ಅವರನ್ನು ದೂಷಿಸುವಂತಿಲ್ಲ, ಇವತ್ತು ನನ್ನ ಜನ್ಮ ದಿನ ಅನ್ನುವ ಬಗ್ಗೆ ಅವರಿಗೆ ಗೊತ್ತಿರುವುದೇ ಅನುಮಾನ. ಕಳೆದ ವರ್ಷವಷ್ಟೇ ಪರಿಚಯವಾದ ಅವರಿಗೆ ಇವೆಲ್ಲ ಹೇಗೆ ಗೊತ್ತಾಗಬೇಕು. ಬೇರೆಯವರಂತೆ ಫೆಸ್ ಬುಕ್, ಆರ್ಕುಟಲ್ಲಿಹಾಕಿಕೊಂಡಿದ್ದರೆ ತಾನೇ ಗೊತ್ತಾಗಿರೋದು...
ಅಂದ ಹಾಗೆ ನಾನ್ಯಾಕೆ ಫೇಸ್ ಬುಕ್ಕಲ್ಲಿ ಅಕೌಂಟ್ ಮಾಡ ಹೋಗಲಿಲ್ಲ... ಮದುವೆ ಸಮಯದಲ್ಲಿ ಭೂಮಿಕ ಪರಿ ಪರಿಯಾಗಿ ಕೇಳಿಕೊಂಡಳಲ್ಲ... ಅದರಲ್ಲೆಲ್ಲ ನನಗೆ ಆಸಕ್ತಿ ಇಲ್ಲ ಅಂತ ತಪ್ಪಿಸಿಕೊಂಡಿದ್ದೆ. ನಿಜವಾಗಲೂ ನನಗದರಲ್ಲಿ ಆಸಕ್ತಿ ಇರಲಿಲ್ಲವೇ? ಅಥವಾ... ನನ್ನ 'ಭೂತ'ವನ್ನು ಅವಳಿಗೆ ಪರಿಚಯಿಸಲು ನನಗಿಷ್ಟವಿರಲಿಲ್ಲವೇ... ಗೆಳೆಯರೆನಿಸಿಕೊಂಡವರನ್ನೆಲ್ಲಮರೆತು ಹೊಸ ಬದುಕು ಆರಂಭಿಸಲು ಅದಾಗಲೇ ನಾನು ನಿಶ್ಚಯಿಸಿದ್ದೆನೆಲ್ಲ...ಮತ್ತೆ ಅಂತರ್ಜಾಲದಲ್ಲಿ ಕ್ರಿಯಾಶೀಲನಾಗುವುದು ಬೀದಿಯ ಮಾರಿಯನ್ನು ಮನೆಗೆ ಕರೆ ತಂದಂತೆ ಅಂದು ಹೆದರಿದೆನೆ... ಎಲ್ಲಾ ಗೋಜಲು ಗೋಜಲೆನಿಸುತ್ತಿದೆ...
ಇಪ್ಪತ್ತು ವರುಷಗಳಿಗೂ ಹೆಚ್ಚು ಕಾಲ ಜೊತೆಯಾಗಿದ್ದವರಿಂದ ದೂರವಾಗಿ ಬದುಕುವುದು ಸುಲಭವಲ್ಲವೆಂದು ನನಗೂ ತಿಳಿದಿತ್ತು... ಕಳೆದ ಹತ್ತು ವರುಷಗಳಿಂದ ಎಲ್ಲ ಒಳ್ಳೆ ಕೆಟ್ಟ ಕೆಲಸಗಳನ್ನು ಜೊತೆ ಜೊತೆಯಾಗಿಯೇ ಮಾಡಿರಲಿಲ್ಲವೇ... ನಾವು ಆರು ಜನರೂ ಸೇರಿ. ಅದೆಷ್ಟು ಬಾರಿ ಬೆಳಗ್ಗೆ ಎರಡು ಮೂರು ಘಂಟೆಯವರೆಗೂ ಕುಡಿಯುತ್ತಾ ಕುಳಿತಿರಲಿಲ್ಲ. ಯಾವ ವಾರಂತ್ಯದಲ್ಲಾದರು ಒಬ್ಬರನ್ನು ಬಿಟ್ಟು ಮಜಾ ಉಡಾಯಿಸಲು ಹೊರಟಿದ್ದುದು ಸರಿಯಾಗಿ ನೆನಪಿದೆಯೇ... ಖಂಡಿತಾ ಇಲ್ಲ. ಎಲ್ಲವೂ ಜೊತೆ ಜೊತೆಗೆ...ಯಾಕೆ ಅವೆಲ್ಲ ಬದಲಾಯಿತು.. ಅಷ್ಟು ವೇಗವಾಗಿ..
ನನ್ನ ಜೀವನದಲ್ಲಿ ಮೆಲುವಾಗಿ ಬಂದ 'ಸಂಗೀತ' ಯಾಕೆ ಅವರಿಗೆ ಅಪಸ್ವರವಾದಳು? ಅವರಿಗೆ ಬಹುಷಃ ಯಾವತ್ತು ಅರ್ಥವಾಗಲಾರದು, ಸಂಗೀತಳಂಥವಳನ್ನು ಪಡೆಯಲು ಯಾವ ರೀತಿಯ ತಪಸ್ಸು ಮಾಡಬೇಕೆಂದು. ಯಾವ ಕೋನದಿಂದ ನೋಡಿದರೂ ಯಾವ ಸಿನಿಮಾ ನಟಿಯರಿಗಿಂತ ಕಡಿಮೆಯಿರಲಿಲ್ಲ ನನ್ನ ಸಂಗೀತ...ಅಂತಹವಳು ನನ್ನ ಪ್ರೀತಿ ಬಯಸಿ ಬಂದರೆ ಇವರಿಗ್ಯಾಕೆ ಕುಟುಕಿದಂತಾಗುತ್ತಿತ್ತು... ಯಾರೋ ಹೇಳಿದ್ದ ಮಾತು, ನಿಜವಾದ ಗೆಳೆಯರು ಗೊತ್ತಾಗುವುದು ಪರೀಕ್ಷೆಯ ನಂತರವೇ ಅಂತೆ. ಯಾವ ಕಷ್ಟವೂ ಇಲ್ಲದೆ ಆರಾಮವಾಗಿ ತಿಂದು ಕುಡಿಯುವಾಗ ಎಲ್ಲರೂ ಗೆಳೆಯರೇ...
ನನಗಾದರೂ ಸಂಗೀತಳ ಜೊತೆ ಸ್ವಚ್ಚಂದವಾಗಿ ಸಮಯ ಕಳೆಯಲು ನಮ್ಮ ಮನೆಯಲ್ಲದೆ ಬೇರೆಲ್ಲಿ ಆಗುತ್ತಿತ್ತು. ಈ ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಜಿಗಿ ಜಿಗಿ ಅನ್ನುವ ಜನ. ದಿನಕ್ಕೊಂದು ಘಂಟೆ ಆರಾಮವಾಗಿ ಅವಳೊಡನೆ ಪ್ರೇಮ ಸಲ್ಲಾಪ ಮಾಡೋಣವೆಂದರೆ ಇವರಿಗೆ ನನ್ನ ಸಮಸ್ಯೆ ಅರ್ಥವಾಗದೆ? ಬೇರೆ ಸಮಯದಲ್ಲಿ ರಾತ್ರಿ ಹತ್ತು ಹನ್ನೊಂದು ಘಂಟೆಯವರೆಗೆ ಆಫೀಸಿನಲ್ಲಿರುವವರಿಗೆ ನನಗೋಸ್ಕರ ಒಂದು ಘಂಟೆ ತ್ಯಾಗ ಮಾಡಲು ಆಗುತ್ತಿರಲಿಲ್ಲವೇ?
ಒಮ್ಮೊಮ್ಮೆ ಸಂಗೀತ ಹೇಳಿದ್ದೆ ಸರಿ ಅನ್ನಿಸುತ್ತಿತ್ತು. ಅವಳಂಥವಳು ಸಿಕ್ಕಿದುದು ಇವರೆಲ್ಲರಿಗೆ ಒಳಗೊಳಗೇ ಹೊಟ್ಟೆ ಉರಿ. ನಿಜವಾಗಿಯೂ ಗೆಳೆಯರಾಗಿದ್ದರೆ ನನ್ನ ಅಗತ್ಯ ಅವರಿಗೆ ಅರ್ಥವಾಗದಿರುತ್ತಿತ್ತೆ? ಅದಕ್ಕೊಸ್ಕರವಲ್ಲವೇ ಅವಳೂ ಕೂಡ ಇವರಿಂದ ಆದಷ್ಟು ದೂರ ಇರಲು ಬಯಸುತ್ತಿದ್ದುದು.
ಸಂಗೀತ ನನ್ನ ಜೊತೆಯಲ್ಲಿರುವಾಗ ನನಗವರ ಯೋಚನೆಯೇ ಇರಲಿಲ್ಲ ಎಂದು ಆರೋಪಿಸಿದರಲ್ಲ..ನಿಜವೇ? ಕೆಲವು ಬಾರಿ ಅವರು ಕರೆದಾಗ ಹೋಗಲಾಗಲಿಲ್ಲವೆಂದ ಮಾತ್ರಕ್ಕೆ ನಾನವರಿಂದ ದೂರವಾಗಿದ್ದೆನೆ.. ನನಗನ್ನಿಸಿರಲಿಲ್ಲವಲ್ಲ..ಸ್ನೇಹ, ಪ್ರೇಮ ಎರಡನ್ನು ನಿಬಾಯಿಸುವ ಕಷ್ಟದ ಬಗ್ಗೆ ಅವರಿಗೆಲ್ಲಿಂದ ಅರಿವಾಗಬೇಕು...ಸಂಗೀತಳಿಗೆ ಅವರ ಸ್ನೇಹ ಇಷ್ಟವಾಗದಿದ್ದರೆ ಅದರಲ್ಲಿ ನನ್ನದೇನು ತಪ್ಪಿದೆ... ನನಗೆ ಸಂಗೀತಳ ಸಾಮೀಪ್ಯ ಅವರ ಸ್ನೇಹಕ್ಕಿಂತ ಹೆಚ್ಚಾದರೆ ಅದು ತಪ್ಪೇ? ನನ್ನ ಸ್ಥಾನದಲ್ಲಿ ಅವ ರ್ಯಾರಾದರೂ ಇದ್ದಿದ್ದರೆ ಬೇರೆ ತರ ನಡೆಯುತ್ತಿದ್ದರೆ.. ಆ ವಯಸ್ಸೇ ಹಾಗಂತ ಅವರಿಗೆ ತಿಳಿದಿರದ ವಿಷಯವೇ?
ಇಪ್ಪತ್ತು ವರ್ಷಗಳ ಕಾಲ ಜೊತೆ ಜೋತೆಯಾಗಿದ್ದರೂ ನನ್ನನ್ನವರು ಅರ್ಥೈಸಿಕೊಳ್ಳಲು ಯಾಕೆ ವಿಫಲರಾದರು? ಅಥವಾ...ಸಂಗೀತಳ ಮೋಹದಲ್ಲಿ ನಾನೇ ಸ್ನೇಹದ ಎಲ್ಲೆಯನ್ನು ದಾಟಿ ಹೋಗಿದ್ದೆನೇ...ತಿಳಿಯದಾಗಿದೆ...ಎರಡು ವರುಷಗಳ ಕಾಲ ಜೊತೆಯಿದ್ದವಳು ಒಳ್ಳೆಯ ಮದುವೆ ಸಂಬಂಧ ಬಂತೆಂದು ಕಾಲ ಕೆಸರಂತೆ ದೂರ ಸರಿಸಿದಾಗ ಮೊದಲಿನಂತೆ ಅವರ ಬಳಿಯೇ ಹೋದೆನೆಲ್ಲ... ಎಲ್ಲವನ್ನು ಮರೆತು ಮತ್ತೆ ಅವರೊಳಗೊಬ್ಬನಾದೆನಲ್ಲ...ಅವರೂ ಅಷ್ಟೇ ಆತ್ಮೀಯತೆಯಿಂದ ನನ್ನನ್ನು ಬಳಿ ಸೇರಿಸಿದ್ದರಲ್ಲ..
ನಿಜವಾಗಲೂ ಸೇರಿಸಿದ್ದರೆ? ಅದೂ ಸರಿಯಾಗಿ ತಿಳಿಯದಾಗಿದೆ...ನಮ್ಮ ಸಂಬಂಧ ಮೊದಲಿನಂತೆಯೇ ತಿಳಿಯಾಗಿತ್ತೆ? ಅವಕಾಶ ಸಿಕ್ಕಾಗಲೆಲ್ಲ ಸಂಗೀತಳ ವಿಷಯವೆನ್ನೆತ್ತಿ ಹರಿತವಾದ ಮುಳ್ಳಿನಂತೆ ಚುಚ್ಚುತ್ತಿರಲಿಲ್ಲವೇ? ಎಷ್ಟೋ ಬಾರಿ ಅದಕ್ಕೋಸ್ಕರವೇ ಮತ್ತೆ ನನ್ನ ಜೊತೆ ಸೇರಿದ್ದಾರೆ ಅನಿಸುತ್ತಿತ್ತಲ್ಲ. ಒಮ್ಮೊಮ್ಮೆ ಬೇಜಾರಾಗಿ ಹೇಳಿದಾಗ ಎಷ್ಟು ಆರಾಮದಲ್ಲಿ ತಪ್ಪಿಸಿಕೊಳ್ಳುತ್ತಿದ್ದರು, ನಾನೂ ಕೂಡ ಅವರ ಹಾಗೆ ತಮಾಷೆ ಮಾಡುತ್ತಿದ್ದೆ ಎಂದು. ಹೌದು..ನಾನೂ ತಮಾಷೆ ಮಾಡುತ್ತಿದ್ದೆ, ಆದರೆ ಈ ರೀತಿಯಲ್ಲಿ ಚುಚ್ಚುತ್ತಿದ್ದೆನೆ..ಅನ್ನಿಸಲಿಲ್ಲ..ಎಷ್ಟು ಕಷ್ಟವಾದರೂ ಕೂಡ ಹೇಗೆ ಸಹಿಸಿಕೊಂಡಿದ್ದೆ..ಸಹಿಸಿಕೊಳ್ಳದೆ ಬೇರೆ ಯಾವ ಮಾರ್ಗ ತಾನೇ ಇತ್ತು, ಅವರನ್ನು ಬಿಟ್ಟು ಇರುವುದು ಅಷ್ಟು ಸುಲಭದ ಮಾತಾಗಿರಲಿಲ್ಲ...ಅದೂ ಸಂಗೀತಳ ನಶೆ ಇಳಿದ ಮೇಲೆ.. ಈ ಸ್ನೇಹ ಕೂಡಾ ಒಂದು ರೀತಿಯ ಚಟ ಇದ್ದ ಹಾಗೆ ..ಒಮ್ಮೆ ಅದರಲ್ಲಿ ಸಿಕ್ಕಿದರೆ ಮತ್ತೆ ಹೊರ ಬರುವುದು ಕಟಿಣ...
ಎಲ್ಲರು ಒಬ್ಬೊಬ್ಬರಾಗಿ ಮದುವೆಯಾದ ಮೇಲೆ ಅರಿದ್ದ ನಮ್ಮ ತಂಡ ಹನ್ನೊಂದಕ್ಕೇರಿತ್ತು...ತವರನ್ನು ಬಿಟ್ಟು ಬಂದವರು ಹಳೆಯ ಗೆಳೆತನವನ್ನೂ ಬಿಟ್ಟು ನಮ್ಮ ತಂಡದಲ್ಲೇ ಎಷ್ಟು ಸಲೀಸಾಗಿ ಬೆರೆತು ಬಿಟ್ಟಿದ್ದರು... ಒಂದೊಂದು ಸಲ ಎನಿಸುತ್ತಿತ್ತಲ್ಲ, ಸಂಗೀತಳೇಕೆ ಇವರಂತಾಗಲಿಲ್ಲ ಎಂದು...ನಾನೇ ಯಾಕೆ ಇವರನ್ನು ಬಿಟ್ಟು ಅವಳ ಜೊತೆ ಅವಳ ಗುಂಪಿನಲ್ಲಿ ಸೇರಬೇಕಾಯಿತು? ಉತ್ತರವಿರಲಿಲ್ಲ ನನ್ನ ಪ್ರಶ್ನೆಗಳಿಗೆ...
ಗುಂಪು ದೊಡ್ಡದಾದ ಹಾಗೆ ನನ್ನ ಸಮಸ್ಯೆಯೂ ದೊಡ್ಡದಾಯಿತು...ಐದು ಜನಕ್ಕೆ ತಿಳಿದಿದ್ದ ಸತ್ಯಗಳು ಈಗ ಹತ್ತು ಜನರಲ್ಲಿ ಹಂಚಿ ಹೋಗಿತ್ತು...ಕಾಲೆಳೆಯುವವರ ಜೊತೆ ಕಾಲು ಕೊಟ್ಟು ಬೀಳಿಸುವವರೂ ಸೇರಿದ್ದರು...ಅಷ್ಟಕ್ಕೇ ಅದು ನಿಂತಿದ್ದರೆ ಸಾಕಿತ್ತು...ನಾನೂ ಖುಷಿಯಾಗಿಯೇ ಅವರ ಜೊತೆ ಇರುತ್ತಿದ್ದೆ...ಆದರೆ...
ಎಲ್ಲರಂತೆ ಮದುವೆಯಾಗಿ ಹಿಂದಿನದನ್ನೆಲ್ಲ ಮರೆಯಲು ನಾನು ತಯಾರಾಗಿದ್ದೆ. ಆವಾಗಲೇ ಬಂದಿತ್ತಲ್ಲ ಸಂಧ್ಯಾಳ ಸಂಬಂಧ..ಜಾತಕವೆಲ್ಲ ಕೂಡಿ ಬಂದು ಮನೆಯವರೆಲ್ಲರ ಒಪ್ಪಿಗೆ ಪಡೆದ ಮೇಲೆ ನಾನು ತಿಳಿಸಿದ್ದು, ನನ್ನ ಗೆಳೆಯರ ಬಳಗದಲ್ಲಿ...ಅದಾದ ಕೆಲವೇ ದಿನಗಳಲ್ಲಿ ಮುರಿದು ಬಿದ್ದಿತ್ತಲ್ಲ ಸಂಧ್ಯಾಳ ಸಂಬಂಧ...ಅಲ್ಲಿಯ ತನಕ ಚೆನ್ನಾಗಿಯೇ ಮಾತನಾಡಿದ ಸಂಧ್ಯಾಳಿಗೆ ಇದ್ದಕ್ಕಿದ್ದ ಹಾಗೆ ಏನಾಯಿತು...ನನಗೆ ತಿಳಿಯದಾಯಿತಲ್ಲ ಕೆಲ ದಿನಗಳ ತನಕ..ನನ್ನ 'ಭೂತ'ದ ಬಗ್ಗೆ ಅವಳಿಗೆ ಯಾರಾದರೂ ಚುಚ್ಚಿರಬಹುದೇ...ಹಾಗೆನಾದಲೂ ಇದ್ದಲ್ಲಿ ನಮ್ಮದೇ ಗುಂಪಿನ ಶಾಂತಿಯಲ್ಲದೆ ಇನ್ನಾರು ಮಾಡಿರಲು ಸಾಧ್ಯ? ನಮ್ಮಿಬ್ಬರ ಪರಿಚಯವಿದ್ದುದು ಅವಳೊಬ್ಬಳಿಗೆ ತಾನೇ?...
ನನಗಿದು ಮೊದಲು ಹೊಳೆಯಲೇ ಇಲ್ಲವಲ್ಲ...ಅವರ ಚುಚ್ಚುಮಾತುಗಳ ನೋವಿನಲ್ಲಿ ಸೇಡೂ ಸೇರಿರುವುದು ನನಗರಿವಾಗದೆ ಹೋಯಿತಲ್ಲ..ಸಂಧ್ಯಾಳ ಸಂಬಂಧ ಮುರಿಯಲು ಶಾಂತಿಯಲ್ಲದೆ ಬೇರಾರು ಕಾರಣವಾಗಿರಲು ಸಾಧ್ಯ..ಒಂದೊಮ್ಮೆ ಅವಳಿಂದಾಗಿ ಈ ಸಂಬಂಧ ಮುರಿದು ಬಿದ್ದಿಲ್ಲ ಅಂದರೂ, ಮುಂದೊಮ್ಮೆ ನನ್ನ ಪತ್ನಿಯೊಡನೆ ನನ್ನ 'ಭೂತ'ವನ್ನು ಕೆದಕದೆ ಇರಬಲ್ಲುರೆ...ಮಾಡುವುದನ್ನು ಮಾಡಿ ಕೊನೆಗೆ ತಮಾಷೆಗೆ ಹೇಳಿದೆ ಅಂತ ಕೈ ತೊಳೆದುಕೊಂಡರೆ...ನನ್ನ ಭವಿಷ್ಯದ ಗತಿ...ಯೋಚನೆಯಲ್ಲಿ ಏನು ಮಾಡುವುದೆಂದೇ ತೋಚಿರಲಿಲ್ಲ...
ಕ್ರಮೇಣ ನನಗರಿವಿಲ್ಲದೆ ನಾನು ಅವರಿಂದ ದೂರವಾಗತೊಡಗಿದ್ದೆ...ಅಲ್ಲ..ಬೇಕಂತಲೇ ನನ್ನ ಭವಿಷ್ಯದ ಭದ್ರತೆಗಾಗಿ ಅವರಿಂದ ದೂರ ಸಾಗತೊಡಗಿದೆನ...ಹೌದೆನಿಸುತ್ತಿದೆ..ಹಳೆಯದೆಲ್ಲವ ಮರೆಯಲು ನನ್ನ ಗೆಳೆಯರಿಂದ ದೂರ ಹೋಗದೆ ಬೇರೆ ಯಾವ ಮಾರ್ಗ ತಾನೇ ನನ್ನಲ್ಲಿ ಉಳಿದಿತ್ತು?
ನನ್ನ ಮನಸ್ಸಿನ ಕೋಲಾಹಲ ಇವರಿಗೆ ಯಾಕೆ ಅರ್ಥವಾಗುತ್ತಿಲ್ಲ...ಉಪಯೋಗಕಿಲ್ಲದ ಸ್ನೇಹ ಬೇಡವೆಂದು ದೂರ ಹೊರಟರೂ ಜಿಗಣೆಯಂತೆ ಕಚ್ಚಿ ಮತ್ತೆ ಯಾಕೆ ನನ್ನ ಬೆನ್ನ ಹಿಂದೆ ಬೀಳುತ್ತಿದ್ದರು...ನನ್ನ ಮೇಲಿನ ಪ್ರೀತಿಯಿಂದಲೇ..ಅಥವಾ ನಾನು ಮತ್ತೆ ಸಂತೋಷವಾಗಿರುವುದು ಅವರಿಗೆ ಬೇಡವಾಗಿಯೇ..ಆ ಎರಡು ವರ್ಷಗಳಲ್ಲಿ ನನ್ನಿಂದ ತಪ್ಪಾಗಿದ್ದರೂ ಕ್ಷಮೆಯಿರದ ತಪ್ಪೇ ಅದು?
ಮುಂದೆ ಕೆಲ ದಿನಗಳಲ್ಲಿ ಭೂಮಿಕಾಳ ಸಂಬಂಧ ಬಂದಾಗ ನನ್ನಿಂದಾದಷ್ಟು ಜಾಗ್ರತೆ ವಹಿಸಿದ್ದೆ...ಹಳೆಯ ಗೆಳೆಯರನ್ನು ನನ್ನ ಹೊಸ ಸಂಬಂಧದಲ್ಲಿ ತರಬಾರದೆಂದು...ಆದರೆ..ಅವರಿಗ್ಯಾಕೆ ಅದು ಅರ್ಥವಾಗಲೇ ಇಲ್ಲ...ಅದೆಷ್ಟು ಬಾರಿ ಫೋನ್ ಮಾಡಿಲ್ಲ..ಒಮ್ಮೆಯೂ ಎತ್ತುವ ಪ್ರಯತ್ನ ಮಾಡಿರಲಿಲ್ಲ, ನನ್ನ ಫೋನ್ ನಂಬರನ್ನು ಸಹ ಬದಲಾಯಿಸಿದ್ದೆ..ಆದರೂ ನನ್ನ ಮನಸಿನ ಇಚ್ಛೆ ಅವರಿಗೆ ಅರ್ಥವಾಗದೆ ಹೋಯಿತೇ..ನನ್ನ ಮದುವೆಗೆ ಎರಡು ವಾರ ಇರುವಂತೆ ಎಲ್ಲಿಂದಲೋ ಭೂಮಿಕಳ e-ವಿಳಾಸ ಪತ್ತೆ ಹಚ್ಚಿ ನನಗೂ ಸೇರಿ ಶುಭಾಶಯದ ಇಮೇಲ್ ಕಳಿಸಿದರಲ್ಲ...ಶುಭಾಶಯ ಹೇಳುವುದೇ ಅವರ ಉದ್ದೇಶವಾಗಿತ್ತೆ..ಇಲ್ಲ ನನ್ನ ಮದುವೆ ಮುರಿಯುವ ನಕ್ಷೆ ಅದಾಗಿತ್ತೆ...ಶುಭಾಷಯ ಕಳಿಸಲು ಯಾವತ್ತೋ ಹಿಂದೆ ನಾವೆಲ್ಲಾ ಒಟ್ಟಾಗಿ ಕುಡಿಯಲು ಉಪಯೋಗಿಸಿದ ಸಂದೇಶವನ್ನೇಕೆ ಬಳಸಿದರು...ಮೊದಲ ನೋಟದಲ್ಲಿ ನನಗೂ ಏಕೆ ಅದು ಹೊಳೆಯಲಿಲ್ಲ..ಭೂಮಿಕ ಫೋನ್ ಮಾಡಿ ಸುಳ್ಳು ಹೇಳಿ ಮದುವೆಯಾಗುತ್ತಿದ್ದಿಯ ಎಂದು ಗದರಿಸಿದ ಮೇಲಲ್ಲವೇ ನನಗದು ಅರಿವಾಗಿದ್ದುದು...ಮತ್ತೆ ಅವಳ ಕೋಪ ತಣಿಸಲು ನಾನು ಜೀವಮಾನದಲ್ಲಿ ಕಲಿತಿದ್ದನ್ನೆಲ್ಲ ಉಪಯೋಗಿಸಬೇಕಾಯಿತಲ್ಲ..
ಅವತ್ತು ನನಗೆ ಬಂದಷ್ಟು ಕೋಪ ಬಹುಷಃ ಜೀವಮಾನದಲ್ಲಿ ಮುಂದೆ ಯಾವತ್ತೂ ಬರಲಿಕ್ಕಿಲ್ಲ..ಮೊದಲೇ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಹಾಕುವ ಕೆಲಸವೇಕೆ ಮಾಡಿದರವರು...ಮದುವೆಯ ತಯಾರಿಯೆಲ್ಲ ಮುಗಿಯುತ್ತ ಬಂದರೂ ತಮಗೆ ತಿಳಿಸಲಿಲ್ಲವೆಂದೇ? ಕೋಪದಲ್ಲಿ ಪ್ರತಿಯೊಬ್ಬರಿಗೂ ಫೋನ್ ಮಾಡಿ ಮನಸ್ಸು ತ್ರಪ್ತಿಯಾಗುವಷ್ಟು ಉಗುಳಿದಾಗ ಹೇಗೆ ಬೆಕ್ಕಿನಂತೆ ಕಣ್ಣು ಮುಚ್ಚಿಕೊಂಡರು..ಕುಡಿಯುವ ವಿಷಯ ಇರುವ ಸಂದೇಶ ಅದರಲ್ಲಿದ್ದುದು ತಿಳಿದಿಲ್ಲ ಎಂಬುದಾಗಿ...ನಂಬಬೇಕಿತ್ತೆ ನಾನು ಅದನ್ನೆಲ್ಲ..ಇಷ್ಟಾದ ಮೇಲೂ...ಮತ್ತೊಮ್ಮೆ ನನ್ನ ತಂಟೆಗೆ ಬರಬೇಡಿ ಅಂದು ಕಟುವಾಗಿ ಎಚ್ಚರಿಸಬೇಕಾಯಿತಲ್ಲ..ಇಪ್ಪತ್ತೆರಡು ವರುಷ ನನ್ನ ಜೊತೆ ಜೋತೆಯಾಗಿದ್ದವರನ್ನು...
ಇದೀಗ ಎರಡು ವರ್ಷಗಳಾಯಿತು...ಯಾರ ಕಿರಿಕಿರಿಯೂ ಇರದೆ..ಭೂಮಿಕಳ ಜೊತೆ ನಮ್ಮದೇ ಹೊಸ ಲೋಕ ನಿರ್ಮಿಸಿಕೊಂಡು...ಆದರೆ ನಾನು ಬಯಸಿದ್ದು ಪಡೆದು ಕೊಂಡೆನೆ..ತಿಳಿಯುತ್ತಿಲ್ಲ.. ಎಲ್ಲ ಇದ್ದರೂ ಕೂಡ ಏನೋ ಅಮೂಲ್ಯವಾದದನ್ನು ಕಳೆದುಕೊಂಡ ಅನುಭವ...ಮತ್ತೆ ಅವರೊಡನೆ ಹೋಗೋಣವೆಂದರೂ ಹೋಗಲಾರದ ಅಸಹಾಯಕತೆ..ಪರಿಸ್ಥಿತಿಯ ಕೈಗೊಂಬೆಯಾಗಿ ಪರಿತ್ಯಕ್ತನಾದೆನೆ, ಇಲ್ಲ ಅಂತಹ ಪರಿಸ್ಥಿತಿಯಲ್ಲಿತಳ್ಳಲ್ಪಟ್ಟೆನೆ...ಇನ್ನೂ ನಿರ್ಧರಿಸಲಾಗದ ಗೊಂದಲ...