'ಪ್ರಿಯ ಸೂರಜ್, ನಿನಗೆ ನನ್ನ ನಿರ್ಧಾರದ ಮೇಲೆ ಆಶ್ಚರ್ಯವಾಗಿದೆಯೋ, ದುಃಖವಾಗಿದೆಯೋ, ಹೆಮ್ಮೆಯೆನಿಸಿದೆಯೋ ತಿಳಿಯುವ ಕುತೂಹಲ. ಆದರೆ ಏನು ಮಾಡಲಿ, ತಿಳಿಯದ ಲೋಕದ ಪ್ರಯಾಣ ಆರಂಭಿಸಿದ್ದಾಗಿದೆ. ಮೊದಲೇ ನಿನ್ನಲ್ಲಿ ಹೇಳಿದ್ದಿದ್ದರೆ ಈ ಮಾರ್ಗ ಹಿಡಿಯಲು ಬಿಡುವವನಲ್ಲ ಎಂದು ಚೆನ್ನಾಗಿ ಗೊತ್ತಿದೆ. ನಿನ್ನನ್ನೆಂದೂ ನಾನು ವಾದದಲ್ಲಿ ಗೆದ್ದವನಲ್ಲ. ಆದರೆ ನಿನ್ನ ನೆರಳಲ್ಲಿ ನನ್ನತನ ಕಳೆದುಕೊಂಡವನಿಗೆ ನೀನು ಯಾವ ರೀತಿ ಆಲೋಚಿಸುವೆ ಎಂಬ ಅರಿವು ಕೊಂಚವಾದರೂ ಬಂದಿದೆ. ನನ್ನ ಪರಿಸ್ಥಿತಿಯಲ್ಲಿ ನೀನು ಕೂಡ ಇಂತಹುದೇ ಕೆಲಸಕ್ಕೆ ಕೈ ಹಾಕುತ್ತಿ ಎಂದು ಮನಸ್ಸು ಒತ್ತಿ ಒತ್ತಿ ಹೇಳುತ್ತಿತ್ತು. ಅದಕ್ಕೆ ನಿನ್ನಲ್ಲಿ ಎಲ್ಲವನ್ನು ಮುಚ್ಚಿಟ್ಟು ಮೊದಲ ಬಾರಿ ನಾನು ಏಕಾಂಗಿಯಾಗಿ ಮುನ್ನೆಡೆಯುತ್ತಿದ್ದೇನೆ. ಯಾವತ್ತು ನೆರಳಿನಂತೆ ನಿನ್ನ ಹಿಂದಿದ್ದವನಿಗೆ ಮೊದ ಮೊದಲು ಕಷ್ಟವೆನಿಸಿತು. ದಾರಿ ಕ್ರಮಿಸಿದಂತೆ ಎಲ್ಲ್ಲವೂ ತಾನೇ ತಾನಾಗಿ ತೆರೆದು ಕೊಂಡಿತು. ನನ್ನ ಸಾವು ಯಾರನ್ನೆಲ್ಲಾ ದಾರಿಗೆ ತರುತ್ತದೋ ತಿಳಿದಿಲ್ಲ, ಆದರೆ ನಿನ್ನನಂತೂ ಸರಿ ದಾರಿಗೆ ತರುತ್ತೆಂದು ನಂಬಿರುತ್ತೇನೆ. ಇಲ್ಲದಿದ್ದರೆ ನಿನ್ನನ್ನು ಕೇಳದೆ ನಾನು ಬಹು ದೊಡ್ಡ ತಪ್ಪು ಮಾಡಿದ್ದೆನೆನ್ದುಕೊಳ್ಳುತ್ತೇನೆ.
ನಿನಗಿನ್ನೂ ನೆನಪಿರಬಹುದು, ನಮ್ಮ ಸ್ನೇಹದ ಆರಂಭದ ದಿನಗಳು. ಹೊಸದಾಗಿ ಕೆಲಸಕ್ಕೆ ಸೇರಿದ ನಾನು ಮನೆಯವರ ಬಂಧನದಿಂದ ಆಗಿನ್ನೂ ಕಳಚಿಕೊಂಡಿರಲಿಲ್ಲ. ನನ್ನ ಕಾಲ ಮೇಲೆ ನಾನು ನಿಂತಿದ್ದರೂ ಕೂಡ ಮನೆಯವರ ಮೇಲಿನ ಭಯ ಒಂದಿನಿತೂ ಕಡಿಮೆಯಾಗಿರಲಿಲ್ಲ. ಬದುಕಿನಲ್ಲಿ ಸರಿ ಯಾವುದು ತಪ್ಪು ಸರಿ ಯಾವುದೆಂದು ಅವರು ಹೇಳಿದ ಹಾದಿಯಲ್ಲೇ ನಡೆಯುತ್ತಿದ್ದೆ. ಅದರಿಂದಾಗಿಯೇ ನಿನ್ನಿಂದ ಹೊಸ ಜಗತ್ತಿಗೆ ತೆರೆದು ಕೊಳ್ಳುವ ಮುನ್ನ ಇನ್ನಿಲ್ಲದಂತೆ ಪ್ರತಿ ಬಾರಿ ಕೂಡ ನಿನ್ನನ್ನು ತಡೆ ಹಿಡಿಯಲು ಪ್ರಯತ್ನಿಸಿದ್ದೆ. ಜೊತೆಗೆ ನಿನ್ನನ್ನು ಬದಲಾಯಿಸುವ ಪ್ರಯತ್ನಕ್ಕೂ ಕೈ ಹಾಕಿದ್ದೆ. ಆದರೆ ನಿನ್ನಲ್ಲಿ ವಾದ ಮಾಡಿ ಗೆಲ್ಲುವ ಶಕ್ತಿ ನನ್ನಲ್ಲಿರಲಿಲ್ಲ. ವಾದ ಮಾಡಲು ನನ್ನದೆನ್ನುವ ಆದರ್ಶಗ ಳಾಗಲಿ, ನಂಬಿಕೆಗಳಾಗಲಿ ಅವಾಗಿರಲಿಲ್ಲ. ಮನೆಯವರು, ಗುರು ಹಿರಿಯರು ಹೇಳಿದ್ದೆಲ್ಲ ನಮ್ಮ ಒಳ್ಳೆಯದಕ್ಕೆಂದು ತಿಳಿದಿದ್ದೆ. ಯಾವತ್ತೂ ಪರಾಮರ್ಶಿಸಿ ನೋಡಿರಲು ಹೋಗಿರಲಿಲ್ಲ್ಲ. ಬೆಂಗಳೂರಿನ ಟ್ರಾಫಿಕ್ ನ ಹೊಗೆಗಿಂತ ಈ ಸಿಗರೇಟಿನ ಹೊಗೆಯೇ ವಾಸಿಯೆಂದು ನೀನು ಅದನ್ನು ಸಮರ್ಥಿಸಿಕೊಂಡಾಗ ಯಾವ ರೀತಿ ಅದನ್ನು ವಿರೋಧಿಸಬೇಕೆಂದು ನನಗೆ ತಿಳಿದಿರಲಿಲ್ಲ. ನನ್ನೆಲ್ಲ ಉತ್ತರಗಳಿಗೂ ನಿನ್ನಲ್ಲಿ ಪ್ರತ್ಯುತ್ತರವೊಂದು ತಯಾರಾಗಿರುತ್ತಿತ್ತು. ನನಗಿಂತ ಬುಧ್ಧಿವಂತನಾದ ನಿನಗೆ ಅದೆಲ್ಲ ತಿಳಿಯದ ವಿಚಾರಗಳಾಗಿರಲಿಲ್ಲ. ಕೊನೆಗೆ ಸರಿ ತಪ್ಪುಗಳ ನಡುವಿನ ರೇಖೆ ಶಿಥಿಲವಾಗಿ ನಾನೂ ನಿನ್ನ ಹಾದಿಗೇ ಬಂದಿದ್ದೆ. ನಿನ್ನಷ್ಟೇ ನಾನು ಕೂಡ ಸಿಗರೇಟಿನ ಹೊಗೆಯನ್ನು ಆಸ್ವ್ವಾದಿಸಿದ್ದೆ. ಪ್ರತಿ ವಾರಾಂತ್ಯದಲ್ಲಿ ಕೂಡ ನಿನಗೆ ಸರಿ ಸಮನಾಗಿ ಕುಡಿಯುವುದರಲ್ಲಿ ತೊಡಗಿದ್ದೆ. ಆದರದು ಅಲ್ಲಿಗೆ ನಿಲ್ಲಲಿಲ್ಲ. ನಿನಗೆ ಪ್ರಪಂಚದ ಪ್ರತಿಯೊಂದು ಸುಖವನ್ನೂ ಅನುಭವಿಸಿ ನೋಡಬೇಕಿತ್ತು. ನಿನ್ನೊಡನೆ ಸೇರಿ ನಾನೂ ಕೂಡ ಮನಸ್ಸಿನ್ನ ವಾಂಚೆಗಳ ಬೆನ್ನತ್ತುವುದನ್ನು ಕಲಿತೆ. ನಾನು ಮಾಡುತ್ತಿರುವುದು ತಪ್ಪು ಎಂದು ಕೆಲವೊಮ್ಮೆ ಅನಿಸುತ್ತಿದ್ದರೂ ಕೂಡ ಅದರಿಂದ ಸಿಗುವ ಆ ಆನಂದ ನನ್ನ ವಿವೇಚನೆಯನ್ನು ಕಟ್ಟಿ ಹಾಕುತ್ತಿತ್ತು. ಒಮ್ಮೊಮ್ಮೆ ಎಲ್ಲವನ್ನು ಮರೆತು ಮೊದಲಿನಂತಾಗುವ ಎಂದರೂ ನಿನ್ನಲ್ಲಿ ವಾದ ಮಾಡಿ ನಾವು ನಡೆಯುತ್ತಿರುವ ಹಾದಿ ತಪ್ಪು ಎಂದು ನನ್ನನ್ನು ನಂಬಿಸಲೇ ನನ್ನಲ್ಲಾಗುತ್ತಿರಲಿಲ್ಲ. ಇನ್ನು ಮಾಡಿದ ತಪ್ಪೇ ಅರಿವಾಗದೆ ಸರಿಯಾಗುವ ಮಾತಾದರೂ ಎಲ್ಲಿಂದ. ಈ ಕ್ಷಣದಲ್ಲಿ ಅನಿಸುತ್ತಿದೆ, ಆ ಎಲ್ಲ ಸಂದರ್ಭದಲ್ಲೂ ನಾನು ಸರಿಯಾಗಿದ್ದೆ. ನನ್ನ ವಿಚಾರಗಳಿಗೆ ನನ್ನಲ್ಲಿ ಸಮರ್ಥನೆ ಇಲ್ಲದಿದ್ದರೂ ಕೂಡ ಅವು ನನ್ನ ಒಳಿತಿಗೆ ಆಗಿತ್ತು. ವಾದದಿಂದ ಇನ್ನೊಬ್ಬರ ಮನಸ್ಸಿನ ಸರಿ ತಪ್ಪುಗಳ ಕಲ್ಪನೆಯನ್ನು ಬದಲಾಯಿಸಬಹುದು, ಅಷ್ಟೇ. ಆದರೆ ಅದರಿಂದ ಸರಿ ತಪ್ಪುಗಳನ್ನೇ ಬದಲಾಯಿಸಲಾಗುವುದಿಲ್ಲ. ನಿನ್ನಿಂದ ನಾನು ಸಾಯುವ ಹಾಗಾಯ್ತು ಎಂದು ಆರೋಪ ಮಾಡುತ್ತಿಲ್ಲ. ನೀನು ನನ್ನನ್ನು ಕೆಟ್ಟವನಾಗಿಸಿದಿ ಎಂದೂ ಹೇಳುತ್ತಿಲ್ಲ. ನನ್ನಲ್ಲಿ ಮನೆ ಮಾಡಿದ್ದ ದೌರ್ಬಲ್ಯಗಳನ್ನು ಬಡಿದು ಎಬ್ಬಿಸಿದ್ದರೆ ಅದರಲ್ಲಿ ನಿನ್ನನ್ನು ದೋಷಿಯಾಗಿ ಕಾಣಲು ಸಾಧ್ಯವಿಲ್ಲ. ನೀನಲ್ಲದಿದ್ದರೆ ಇನ್ನೊಬ್ಬನಿಂದ ಅವನ್ನೆಲ್ಲ ಕಲಿಯುತ್ತಿದ್ದೆ.
ವರ್ಷದ ಹಿಂದೆ ನೀನು ನನಗೆ ಡ್ಯಾನ್ಸ್ ಬಾರಿನ ಹುಡುಗಿಯರ ಪರಿಚಯ ಮಾಡಿದ ನಂತರ ನಾನು ನನ್ನತನವನ್ನು ಸಂಪೂರ್ಣ ಕಳೆದುಕೊಂಡಿದ್ದೆ. ರಂಗು ರಂಗಿನ ಬೆಳಕಿನಲ್ಲಿ ಆ ಸುಂದರಿಯರು ಮೈಗೆ ಕಿಚ್ಚು ಹಚ್ಚುವಂತೆ ಮಾದಕವಾಗಿ ಹೆಜ್ಜೆಹಾಕುತ್ತಿರುವಾಗ ನಾನು ಹೊಸದೊಂದು ಲೋಕವನ್ನು ಸೇರುತ್ತಿದ್ದೆ. ಆ ಮಾದಕ ವಾತಾವರಣದ ಬಲೆಯಲ್ಲಿ ಸಿಲುಕಿ ಹಿಂತಿರುಗಿ ಬರದಷ್ಟು ಮುಂದೆ ಹೋಗಿದ್ದೆ. ಬಯಕೆಗಳನ್ನು ಯಾವತ್ತೂ ಬಂಧಿಸಿ ಇಡಬಾರದೆಂಬ ನಿನ್ನ ವಿಚಾರಲಹರಿಯಂತೆ ಹಣದ ಹೊಳೆ ಹರಿಸಿ ನನ್ನ ಕಾಮ ತ್ರ್ರಷೆಯನ್ನು ತೀರಿಸಿಕೊಳ್ಳುತ್ತಿದ್ದೆ. ರಾತ್ರಿಯ ಜಗಮಗಿಸುವ ಬೆಳಕಿನಲ್ಲಿ ಕುಣಿಯುವ ಸುಂದರಿಯರು ನನ್ನ ತೋಳತೆಕ್ಕೆಯಲ್ಲಿ ಬಂಧಿಯಾಗಿರುವಾಗ ಜಗವನ್ನೇ ಜಯಿಸಿದ ಆನಂದ ದೊರೆಯುತ್ತಿತ್ತು. ಆ ಪ್ರತಿ ಕ್ಷಣದಲ್ಲೂ ನಿನಗೆ ಸಾವಿರ ಸಾವಿರ ಕೃತಜ್ಞತೆ ಹೇಳುತ್ತಿದ್ದೆ. ನೀನಲ್ಲದಿದ್ದರೆ ಆ ಸುಖವನ್ನು ನಾನು ಕನಸಿನಲ್ಲೂ ಕಲ್ಪಿಸಲು ಸಾಧ್ಯವಿರಲಿಲ್ಲ.
ಮೆಲುವಾಗಿ ಮದ್ಯ ಹೀರಿ, ಉರಿಯುವ ಕಾಮವನ್ನು ಅವರ ಮೃದುವಾದ ದೇಹದಿಂದ ನಂದಿಸಿ ಆನಂದದಿಂದ ತುಟಿಗೆ ಸಿಗರೇಟಿನ ಕೊನೆಯ ದಮ್ಮಿನ ಶಾಖ ತಲುಪುವಾಗ, ಯಾವುದೊ ಕನಸಿನ ಲೋಖದಲ್ಲಿ ತೇಲಿದ ಅನುಭವವಾಗುತ್ತಿತ್ತು. ಪ್ರತಿ ಬಾರಿಯ ಅನುಭವ ಸಹ ಹಿಂದಿನದಕ್ಕಿಂತ ಸಿಹಿಯಾದಂತನಿಸುತ್ತಿತ್ತು. ಕಳೆದ ಒಂದು ವರ್ಷದಲ್ಲಿ ಎಷ್ಟು ಬಾರಿ ಸುಖದ ಪರಾಕಾಷ್ಟೆ ತಲುಪಿದೇನೋ, ನೆನಪಿನಲ್ಲಿ ಸಹ ಉಳಿದಿಲ್ಲ. ಆದರದು ಬಹುಕಾಲ ಉಳಿಯಲಿಲ್ಲ. ತಿಂಗಳ ಹಿಂದೆ ಆರೋಗ್ಯ ಸ್ವಲ್ಪ ಏರುಪೇರಾದಾಗ ನಿನಗೆ ತಿಳಿಯದಂತೆ ಗುಪ್ತವಾಗಿ ರಕ್ತ ಪರೀಕ್ಷೆ ಮಾಡಿದಾಗ ತಿಳಿಯಿತು, ಆ ಸುಖದೊಂದಿಗೆ ಬರ ಬಾರದ ಖಾಯಿಲೆಯನ್ನೂ ಹೀರಿದ್ದೆನೆಂದು. ಒಮ್ಮೆ ಆಕಾಶವೇ ಕಳಚಿಬಿದ್ದಂತೆ ಅನ್ನಿಸಿತು. ಏನು ಮಾಡುವುದೆಂದೇ ನನಗೆ ತೋಚಲಿಲ್ಲ. ಪ್ರತಿಬಾರಿ ಸಹ ಎಲ್ಲ ರೀತಿಯಲ್ಲಿ ನೋಡಿಕೊಂಡೆ ಮುಂದಿನ ಹೆಜ್ಜೆ ಇಡುತ್ತಿದ್ದೆ. ಎಲ್ಲಿ ಜಾರಿದೇನೋ ತಿಳಿಯಲಿಲ್ಲ. ಬಿದ್ದ ಮೇಲೆ ಎಲ್ಲಿ ಜಾರಿದನೆಂದು ತಿಳಿಯುವುದರಲ್ಲಿ ಸಹ ಅರ್ಥವಿರಲಿಲ್ಲ, ಏಳಲು ಅವಕಾಶವೇ ಇರದಷ್ಟು ಆಳಕ್ಕೆ ನಾನು ಬಿದ್ದಿದ್ದೆ.
ವಿಷಯ ತಿಳಿದ ಮೇಲೆ ಆರೋಗ್ಯ ಇನ್ನಷ್ಟು ಹದಗೆಡಲು ಶುರುವಾಯಿತು. ನಿಜವಾಗಲೂ ಹೀಗೆ ಆಗುತ್ತಿದೆಯೋ ಅಥವಾ ಮಾನಸಿಕವಾಗಿ ನಾನು ನಿಷಕ್ತನಾಗುತ್ತಿದ್ದೇನೋ ತಿಳಿಯಲಿಲ್ಲ. ಖಾಯಿಲೆಯ ಅರಿವೇ ನನ್ನ ಅರ್ಧ ಪ್ರಾಣವನ್ನು ತಿಂದಿತ್ತು. ಕ್ಷಣಿಕ ಸುಖದ ಬೆನ್ನು ಹತ್ತಿ ಮೇಲೆಳದಷ್ಟು ಆಳಕ್ಕೆ ಬಿದ್ದ ನನ್ನ ಮೇಲೆ ಹೇಸಿಗೆಯಾಗಿ ಪ್ರತಿ ಕ್ಷಣಕ್ಷಣವೂ ಸಾವಿನ ನೋವು ಅನುಭವಿಸುತ್ತಿದ್ದೆ. ನನಗೆ ತಿಳಿದಿತ್ತು, ತುಂಬಾ ದಿನಗಳವರೆಗೆ ಬೇರೆಯವರಿಂದ ಇದನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂಬುದಾಗಿ. ವಿಷಯ ಬೇರೆಯವರಿಗೆ ತಿಳಿದ ಮೇಲೆ ನಾನು ಬದುಕಿ ಉಳಿಯುದರಲ್ಲಿ ಯಾವುದೇ ಅರ್ಥವಿರಲಿಲ್ಲ. ಬಹುಷಃ ನೀವು ಕೂಡ ನನ್ನಲ್ಲಿ ಮೊದಲಿನಷ್ಟೇ ಸ್ನೇಹದಿಂದ ಇರಲು ಸಾಧ್ಯವಿರಲಿಲ್ಲ. ಒಮ್ಮೆಲೇ ಎಲ್ಲವನ್ನೂ ಕಳೆದುಕೊಂಡ ಅನುಭವವಾಯಿತು. ಕಳೆದ ಒಂದು ವರ್ಷದಲ್ಲಿ ನಾನು ಅನುಭವಿಸಿದ ಸುಖ ಈ ನೋವನ್ನು ಒಂದು ಕ್ಷಣ ಕೂಡ ಮರೆ ಮಾಡಲು ಸಾಧ್ಯವಿರಲಿಲ್ಲ. ನನ್ನ ಮೇಲೆ ನನಗೆ ಬೇಸರ ಬಂದಿತು. ಎಲ್ಲಾದರೂ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ಮಾರ್ಗವೆನಿಸಿತು. ಆದರೆ ಆತ್ಮಹತ್ಯೆ ಮಾಡಿಕೊಂಡರೂ ಬೇರೆಯವರಿಗೆ ಇದರ ಬಗ್ಗೆ ತಿಳಿಯದಿರದು ಎಂಬ ನಂಬಿಕೆಯಿರಲಿಲ್ಲ. ಆಶ್ಚರ್ಯವೆನಿಸಿತು, ನಾನು ಸತ್ತಮೇಲಿನ ಚಿಂತೆ ನನಗ್ಯಾಕೆ ಎಂದು. ಆದರೆ ನನ್ನ ಸಾವಿಗಿಂತ ನನ್ನ ಹೆಸರಿನ ಸಾವೇ ಹೆಚ್ಚು ನೋವು ಕೊಡುವುದೆಂದು ಆಗ ಅರಿವಾಯಿತು. ಅದಕ್ಕೆ ನನಗೆ ಆ ಖಾಯಿಲೆ ತಡೆಯಲಾರದ ನೋವು ಕೊಡುತ್ತಿದ್ದುದು.
ಎಷ್ಟೋ ಬಾರಿ ನಿನ್ನಲ್ಲೆಲ್ಲಾ ಹೇಳಿಕೊಳ್ಳೋಣ ಎನಿಸಿತು. ಆದರೆ ಗುಣಪಡಿಸಲಾಗದ ರೋಗಕ್ಕೆ ನೀನು ತಾನೇ ಏನು ಔಷಧ ಕೊಡಬಲ್ಲೆ. ನನಗೆ ನಿನ್ನ ಸಾಂತ್ವನದ ಅಗತ್ಯವಿರಲಿಲ್ಲ. ನಿನ್ನಲ್ಲಿ ಹೇಳಿ ನಿನ್ನ ಕಣ್ಣಲ್ಲಿ ಕೆಳಗಿಳಿಯುವುದು ನನಗೆ ಬೇಕಿರಲಿಲ್ಲ. ಹಾಗಾಗಿ ಕೆಲ ರಾತ್ರಿ ಕುಳಿತು ಮುಂದಿನ ದಾರಿ ಯೋಚಿಸತೊಡಗಿದೆ. ನನ್ನ ಸ್ಥಾನದಲ್ಲಿ ನೀನಿದ್ದರೆ ಏನು ಮಾಡುತ್ತಿದ್ದಿ ಎಂದು ಚಿಂತಿಸತೊಡಗಿದೆ. ಈ ನೋವನ್ನು ಅನುಭವಿಸುತ್ತ ಪ್ರತಿ ಕ್ಷಣ ಸಾಯುವುದು ನನಗೆ ಬೇಕಿರಲಿಲ್ಲ, ಆದರೆ ನನ್ನೊಡನೆ ನನ್ನ ಹೆಸರು ಕೂಡ ಹಾಳಾಗುವುದು ಬೇಕಿರಲಿಲ್ಲ. ಬಹುಕಾಲ ಚಿಂತಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ. ಸಾಯುವ ಮೊದಲಾದರೂ ಒಂದೊಳ್ಳೆ ಕೆಲಸ ಮಾಡಿ ಹೆಸರನ್ನು ಉಳಿಸಿಕೊಳ್ಳೋಣ ಎಂದು. ಸಾವಿಗೆ ಮುಖಮಾಡಿ ನಿಂತ ನನಗೆ ಎಲ್ಲ ತಯಾರಿ ಮುಗಿಸಲು ಏನೂ ಹೆದರಿಕೆಯಾಗಲಿಲ್ಲ. ಮೊದಮೊದಲು ಕಷ್ಟವೆನಿಸಿದರೂ ಹೋಗುತ್ತಾ ಹೋಗುತ್ತಾ ದಾರಿ ತಾನೇ ತಾನಾಗಿ ಬಿಚ್ಚಿಕೊಂಡಿತು. ಎಲ್ಲಾ ತಯಾರಿ ಮುಗಿಸಿ ಈ ಪತ್ರ ಬೆರೆಯಲು ಕುಳಿತ್ತಿದ್ದೇನೆ. ನನ್ನ ಇವತ್ತಿನ ಸ್ಥಿತಿ ನಿನ್ನಲ್ಲಾದರೂ ಅರಿವು ಮೂಡಿಸಬಹುದೆಂಬ ಹಂಬಲದಲ್ಲಿ.
ನೀನು ನನಗಿಂತ ಹೆಚ್ಚು ತಿಳಿದವನು, ನಿನಗೆ ನನ್ನ ಸ್ಥಿತಿ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ. ಸಾವಿನ ಭಯ ಮತ್ತು ನೋವು ಇಷ್ಟು ತೀಕ್ಷ್ಣವಾಗಿರುತ್ತದೆ ಎಂದು ತಿಳಿದಿದ್ದರೆ ನಾನು ತಪ್ಪಿ ಸಹ ಈ ಮಾರ್ಗದಲ್ಲಿ ಹೆಜ್ಜೆ ಇಡುತ್ತಿರಲಿಲ್ಲ. ಮಾಡುವ ತಪ್ಪಿಗೆ ಸಮರ್ಥನೆ ಹುಡುಕುವವರಿಗೆ ಅದು ತಮ್ಮನ್ನು ಎಂತಹ ಆಳದಲ್ಲಿ ನೂಕಬಹುದೆಂಬ ಕಲ್ಪನೆ ಸಹ ಇರುವುದಿಲ್ಲ. ಸುಖದ ಆ ಸಾವಿರ ವರುಷಗಳು ಸಾವಿನ ಭಯದ ಒಂದು ದಿನವನ್ನು ಸಹ ಎದುರಿಸಲಾರದು. ಇನ್ನೂ ಬದುಕಬೇಕೆಂಬ ಅದಮ್ಯ ಆಸೆ ಮೂಡುತ್ತಿದೆ ಮನದಲ್ಲಿ, ಆದರೆ ಸಾವು ಬಹು ಸಮೀಪದಲ್ಲಿಯೇ ಕಾಣುತ್ತಿದೆ. ಜೀವನ ಶಾಶ್ವತವಲ್ಲವೆಂದು ನನಗೂ ತಿಳಿದಿದೆ, ರಸ್ತೆಯಲಿ ಹೋಗುವ ಮನುಷ್ಯನೂ ಅಪಘಾತದಿಂದ ಸಾಯಬಹುದೆಂದು ನೀನು ವಾದಿಸಬಹುದು. ಆದರೆ ನನ್ನ ಕೈಯಿಂದ ತಪ್ಪಿಸಬಹುದಿದ್ದ ಸಾವನ್ನು ನಾನೇ ಆಹ್ವಾನಿಸಿ ಕೊರಗುವ ದುಃಖದ ಅರಿವು ನಿನಗಿಲ್ಲ. ಆ ಅರಿವು ನಿನಗಾಗುವಾಗ ಹಿಂತಿರುಗುವ ಯಾವ ಮಾರ್ಗವೂ ಉಳಿದಿರುವುದಿಲ್ಲ.'
ದೀಪಕನ ಪತ್ರ ಮುಗಿದಿತ್ತು. ಸಾಯುವಾಗಿನ ಅವನ ಸ್ಥಿತಿಯನ್ನು ಎಣಿಸಿ ಮನಸ್ಸಲ್ಲಿ ಅತೀವ ನೋವು ಮೂಡಿತು. ದೀಪಕನ ಸಾವಿಗೆ ನಾನೇ ಕಾರಣನಾದೆ ಅನ್ನಿಸಿತು. ದ್ರಿಷ್ಟಿ ಮತ್ತೆ ಟೀವಿಯತ್ತ ಹೊರಳಿತು, ಬ್ರೇಕಿಂಗ್ ನ್ಯೂಸ್ ಕಳಗಡೆ ಮಿಂಚುತ್ತಿತ್ತು. ದೀಪಕನ ಧೈರ್ಯಕ್ಕೆ ಪ್ರೋತ್ಸಾಹದ ಮಹಾಪೂರವೇ ಹರಿದು ಬಂದಿತ್ತು. ಅವನನ್ನೇ ಅನುಕರಿಸಿ ನಗರದಲ್ಲಿ ಇನ್ನು ಕೆಲವು ಘಟನೆಗಳು ನಡೆದು ಬಿಗುವಿನ ವಾತಾವರಣ ಮೂಡಿತ್ತು. ಭ್ರಷ್ಟಾಚಾರದ ಬೇಗುದಿಯಲ್ಲಿ ಬೆಂದವರಲ್ಲಿ ದೀಪಕ್ ಆಶಾಕಿರಣವಾಗಿ ಮೂಡಿದ್ದ. ನನಗೂ ದೀಪಕನ ಮೇಲೆ ಹೆಮ್ಮೆ ಎನಿಸಿತ್ತು. ನಾನು ಬದಲಾಗಲೆಂದು ದೀಪಕ್ ಕಳಿಸಿದ ಪತ್ರದತ್ತ ಇನ್ನೊಮ್ಮೆ ಕಣ್ಣು ಹಾಯಿಸಿದೆ. ದೀಪಕ್ ತನ್ನ ಸಾವಿನಿಂದ ತಿಳಿಸಿದ ಪಾಠದ ಎದುರು ಅದು ಪೇಲವ ವೆನಿಸಿತು. ದೀಪಕನ ಸಾವಿಗೆ ನಾನು ಎಷ್ಟು ಕಾರಣವೋ ಅಷ್ಟೇ ಅವನ ಇಂದಿನ ಬದುಕಿನ ಯಶಸ್ಸಿಗೂ ಕೂಡ ಎಂದೆನಿಸಿ ಖುಷಿಯೆನಿಸಿತು. ದೀಪಕ್ ತನ್ನ ಹಾದಿಯಲ್ಲಿ ಬದುಕಿ ಸಾಧಿಸಲಾರದನ್ನು ನನ್ನ ಹಾದಿಯಲ್ಲಿ ಸತ್ತು ಸಾಧಿಸಿದ್ದ. ನಾನು ನಡೆಯುತ್ತಿರುವ ಹಾದಿ ಸರಿಯೋ ತಪ್ಪೋ ಇನ್ನು ಸಹ ನನಗೆ ತಿಳಿಯದಾಯಿತು. ಬಹುಷಃ ದೀಪಕ್ ಹೇಳಿದಂತೆ ಸಾವಿನ ನೆರಳಲ್ಲಿ ಮಾತ್ರ ನನಗದು ಹೊಳೆಯಲು ಸಾಧ್ಯವೇನೋ.
3 comments:
Nice ending..very good :)
Lovely twist, I expected to read more about politics and corruption, but this was so different. :)
Eradu patargalnnu ottige odide...Sooper Ending........
Post a Comment