊಯ್ಯಲು ಅಣಿವಾದರು..

ಕೆಲಸಕ್ಕೆ ಸೇರಿ ಒಂದು ವರ್ಷವಾಗುತ್ತಿಂದತ್ತೆ ಮನೆಯಲ್ಲಿ ನನ್ನ ಮದುವೆಗೆ ಹುಡುಗ ಹುಡುಕಲು ಆರಂಭಿಸಿದ್ದರು..ಇನ್ನು ತಡ ಮಾಡುವುದು ಸರಿಯಲ್ಲ ಎಂದು ನನಗೂ ಅನ್ನಿಸಿತ್ತು..ಯಾರು ವಿರೋಧಿಸಿದರೂ ಅಮ್ಮ ನನ್ನ ಕೈಯನ್ನು ಬಿಡಲಾರಳುಎಂಬ ಧ್ರಿಢ ನಂಬಿಕೆ ನನ್ನಲ್ಲಿತ್ತು..ನನ್ನ ಎಲ್ಲ ನಿರ್ಧಾರಗಳಲ್ಲು ಅವಳು ನನ್ನೊಂದಿಗೆ ನಡೆದವಳು..ಮನೆಯಲ್ಲಿ ಯಾರು  ವಿರೋದಿಸಿದರೂ ಎಲ್ಲರನ್ನು ಒಪ್ಪಿಸುತ್ತಾಳೆ ಎನ್ನುವ ಅಚಲವಾದ ವಿಶ್ವಾಸ..ಜಾತಿ ಒಂದು ಬಿಟ್ಟರೆ ಬೇರೆ ಯಾವುದರಲ್ಲೂ ರಾಘವ ಕಡಿಮೆ ಇರಲಿಲ್ಲ..ಊರಿಗೆ ಹೋದವಳು ಯಾರೂ ಇಲ್ಲದ ಸಮಯ ನೋಡಿ ಅಮ್ಮನಲ್ಲಿ ವಿಷಯ ಪ್ರಸ್ತಾಪಿಸಿದ್ದೆ..ಆದರೆ ನಾನು ಅಂದು ಕೊಂಡಂತೆ ಆಗಲಿಲ್ಲ..ಅಮ್ಮ ಬದಲಾಗಿದ್ದಳು..ವಿಷಯ ಕೇಳುತ್ತಿದ್ದಂತೆಯೇ ಕೋಪದಿಂದ ಅಮ್ಮನ ಮುಖ ಕೆಂಪಗಾಗಿತ್ತು..ಅವತ್ತೇ ಮೊದಲು, ಅಮ್ಮನನ್ನು ಆ ರೀತಿ ನೋಡಿದ್ದು..ಮೊದ ಮೊದಲು ಗದರಿಸಿದಳು..ಮತ್ತೆ ಗೋಗರೆದಳು..ಕೊನೆಗೆ ಅತ್ತಳು..ನನ್ನ ಮನಸ್ಸು ಕಲ್ಲಾಗಿತ್ತು..ಸಂಜೆಯ ತನಕ ಅಮ್ಮ ಯಾರೊಂದಿಗೂ ಮಾತನಾಡಲಿಲ್ಲ..ನನ್ನ ಮನಸ್ಸೂ ವ್ಯಗ್ರವಾಗಿತ್ತು..ನನಗೆ ಪ್ರಿಯವೆನಿಸಿದ ಎಲ್ಲ ವಸ್ತುಗಳನ್ನು ತುಂಬಿ ಸಂಜೆ ವೇಳೆಗೆ ಬೆಂಗಳೂರಿನ ಬಸ್ಸನ್ನು ಏರಿದ್ದೆ..ಹಿಂದಿರುಗುವ ಆಲೋಚನೆ ನನ್ನಲ್ಲಿ ಇರಲಿಲ್ಲ..ಅಮ್ಮನೂ ಬಂದಿದ್ದಳು..ಬಸ್ಸು ಹತ್ತುವ ಮುಂಚೆ ನೀರು ತುಂಬಿದ ಕಂಗಳಲ್ಲಿ ಹೇಳಿದ್ದಳು..'ಮಗಳೇ, ನಾನೀಗ ಅನುಭವಿಸುತ್ತಿರುವ ನೋವು ನಿನಗೂ ಒಂದು ದಿನ ಅರ್ಥವಾಗುತ್ತದೆ, ಆದರೆ ಆ ನೋವನ್ನು ಹಂಚಿಕೊಳ್ಳಲು ಆವಾಗ ನಾನಿರುವುದಿಲ್ಲ್ಲ'..ಅಮ್ಮನ ಮಾತುಗಳು ನನಗೆ ಸರಿಯಾಗಿ ಅರ್ಥವಾಗಿರಲಿಲ್ಲ..ಅಮ್ಮನ ಕಣ್ಣುಗಳಲ್ಲಿ ಸುರಿಯುತ್ತಿರುವ ನೀರಿಗೆ ನನ್ನ ಪ್ರೇಮದ ಬಿಸಿಯೊಡನೆ ಸೆಣೆಸುವ ಶಕ್ತಿಯೂ ಇರಲಿಲ್ಲ..

ಆಪರೇಶನ್ ಅವಾಗಲೇ ಶುರುವಾಗಿತ್ತು..ಅರಿವಳಿಕೆ ಇಂಜೆಕ್ಷನ್ ನಿಂದಾಗಿ ನನಗೆ ಏನೂ ಸರಿಯಾಗಿ ತಿಳಿಯುತ್ತಿರಲಿಲ್ಲ..ಇನ್ನು ಕೆಲವೇ ಕ್ಷಣಗಳಲ್ಲಿ ನನ್ನ ಹೊಟ್ಟೆಯನ್ನು ಬಗೆದು ಹೊಸ ಜೀವವೊಂದು ಹೊರಬರಲಿದೆ..ಏನೋ ವಿಚಿತ್ರವಾದ ಅನುಭವ..ಅಪರೇಷನ್ ಕತ್ತರಿ ಹೊಟ್ಟೆಯನ್ನು ಕತ್ತರಿಸಲು ಆರಂಬಿಸಿದೆ ಅನಿಸುತ್ತಿತ್ತು..ನನಗೆ ನೋಡಲು ಸಾಧ್ಯವಿರಲಿಲ್ಲ..ಆದರೆ ಅನುಭವವಾಗುತ್ತಿತ್ತು.. ರಾಘವ ಪಕ್ಕದಲ್ಲೇ ನಿಂತು ನನಗೆ ದೈರ್ಯ ತುಂಬುತ್ತಿದ್ದ..ಅಂದಿನಂತೆ...

ವಾಪಾಸು ಬಂದವಳಿಗೆ ಅಮ್ಮನದೇ ಚಿಂತೆ..ಅಮ್ಮನ ಕೊನೆಯ ಮಾತುಗಳು ನನಗೆ ಸರಿಯಾಗಿ ಅರ್ಥವಾಗಿರಲಿಲ್ಲ..ಅಮ್ಮ ಏನಾದರೂ ಹೆಚ್ಚು ಕಡಿಮೆ ಮಾಡಿಕೊಂಡರೆ..ರಾಘವನಿಗೆ ಅದೇನು ದೊಡ್ಡ ವಿಷಯವೆನಿಸಲಿಲ್ಲ..'ಅಂತರ್ಜಾತಿ ವಿವಾಹ ಎಂದರೆ ಎಲ್ಲ ಹೆತ್ತವರೂ ಹೀಗೆಯೇ ಮಾಡುತ್ತಾರೆ..ಮಕ್ಕಳ ಮನಸ್ಸು ಬದಲಾಗಲಿ ಎಂದು'..ಹಾಗೆಯೇ ಕೇಳಿದ್ದ..'ನನ್ನನ್ನು ಬಿಟ್ಟು ಬೇರೆಯವರನು ಮದುವೆಯಾಗಿ ನೀನು ಬದುಕಿರಬಲ್ಲೆಯ' ಎಂದು...ಅವನನ್ನು ಬಿಟ್ಟಿರುವ ಆಲೋಚನೆಯೇ ನನ್ನಲ್ಲಿ ಇದುವರೆಗೆ ಬಂದಿರಲಿಲ್ಲ..ಅವನನ್ನು ಬಿಟ್ಟು ನಾನು ಸುಖವಾಗಿರಬಲ್ಲೆನೆ..ಇಲ್ಲ..ಕನಿಷ್ಠ ಬದುಕಿರಬಲ್ಲೆನೆ..ಹೃದಯ ಇಲ್ಲ ಇಲ್ಲ ಎಂದು ಬಡಿದುಕೊಳ್ಳತೊಡಗಿತು..ಮುಂದಿನ ತಿಂಗಳಲ್ಲಿಯೇ ರಾಘವನ ಊರಿನಲ್ಲಿ ಸರಳವಾಗಿ ಮದುವೆಯಾದೆವು..ನಮ್ಮ ಮನೆಯಲ್ಲಿ ಹೇಳುವ ಧೈರ್ಯವಿರಲಿಲ್ಲ..ನಾನೇ ತಿಳಿಸುವ ಅನಿವಾರ್ಯತೆಯೂ ಇರಲಿಲ್ಲ...ವಿಷಯ ನಮ್ಮ ಊರಿಗೂ ಹೋಗಿತ್ತು..ರಾಘವ ಹೇಳಿದಂತೆ ಅಮ್ಮ ಸಾಯಲಿಲ್ಲ..ಮಗಳು ತಮ್ಮ ಪಾಲಿಗೆ ಸತ್ತಳೆಂದು ಎಲ್ಲರೂ ಸೇರಿ ನಾನು ಬದುಕಿರುವಾಗಲೇ ನನ್ನ ಪುಣ್ಯ ಕ್ರಿಯೆಗಳನ್ನು ಮಾಡಿ ಉಂಡು ಕೈ ತೊಳೆದುಕೊಂಡರು..

ಹೊಟ್ಟೆಯ ಒಳಗೆ ಎರಡು ಮೂರು ಕೈಗಳು ಓಡಾಡಿದ ಅನುಭವ..ಬಹುಶಹ ಮಗುವನ್ನು ಹೊರ ತೆಗೆಯುತ್ತಿದ್ದಾರೆ..ಇನ್ನೇನು ಒಂಭತ್ತು ತಿಂಗಳ ಯಮಯಾತನೆಯ ಸಿಹಿ ಫಲವನ್ನು ನೋಡುವ ಸಮಯ..ಎದೆ ಜೋರಾಗಿ ಬಡಿದುಕೊಳ್ಳತೊಡಗಿತು..ಹೊಟ್ಟೆಯೊಳಗಿನ ಭಾರವೆಲ್ಲ ಒಮ್ಮೆಲೇ ಹೋದ ಅನುಭವ..ನನ್ನ ಮಗು ನನ್ನನ್ನು ನೋಡಲು ಬಂತೆನಿಸುತ್ತದೆ..ಮಗುವಿನ ಕೂಗು ಕೇಳಿಸಿತು..ಮನಸ್ಸಲ್ಲಿ ಏನೇನೋ ವಿಚಿತ್ರ ಭಾವನೆಗಳು..ಸಾವಿರ ವರ್ಷಗಳ ಕನಸು ನನಸಾದ ಹಾಗೆ..ಕೆಲಕ್ಷಣಗಳಲ್ಲಿ ಮಗುವನ್ನು ನನ್ನ ಸಮೀಪ ತಂದರು..ಸುಂದರವಾದ ಹೆಣ್ಣುಮಗು..ಕಣ್ಣಲ್ಲಿ ನೀರು ತುಂಬಿ ಬಂದಿತು..ರಾಘವ ಹೇಳುತ್ತಿದ್ದ..'ಮಗಳು ನಿನ್ನ ತದ್ರೂಪ' ಎಂದು..ಇನ್ನೊಮ್ಮೆ ನೋಡಿದೆ....ನನ್ನಂತೆಯೇ ಇದ್ದಾಳೆಯೇ.. ಇಲ್ಲ ಎನಿಸಿತು..ಮತ್ತೊಮ್ಮೆ ನೋಡಿದೆ..ಸಂದೇಹವೇ ಇಲ್ಲ..ನನ್ನ ಮಗಳು ನನ್ನಮ್ಮನ ತದ್ರೂಪ..ಕಣ್ಣೀರು ಧಾರಾಕಾರವಾಗಿ ಸುರಿಯತೊಡಗಿತು...

ರಾಘವನೆಂದಂತೆ ನಮ್ಮ ಮದುವೆ ಸುದ್ದಿ ಕೇಳಿದೊಡನೆ ಅಮ್ಮ ಸಾಯಲಿಲ್ಲ...ಆದರೆ..ಅವಳು ಬದುಕಲೂ ಇಲ್ಲ..ಅವಳ ಪಾಲಿಗೆ ನಾನು ಸತ್ತ ಒಂಭತ್ತು ತಿಂಗಳಲ್ಲಿ ಅಮ್ಮನೂ ವಿಧಿವಶಳಾಗಿದ್ದಳು..ಬಹುಶ ಆ ಒಂಭತ್ತು ತಿಂಗಳು ಅವಳು ಮತ್ತೆ ನನ್ನ ಹೆರಿಗೆಯ ನೋವನ್ನು ಅನುಭವಿಸಿರಬೇಕು..ಅಮ್ಮ ಸತ್ತು ನನ್ನ ಮಗಳಾಗಿ ಹುಟ್ಟಿದಳೇ...ಅಳು ತಡೆಯಲಾಗಲಿಲ್ಲ..ಮತ್ತೆ ಹೆರಿಗೆಯ ನೋವು  ಶುರುವಾದ ಹಾಗಾಯಿತು..ಇಲ್ಲ..ಅದಕ್ಕಿಂತ ತೀವ್ರವಾಗಿದೆ...ತಡೆಯಲಾಗಲಿಲ್ಲ...ನನ್ನ ನೋವನ್ನು ತಡೆಯುವ ಶಕ್ತಿ ಈಗ ಯಾವ ಅರಿವಳಿಕೆಗೂ ಇರಲಿಲ್ಲ...