Wednesday, April 30, 2008

ದೇವರಿದ್ದಾರ?

ಅದ್ಯಾಕೊ ಗೊತ್ತಿಲ್ಲ, ನಾನು ಈ ತನಕ ನೋಡಿದವರಲ್ಲಿ ಹತ್ತರಲ್ಲಿ ಎಂಟು ಜನ ಸಾಫ್ಟ್ ವೇರ್ ವೃತ್ತಿ ಬಗ್ಗೆ ಬಯ್ಯುವವರೆ. 'ಅಯ್ಯೊ ನನ್ನ ಮ್ಯಾನೇಜರ್ ಸರಿ ಇಲ್ಲ', 'ಅಯ್ಯೊ ಕ್ಲೈಂಟ್ ಸರಿ ಇಲ್ಲ', 'ಕರ್ಮ ಕರ್ಮ, ಮಾಡಿದ್ದನ್ನೆ ಮತ್ತೆ ಮತ್ತೆ ಮಾಡ್ತ ಇರಬೇಕು' ಅಂತ ಒಂದಲ್ಲ ಒಂದು ಕತೆ ಇದ್ದದ್ದೆ. ಆದ್ರೆ ನನಗಂತು ನನ್ನ ವೃತ್ತಿ ಬಗ್ಗೆ ನಿಜವಾಗ್ಲು ಹೆಮ್ಮೆ ಇದೆ.ಪ್ರತಿಯೊಂದು ವಿಷಯಾನ ಸರಿಯಾಗಿ ಲಾಜಿಕ್ಕಲ್ಲಾಗಿ ವಿಮರ್ಷೆ ಮಾಡಕ್ಕೆ ಕಲಿಸಿ ಕೊಟ್ಟದ್ದೆ ಈ ವೃತ್ತಿ. ಕೆಲವೊಂದು ಬಾರಿ ತಪ್ಪೆನಿಸಿದ್ರೂನು, ನಷ್ಟ ಕಡಿಮೆ ಮಾಡಕ್ಕೋಸ್ಕರ ತಪ್ಪನ್ನೆ ಮುಂದುವರಿಸಿ ಕೊಂಡು ಹೋಗೋದನ್ನ ಹೇಳಿ ಕೊಟ್ಟದ್ದು ಇದೇ ವೃತ್ತಿ. ಯಾಕಪ್ಪಾ ಇವ್ನು, ಟೈಟಲ್ ಏನೋ ಇಟ್ಕೊಂಡು ಯಾವ್ದೊ ರೀಲು ಬಿಡ್ತಾ ಇದ್ದಾನೆ ಅಂದ್ಕೊಂಡ್ರ, ಇಲ್ಲ ಇಲ್ಲ ಅದೇ ವಿಷಯ ಹೇಳೋಕ್ಕೆ ಹೊರಟವನು.

ಚಿಕ್ಕಂದಿನಿಂದಲೂ ನಾನು ದೇವರ ಬಗ್ಗೆ ಕೇಳಿ ಕೊಂಡೆ ಬೆಳೆದವನು. ನಮ್ಮ ಮನೆಯವರು ದೇವರಿಗಿಂತಲೂ ದೈವವನ್ನು ಜಾಸ್ತಿ ನಂಬಿದವರು. ದೈವಗಳು ಅಂದ್ರೆ ಒಂತರ ದೇವರ ಕೈ ಕೆಳಗೆ ಕೆಲಸ ಮಾಡುವವರು. ಅದರಲ್ಲಿ ಬೇರೆ ಬೇರೆ ನಮೂನೆ ದೈವಗಳಿರತ್ತೆ. ಸ್ವಲ್ಪ ಜಾಸ್ತಿ ಫೇಮಸ್ ಇರೊದ್ರಂದ್ರೆ ಪಂಜುರ್ಲಿ, ಹಾಯ್ಗುಳಿ etc. ಇವೆಲ್ಲ ಈಶ್ವರನ ಗಣಗಳು. ನನ್ನ ಪ್ರಕಾರ ದೇವ್ರನ್ನ ನಂಬೋದಕ್ಕು, ದೈವಗಳನ್ನ ನಂಬೋದಕ್ಕು, ಭೂತಗಳನ್ನ ನಂಬೋದಕ್ಕೂತುಂಬಾ ವ್ಯತ್ಯಾಸ ಏನೂ ಇಲ್ಲ. ದೇವ್ರು ಇರೋದು ಸತ್ಯ ಆದ್ರೆ ದೆವ್ವ ಭೂತ ಇರೋದು ಯಾಕೆ ಸತ್ಯ ಆಗಬಾರದು? ಆದ್ರೆ ನಮ್ಮ ಕುಲದವ್ರು ದೇವರನ್ನ ಬಿಟ್ಟು ದೈವಗಳನ್ನ ಯಾಕೆ ನಂಬ್ತಾರೆ ಅಂತ ನನಗೆ ಅಷ್ಟು ಚೆನ್ನಾಗಿ ತಿಳಿದಿಲ್ಲ. ಬಹುಶ: ಮೇಲ್ಜಾತಿಯವರು ದೇವರನ್ನು ಭೇಟಿ ಮಾಡಲು ಅಷ್ಟು ಬಿಡದೆ ಇರುವುದು ಒಂದು ಕಾರಣ ಇರಬಹುದು. ನಾನು ಐದನೆ ತರಗತಿಗೆ ಹೋಗೋ ತನಕ ನಮ್ಮೊರಿನಲ್ಲಿ ಇರೊ ಈಶ್ವರನ ಗುಡಿಗೆ ನಮಗೆ ಪ್ರವೇಶ ಇರಲಿಲ್ಲ. ಆ ನಂತರ ನಾನೆ ಆ ಕಡೆ ತಲೆ ಹಾಕಿರಲಿಲ್ಲ. ಇನ್ನೊಂದು ಕಾರಣ ಅಂದ್ರೆ ದೈವಗಳ ಜೊತೆ ನೇರವಾಗಿ ಮಾತಾಡ ಬಹುದು, ದೇವರ ತರ ಅಲ್ಲ.

ಮೊದಲು ನಂಗೆ ದೇವರು ಅಂದ್ರೆ ತುಂಬ ಪ್ರೀತಿ ಇತ್ತು. ಮೊರನೆ ಕ್ಲಾಸಿಂದ ರಾಮಾಯಣ ಮಹಾಭಾರತ ನೋಡಲು ಒಂದು ಮೈಲು ಬರಿಗಾಲಲ್ಲಿ ನಡಕೊಂಡೆ ಹೋಗ್ತಾ ಇದ್ದೆ. ನಮ್ಮ ಮನೆಯಲ್ಲಿ ಟೀವಿ ಬಂದದ್ದು ಹತ್ತನೆ ಕ್ಲಾಸಲ್ಲಿ. ಲೆಕ್ಕವಿಲ್ಲದಷ್ಟು ಕತೆ ಪುಸ್ತಕಗಳನ್ನು ಬೇರೆ ಓದ್ತ ಇದ್ದೆ. ಅವೆಲ್ಲ ಸೇರಿ ದೇವರ ಬಗ್ಗೆ ಒಳ್ಳೆ ಅಭಿಪ್ರಾಯವನ್ನು ಮೊಡಿಸಿತ್ತು. ಆದ್ರೆ ದೈವಗಳ ಬಗ್ಗೆ ಹೆದರಿಕೆಯಿದ್ರೂ ಕೂಡ ಅಷ್ಟೊಂದು ಒಳ್ಳೆ ಭಾವನೆ ಇರಲಿಲ್ಲ. ನಮ್ಮ ತಂದೆ ಮನೆಯಲ್ಲಿ ವರ್ಷಕ್ಕೆ ಒಂದು ಬಾರಿ ಭೂತ ಸೇವೆ ನಡೆಯುತ್ತಿತ್ತು. ಭೂತ ಸೇವೆ ಅಂದ್ರೆ ನಂಬಿದ ದೈವಗಳಿಗೆ ವಿಶೇಷ ರೀತಿಯ ಪೂಜೆ. ಕುಟುಂಬದ ಎಲ್ಲ ಜನರು ಸೇರಿ ಕೋಳಿ, ಕುರಿ, ಹೂವು ಅಂತ ಕೊಟ್ಟು ಸೇವೆ ಮಾಡೊದು. ಆಗ ದೈವ ಪಾತ್ರಿಯ ಮೇಲೆ ಆಹ್ವಾಹನೆಯಾಗಿ ಎಲ್ಲರ ಯೋಗ ಕ್ಶೇಮ ವಿಚಾರಿಸಿ ಕೊಂಡು ಒಳ್ಳೆ ಮಾರ್ಗದಲ್ಲಿ ಹೇಗೆ ಹೋಗಬೇಕೆಂದು ಸಲಹೆ ಕೊಡುತ್ತಿತ್ತು. ಅದಕ್ಕೆ ನಾವು 'ದರ್ಶನ' ಅಂತ ಕರೀತೇವೆ. ದೈವ ಹಾಗೆ ಎಲ್ಲರ ಮೇಲೂ ಬರಲ್ಲ. ಪಾತ್ರಿ ಆಗಬೇಕೆಂದ್ರೆ ದೈವದ ಆಹ್ವಾಹನೆಯಾದ ಮೇಲೆ ಧರ್ಮಸ್ಥಳಕ್ಕೆ ಹೋಗಿ ಹೂ ನೀರು ತಗೊಂಡು ಬರಬೇಕು. ಅದಿಲ್ಲದೆ ಆಹ್ವಾಹನೆಯಾದ್ರು ಕೂಡ ಅವರಿಗೆ 'ದರ್ಶನ' ಮಾಡೋ ಅಧಿಕಾರ ಇರಲ್ಲ.

ನಮ್ಮ ತಂದೆ ಮನೆ ಭೂತ ಸೇವೆ ವಿಶೇಷ ಅಂದ್ರೆ ಒಬ್ಬರು 'ದರ್ಶನ' ಪಾತ್ರಿಯಾದ್ರೆ ಇನ್ನೊಂದು ಏಳೆಂಟು ಜನ ಹಾಗೆ ಕುಣಿಯುವವರು. ಒಬ್ಬಬ್ಬರ ಮೇಲೂ ಒಂದೊಂತರ ದೈವ ಬರುತ್ತಿತ್ತು. ದೇವರ ಮನೆ ಒಳಗೆ ಕೇಳುವವರಿಗಿಂತ ಕುಣಿಯುವವರೆ ಜಾಸ್ತಿ ಜನ ಇರ್ತ ಇದ್ದಿದ್ರು. ಪ್ರತಿ ಸಲಾನು ಯಾವುದಾದರೂ ಒಂದು ವಿಷಯಕ್ಕೆ ದೈವ ದೈವಗಳೆ ಸೇರಿ ಜೋರಾಗಿ ಕಿತ್ತಾಡಿ ಕೊಳ್ತ ಇದ್ದವು. ನಮ್ಮ ಮನೆ ಹಿರಿಯರಿಗೆ ಆ ದೈವಗಳನ್ನು ಸಮಾದಾನ ಮಾಡೋದೆ ಒಂದು ದೊಡ್ಡ ಕೆಲಸವಾಗಿತ್ತು. ನಮ್ಮನ್ನ ಕಾಪಾಡ ಬೇಕಿದ್ದ ದೈವಗಳೆ ಕಿತ್ತಾಡೋದು ನನಗೊಂತರ ಹೊಸ ವಿಷಯವಾಗಿತ್ತು.

ಒಂದು ಸಲ ನಮ್ಮಮ್ಮನ ಮನೆ ಭೂತ ಕೋಲಕ್ಕೆ ಹೋಗಿದ್ದೆ. ಅಲ್ಲಿ ತಂದೆ ಮನೆಯವರ ತರ ಹತ್ತಾರು ದೈವಗಳು ಕುಣಿಯಲ್ಲ. ಒಬ್ಬ ಪಾತ್ರಿ ಮಾತ್ರ 'ದರ್ಶನ' ಮಾಡೋದು. ಆ ದಿನ ದರ್ಶನದಲ್ಲಿ ದೇವರು ಮನೆ ಪಾಲಿನ ಬಗ್ಗೆ ಮಾತಾಡೋಕೆ ಶುರು ಮಾಡಿತು. ನಮ್ಮಮ್ಮನ ಮನೆ ಆಸ್ತಿ ಎಲ್ಲ ನಮ್ಮ ಅಜ್ಜ ನೋಡಿಕೊಳ್ತ ಇದ್ರು. ಅವ್ರು ಇರೋವಾಗ ನಮ್ಮ ಚಿಕ್ಕ ಅಜ್ಜಂಗೆ ಸ್ವಲ್ಪ ಪಾಲು ಕೊಡ್ತೀನಿ ಅಂತ ಹೇಳಿದ್ರಂತೆ. ಅದನ್ನೆ ಮುಂದೆ ಇಟ್ಕೊಂಡು ನಮ್ಮ ಚಿಕ್ಕ ಅಜ್ಜ ಯಾವಾಗ್ಲು ಪಾಲಿನ ವಿಷಯಾನೆ ಮಾತಾಡ್ತ ಇದ್ರು. ಆವತ್ತಂತು ಚಿಕ್ಕ ಅಜ್ಜ ಜೋರು ಜೋರಾಗೆ ಮಾತಾಡ್ತ ಇದ್ರು, ದೇವ್ರು ಬೇರೆ ಅವ್ರಿಗೆ ಸಪೋರ್ಟ್ ಇದ್ರಲ್ಲ.ದರ್ಶನ ಮುಗಿಯೋ ತನಕ ಸುಮ್ನೆ ಇದ್ದ ನಮ್ಮ ಮಾವ, ದರ್ಶನ ಮುಗಿದ ಕೂಡಲೆ ಅವೇಶ ಬಂದವರಂತೆ ಪಾತ್ರಿ ಮತ್ತು ಚಿಕ್ಕ ಅಜ್ಜ ಇಬ್ಬರಿಗೂ ಹೊಡೆಯೋಕೆ ಹೋದ್ರು. ಮತ್ತೆ ನೋಡಿದ್ರೆ ಪಾತ್ರಿಯವರನ್ನು ಕರೆದು ಕೊಂಡು ಬಂದಿದ್ದೆ ಚಿಕ್ಕ ಅಜ್ಜ, ದಾರಿಯಲ್ಲಿ ಬರೋವಾಗ್ಲೆ ಅವರ ನಡುವೆ ಮಾತುಕತೆ ಆಗಿತ್ತಂತೆ.

ದೈವಗಳ ನಡುವೇನೆ ಬೆಳೆದ ನಾನು ಕ್ರಮೇಣ ದೈವಗಳ ಮೇಲೆ ನಂಬಿಕೇನೆ ಕಳ ಕೊಂಡಿದ್ದೆ. ಬರ ಬರುತ್ತ ದೇವರ ಮೇಲಿನ ನಂಬಿಕೇನೂ ಅದೆ ದಾರಿಗೆ ಬಂದಿತ್ತು. ಜಾಸ್ತಿ ವಿಚಾರ ಮಾಡ್ತ ಹೋದಾಗ್ಲೆಲ್ಲ ದೇವ್ರು ಅನ್ನಿಸ್ಕೊಂಡೋನು ಅವ್ನ ಕೆಲಸ ಸರಿಯಾಗಿ ಮಾಡ್ತ ಇಲ್ಲ ಅನ್ನಿಸಿತ್ತು. ನಮ್ಮ ಊರಲ್ಲಿ ಒಂದು ದೇವಿ ಮಂದಿರ ಇತ್ತು. ಮೊದ್ಲು ಆ ದೇವಸ್ಥಾನದಲ್ಲಿ ಬ್ರಾಹ್ಮಣರು ಪೂಜೆ ಮಾಡ್ತ ಇದ್ದರು. ಅಮೇಲೆ ಬಹುಶ: ಪೂಜೆಯವರಿಗೂ ಊರಿನ ಹೆಗ್ಡೆಯವರಿಗೂ ಜಗಳ ಆಯ್ತು ಅನ್ಸತ್ತೆ, ಆ ದೇವಿಗೆ ಮಾಂಸಾಹಾರ ಬೇಕು, ಹಾಗಾಗಿ ಬ್ರಾಹ್ಮಣರು ಪೂಜೆ ಮಾಡೋದು ಸರಿ ಅಲ್ಲ ಅಂತ ಬೇರೆ ಜಾತಿಯವರನ್ನು ಪೂಜೆಗೆ ಬಿಟ್ಟರು. ಆ ದೇವಸ್ಥಾನದ ಗರ್ಭ ಗುಡಿ ಒಳಗೆ ಪೂಜೆಯವರಿಗೆ ಮಾತ್ರ ಪ್ರವೇಶ ಇತ್ತು. ಗರ್ಭ ಗುಡಿ ಹೊರಗೆ ಎತ್ತರದಲ್ಲಿ ಜಗುಲಿ ತರ ಸ್ವಲ್ಪ ಜಾಗ ಇತ್ತು. ಅಲ್ಲಿಗೆ ಮೇಲ್ಜಾತಿಯವರಿಗೆ ಮಾತ್ರ ಪ್ರವೇಶ. ಅವರ ಪ್ರಕಾರ ಮೇಲ್ಜಾತಿ ಅಂದ್ರೆ ಏನೆಂದು ನಂಗೆ ಇನ್ನೂ ಅರ್ಥ ಆಗಿಲ್ಲ. ನಾವು ಮತ್ತೆ ಉಳಿದ ಕೆಲವು ಜಾತಿಯವ್ರು ಕೆಳಗಡೆ ಕುಳಿತುಕೊಳ್ಳ ಬೇಕಿತ್ತು. ಒಮ್ಮೆ ದೇವಸ್ತಾನದಲ್ಲಿ ಏನೋ ಪೂಜೆ ನಡೀತ ಇತ್ತು. ಪೂಜೆ ಜೊತೆಗೆ 'ದರ್ಶನ' ಕೂಡ ನಡೀತ ಇತ್ತು. ಸಡನ್ನಾಗಿ ಎಲ್ಲಿಂದಲೋ ಒಬ್ಬಳು ದೇವರನ್ನು ಹತ್ತಿರದಿಂದ ನೋಡಬೇಕೆಂದು ಗರ್ಭಗುಡಿ ಹೊರಗಿನ ಜಗುಲಿ ಹತ್ತಿದಳು. ಉಳಿದವರಿಗೆ ಹೇಗೆ ಗೊತ್ತಾಯಿತೊ ಅವಳು ಕೆಳ ಜಾತಿಯವಳು ಅಂತ, ಹೆಂಗಸೆನ್ನೋದು ನೋಡದೆ ಅವಳ ಕೈ ಹಿಡಿದು ದರದರನೆ ಎಳೆದು ಕೆಳಗೆ ನೂಕೇ ಬಿಟ್ಟರು. ಪಾತ್ರಿ ಮೈಮೇಲೆ ಬಂದಿದ್ದ ದೇವರು ಇದರಿಂದ ಸಂತೋಷವಾದಂತೆ ಜೋರಾಗಿ ಕುಣಿಯುತ್ತಿತ್ತು.

ಇನ್ನೊಮ್ಮೆ ಅದೇ ದೇವಸ್ಥಾನದಲ್ಲಿ ಕಳವು ಆಯ್ತು. ಕಳವಾಗೋದು ಮೊದಲೇ ಗೊತ್ತಿತ್ತು ಅನ್ನೊ ಹಾಗೆ ಅದಕ್ಕೂ ಒಂದು ಕತೆ ರೆಡಿಯಾಗಿಟ್ಟಿದ್ದರು. ಕಳವು ಮಾಡಿದವನು ತುಂಬಾ ಬಡವನಂತೆ, ಅದಕ್ಕೆ ದೇವರೆ ಅವನಿಗೆ ಆ ಬುದ್ಧಿ ಕೊಟ್ಟನಂತೆ. ಇದೆ ವಾದವನ್ನ ತುಂಬ ಕಡೆ ಕೇಳಿದ್ದೆ, ದೇವಸ್ಥಾನದಲ್ಲಿ ಕಳವಾಗುವುದು ಒಂದು ಸಾಮಾನ್ಯ ವಿಷಯ ತಾನೆ ಈಗ. ಕಳವು ಮಾಡೊ ಬುದ್ದಿ ಕೊಡೋ ಬದಲು ದೇವರಿಗೆ ಬೇರೆ ಯಾವದಾದ್ರೂ ಒಳ್ಳೆ ದಾರಿ ತೊರಿಸೋಕೆ ಆಗಲ್ವ? ಒಂದು ವೇಳೆ ಕಳವು ಮಾಡೊ ಬುದ್ದಿ ಅವನು ಕೊಟ್ಟಿಲ್ಲ ಅಂದ್ರೆ, ತನ್ನ ಗುಡಿಯನ್ನೆ ರಕ್ಷಣೆ ಮಾಡೊವಷ್ಟು ಶಕ್ತಿ ಇಲ್ವ? ತನ್ನ ಗುಡಿಯಲ್ಲಾಗೊ ಅಧರ್ಮಾನ ತಪ್ಪಿಸೋಕೆ ಆಗದವನು ಬೇರೆ ಎಲ್ಲೊ ಆಗುವ ತಪ್ಪನ್ನು ಹೇಗೆ ತಾನೆ ಸರಿ ಮಾಡ ಬಲ್ಲನು?

ಗುಡಿಯಂತಲ್ಲ, ನನಗಿದು ತನಕ ದೇವರ ಪ್ರವೇಶದಿಂದ ಯಾವುದೆ ಕೆಟ್ಟ ಕೆಲಸ ನಿಂತದ್ದಾಗಲಿ, ಯಾರಿಗಾದರೂ ಕೆಟ್ಟ ಕೆಲಸ ಮಾಡುವಾಗ ತೊಂದರೆ ಆಗಿದ್ದಾಗಲಿ ಗೊತ್ತಿಲ್ಲ. ಇದಂತು ತುಂಬಾ ಚಿಕ್ಕ ವಿಷಯ. ಇದರಲ್ಲೆಲ್ಲ ಮೊಗು ತೂರಿಸೋಕೆ ದೇವರಿಗೆ ಸಮಯ ಇಲ್ಲದೆ ಇರಬಹುದು. ಆದರೆ ಚರಿತ್ರೆ ಪುಟವನ್ನ ಒಮ್ಮೆ ತಿರುಗಿ ಹಾಕಿ ನೋಡಿದರೆ ದೊಡ್ಡ ವಿಷಯದಲ್ಲಿ ಕೂಡ ದೇವರು ಮಧ್ಯ ಪ್ರವೇಶ ಮಾಡಿಲ್ಲ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತೆ. ಘಜನಿ ಘೋರಿಗಳು ಹಲವಾರು ಬಾರಿ ದಂಡೆತ್ತಿ ಸಾವಿರಾರು ಜನ ಪ್ರಾಣ ಕಳಕೊಂಡಾಗ ಆ ದೇವರು ಏನು ಮಾಡ್ತ ಇದ್ದನೊ ನನಗೊತ್ತಿಲ್ಲ. ಮತ್ತೆ ಔರಂಗಜೇಬನ ಕಾಲದಲ್ಲಂತು ಲಕ್ಶಾಂತರ ಜನ ವಿನಾ ಕಾರಣ ಸಾವಿನ ಮನೆ ಬಾಗಿಲು ತಟ್ಟುವಾಗ ದೇವರು ಸುಮ್ಮನೆ ಕೂತಿದ್ದ ಅಂದರೆ ನಿಜವಾಗ್ಲು ಆಶ್ಚರ್ಯವಾಗತ್ತೆ. ಅದೆಲ್ಲ ಬಿಡಿ, ಒಮ್ಮೆ ಹಂಪಿ ಕಡೆ ಹೋಗಿ ಬನ್ನಿ, ಖಂಡಿತ ನೀವೆ ಕೇಳ್ತೀರ, ದೇವ್ರು ನಿಜವಾಗಿ ಇದ್ದನ ಅಂತ. ಹೆಣ್ಣು, ಹೊನ್ನು ಮತ್ತೆ ಮಣ್ಣು ಎಂತವರನ್ನು ಹಾಳು ಮಾಡತ್ತೆ ಅಂತಾರೆ, ಆದ್ರೆ ದೇವರ ಹೆಸರಲ್ಲಿ ಅಷ್ಟೆ ಪ್ರಾಣ ಹಾನಿ ಮಾನ ಹಾನಿ ಆಗಿದ್ದನ್ನ ಯಾರೂ ಹೇಳಲ್ಲ.

ನೀನು ದೇವರನ್ನು ನಂಬ್ತೀರಾ ಅಂತ ಎರಡು ವರುಷದ ಹಿಂದೆ ಕೇಳಿದ್ರೆ ಖಡಾ ಖಂಡಿತವಾಗಿ ಇಲ್ಲ ಅಂತ ಹೇಳ್ತಿದ್ದೆ. ನಾನು ದೇವರನ್ನು ನೋಡಿಲ್ಲ ಅಂತಲ್ಲ. ನೋಡಿಲ್ಲ ಅನ್ನೋದು ಇಲ್ಲ ಅಂತ ಹೇಳಕ್ಕೆ ಕಾರಣ ಆಗಲ್ಲ. ನಾನು ನೋಡಿಲ್ಲದ ವಿಷಯ ಎಷ್ಟೋ ಇದೆ. ಆದ್ರೆ ಚಿಕ್ಕದಿರುವಾಗ ದೇವರನ್ನು ಯಾವ ತರ ಪ್ರಾಜೆಕ್ಟ್ ಮಾಡಿದ್ದರೋ, ಆ ರೀತಿಯಲ್ಲಿ ದೇವರು ಇಲ್ಲ ಅನ್ನೋದು ಸ್ಪಷ್ಟವಾಗಿ ಗೊತ್ತಾಗಿತ್ತು. ನನ್ನ ಆಲೋಚನೆಗಳು ಎಷ್ಟೇ ಚೆನ್ನಾಗಿದ್ದರೂ ಕೂಡ ದೇವರಿಂದ ಯಾವ ತರದ ಸಹಾಯಾನು ಅಗಲ್ಲ ಅನ್ನಿಸ್ಸಿತ್ತು. ಲಾಜಿಕಲ್ಲಾಗಿ ದೇವರಿಲ್ಲ ಅನ್ನೊ ನಿರ್ಧಾರಕ್ಕೆ ಬಂದಿದ್ದೆ. ಹಾಗಾಗಿ ಅಪರೂಪಕ್ಕೊಮ್ಮೆ ದೇವಸ್ಥಾನಕ್ಕೆ ಹೋದರೂನು, ನನಗಾಗಿ ಬೇಡಿಕೊಳ್ಳೋದನ್ನೆ ಬಿಟ್ಟು ಬಿಟ್ಟಿದ್ದೆ.

ಈವಾಗ ಸಾಫ್ಟ್ ವೇರಲ್ಲಿ ಮೊದಲಿಗಿಂತ ಸ್ವಲ್ಪ ಜಾಸ್ತಿ ಅನುಭವ ಆಗಿದೆ. ಲಾಜಿಕ್ಕಲ್ಲಾಗಿ ಸರಿ ಇದೆ ಅಂದ ಮಾತ್ರಕ್ಕೆ ಯಾವುದನ್ನು ಮಾಡಕ್ಕೆ ಹೋಗಲ್ಲ. ಅದರಿಂದ ಆಗೊ ಲಾಭ ನಷ್ಟಾನ ಮೊದಲು ಲೆಕ್ಕಚಾರ ಹಾಕ್ತೀನಿ. ದೇವರ ಬಗ್ಗೆ ಕೂಡ ಈವಾಗ ಅದೆ ದಾಟಿಯಲ್ಲಿ ಯೋಚನೆ ಮಾಡೋದು. ಇದುವರೆಗೆ ದೇವರಿಂದ ಯಾರಿಗೂ ಏನೂ ಲಾಭ ಆಗದೆ ಇರಬಹುದು, ಇದುವರೆಗೆ ದೇವರು ಪ್ರತ್ಯಕ್ಷವಾಗೊ ಪರೋಕ್ಷವಾಗೊ ಕಾಣಿಸದೆ ಇರಬಹುದು. ಆದರೂ ಕೂಡ ದೇವರು ಇಲ್ಲ ಅಂತ ಹೇಳಿ ನಾನು ಸಾದಿಸೋದಾದ್ರೂ ಏನು? ಬರೀ ವಾದ ಗೆದ್ದು ಏನು ಪ್ರಯೋಜನ? ಒಂದು ವೇಳೆ ದೇವರು ನಿಜವಾಗ್ಲೂ ಇದ್ದು ಯಾವುದೊ ಕಾರಣಕ್ಕೊಸ್ಕರ ತೋರಿಸ್ಕೊಳ್ಳದೆ ಹೋಗಿದ್ದಿದ್ರೆ? ಸುಮ್ನೆ ಯಾಕೆ ರಿಸ್ಕ್?

ಹೆದರ್ತ ಇದ್ದೀನಿ ಅಂತಲ್ಲ. ದೇವರಿಲ್ಲ ಅಂತ ನಾನು ಯಾವತ್ತು ಹೇಳಲ್ಲ. ಆ ರೀತಿ ಪ್ರೂವ್ ಮಾಡೋದು ತುಂಬಾ ಕಷ್ಟಾನೆ. ಬದಲಾಗಿ ನಾನು ದೇವರನ್ನ ನಂಬಲ್ಲ ಅಂತ ಅರಾಮಾಗಿ ಹೇಳ್ತೀನಿ. ದೇವರನ್ನು ನಂಬಲ್ಲ ಅಂದ್ರೆ ಏನರ್ಥ? ನನಗನಿಸ್ಸಿದ್ದನ್ನು ಮಾಡಬಹುದು ಅಂತಾನ? ಖಂಡಿತ ಅಲ್ಲ, ದೇವರನ್ನೊ ಒಂದು ಶಕ್ತಿ ಇಲ್ಲ ಅಂದ್ರೂನು ತಪ್ಪು ಕೆಲಸ ಮಾಡೋಕೆ, ವಿನಾ ಕಾರಣ ಬೇರೆಯವರ ಮನಸ್ಸು ನೋಯಿಸ್ಸಕ್ಕೆ ಖಂಡಿತ ಮನಸ್ಸು ಒಪ್ಪಲ್ಲ. ಇದ್ಯಾಕೆ ಹೀಗೆ? ಲಾಭ ಆಗೋದಾದ್ರೆ, ಶಿಕ್ಷೆ ಕೊಡೋವವ್ರು ಇಲ್ಲ ಅಂದ್ರೆ ಬೇರೆಯವರ ಮನಸ್ಸು ನೋಯಿಸ್ಸೋಕೆ ಏನು ತೊಂದ್ರೆ? ಬಹುಶ: ಇದು ನಮ್ಮ ಸಂಸ್ಕೃತಿ ಇರಬಹುದು. ಸಂಸ್ಕೃತಿ ಅನ್ನೊದಕ್ಕಿಂತ ಧರ್ಮ ಅನ್ನೋದು ಸರಿಯಾಗಿದೆ ಅನ್ಸತ್ತೆ. ಆದ್ರೆ ನಾನು ದೇವ್ರನ್ನೆ ನಂಬಲ್ಲ ಅಲ್ವ? ಧರ್ಮವನ್ನ ಹ್ಯಾಗೆ ನಂಬೋದು? ಹ್ಯಾಗಂತ ಗೊತ್ತಿಲ್ಲ, ಈ ಲಾಜಿಕ್ ಪ್ರಕಾರ ನಾನು ದೇವರನ್ನು ನಂಬಲ್ಲ, ಆದ್ರೆ ಧರ್ಮದ ಮೇಲೆ ಶ್ರದ್ದೆ ಇದೆ, ಅದನ್ನ ನಂಬ್ತೀನಿ.

ಧರ್ಮದ ಬಗ್ಗೆ ನನಗೆ ಹ್ಯಾಗೆ ಶ್ರದ್ದೆ ಬೆಳೀತು? ದೇವರ ಮೇಲಿನ ನಂಬಿಕೆಯಿಂದ ತಾನೆ? ಅದೂ ಹೌದು, ಹಾಗಾಗಿ ನಾನು ದೇವರನ್ನು ಈಗ ನಂಬುತ್ತ ಇಲ್ಲ ಅನ್ನೋದೆ ಒಂದು ಸುಳ್ಳು. ದೇವರು ಇಲ್ಲ ಇಲ್ಲ ಅಂತಾನೆ ನಾನು ಇನ್ನೊಂದು ರೀತಿಯಲ್ಲಿ ಅವನನ್ನ ನಂಬೋಕೆ ಶುರು ಮಾಡಿದ್ದೀನಿ. ನಾನು ನಂಬದೇ ಇದ್ದದ್ದು ದೇವರನ್ನಲ್ಲ. ಚಿಕ್ಕಂದಿನಿಂದ ಎಲ್ಲರೂ ಹೇಳ್ತ ಇದ್ದ ದೇವರ ಸ್ವರೂಪವನ್ನ. ಹೌದು, ನನಗೆ ಇದೇ ಸರಿ ಅನ್ನಿಸ್ತ ಇದೆ ಈಗ. ದೇವರೆನ್ನೊ ಒಂದು ಶಕ್ತಿ ಇದೆ, ಆದ್ರೆ ಅದಕ್ಕೋಸ್ಕರ ಯಾರೂ ದೇವಸ್ಥಾನಕ್ಕೆ ಹೋಗಬೇಕೆಂದಿಲ್ಲ. ದೇವರಿಗೆ ಬೇಕಾಗಿರೋದು ಭಕ್ತೀನು ಅಲ್ಲ, ನಮ್ಮ ಸೇವೇನೂ ಅಲ್ಲ. ಜನರು ತನಗೆ ಮಾಡೋ ಸೇವೆ ಆಧಾರದ ಮೇಲೆ ಸಹಾಯ ಮಾಡೋದಕ್ಕೆ ಅವನೇನೂ ನಮ್ಮ ಸರಕಾರಿ ನೌಕರ ಅಲ್ಲ. ನಮ್ಮೆಲ್ಲರನ್ನ ನೋಡಿಕೊಳ್ಳೊ ಅವನಿಗೆ ತನ್ನನ್ನು ನೋಡಿಕೊಳ್ಳಾಕೆ ಆಗಲ್ಲ ಅಂದುಕೊಳ್ಳೋದು ಮೊರ್ಖತನ. ಅವನಿಗೆ ಬೇಕಾಗಿರೋದು ಒಂದೆ. ಧರ್ಮದಿಂದ ನಡೆಯುವುದು, ತನ್ನಿಂದ ಆದಷ್ಟು ಬೇರೆಯವರಿಗೆ ಉಪಕಾರ ಮಾಡೋದು. ಸೇವೆ ಬಯಸೋ ಚಿಕ್ಕ ಚಿಕ್ಕ ದೇವ್ರುಗಳು ಇದ್ದಾವೊ ಇಲ್ಲವೊ ಗೊತ್ತಿಲ್ಲ, ಇದ್ರೂನು ಅವುಗಳ ಬಗ್ಗೆ ನಾನು ಅಷ್ಟು ತಲೆ ಕೆಡಿಸಿ ಕೊಳ್ಳಲ್ಲ. ಪ್ರತಿಫಲ ಬಯಸಿ ಕೆಲಸ ಮಾಡಬಾರದು ಅಂತ ದೇವರೆ ಹೇಳಿದ್ದಾನಂತೆ. ಹಾಗಿರುವಾಗ ದೇವರೆನಿಸಿಕೊಂಡವನು ಯಾವ ಬಾಯಿಂದ ಸೇವೆ ಅಥವ ಭಕ್ತಿ ಬಯಸಿಯಾನು?

ಹೌದು, ದೇವ್ರನ್ನು ಮನುಶ್ಯರ ತರ ನೋಡೋದು ಸರಿಯಲ್ಲ. ಮನುಶ್ಯರ ಸ್ವಭಾವಗಳನ್ನ ದೇವರಿಗೆ ಅನ್ವಯಿಸಿ ನಮ್ಮ ಲಾಭಕ್ಕಾಗಿ ದೇವರನ್ನ ಉಪಯೋಗಿಸೋದು ಒಳ್ಳೇದಲ್ಲ. ನಾವೂ ದೇವರ ಹಾಗೆ ಇರಬೇಕೆಂದೆ ದೇವರು ಬಯಸ್ತಾನೆ. ಅದಕ್ಕಾಗಿ ದೇವರ ಭಜನೆ ಮಾಡ್ತಾ ಕೂತ್ರೆ ಏನೂ ಪ್ರಯೋಜನ ಇಲ್ಲ, ನಾವು ದೇವರ ಭಕ್ತಿ ಮಾಡೋ ಬದಲು ನಾವೇ ದೇವರಾಗೋ ಪ್ರಯತ್ನ ಮಾಡಬೇಕು. ಒಂದು ವೇಳೆ ದೇವರು ಇರೋದೆ ಆದ್ರೆ ಮನುಶ್ಯರೂ ದೇವರ ತರ ಆಗೋದು ಅವನಿಗೆ ಇಷ್ಟ ಆಗತ್ತೆ ಅಂತನೆ ನನ್ನ ಭಾವನೆ. ಅವನಿಲ್ಲ ಅಂದ್ರೂ ಪರವಾಗಿಲ್ಲ, ನನ್ನ ಮನಸ್ಸಿಗೆ ತಕ್ಕ ಹಾಗೆ ನಡಕೊಂಡ ತೃಪ್ತಿಯಾದ್ರೂ ಸಿಗತ್ತೆ.

Thursday, April 24, 2008

ರಂಗಯ್ಯನ ಕತೆ

ಆಗಿನ್ನೂ ನಾನು ತುಂಬಾ ಚಿಕ್ಕವನು. ಯಾರ ಮಾತು ಕೇಳದ ವಯಸ್ಸು, ಯಾರಿಗೂ ಹೆದರದ ಮನಸ್ಸು. ಇಡೀ ರಾತ್ರಿ ಅಳೋ ಸ್ವಭಾವ ಬೇರೆ. ಆದ್ರೆ ರಂಗಯ್ಯನ ಹೆಸರು ಕೇಳಿದ್ರೆ ಮಾತ್ರ ಗಪ್ ಚುಪ್. ರಂಗಯ್ಯ ನನಗಾಗಲಿ ನಮ್ಮ ಮನೆಯವರಿಗಾಗಲಿ ಏನೂ ತೊಂದರೆ ಮಾಡಿದವನಲ್ಲ, ಆದರೂ ರಂಗಯ್ಯನ ಭಯ ನಮಗೆ ಮಾತ್ರವಲ್ಲ, ಇಡೀ ಊರವರಿಗೆ ಇತ್ತು. ಅದಕ್ಕೆ ತಾನೆ, ಸಂಜೆ ಆರು ಗಂಟೆಗೆ ಎಲ್ಲ ಊಟ ಮಾಡಿ ಬಾಗಿಲು ಮುಚ್ಚಿ ಮಲಗಕ್ಕೆ ರೆಡಿ ಆಗ್ತ ಇದ್ದಿದ್ದು.

ರಂಗ ಪಂಡಿತರ ಮನೆಯವನು, ನಮ್ಮ ಮೇಷ್ಟ್ರ ಕೊನೆಯ ತಮ್ಮ. ಅವರು ನಮ್ಮ ಊರಿನವರಲ್ಲವಂತೆ, ದೂರದ ವೇಣೂರಿನಿಂದ ಬಂದು ನಮ್ಮ ಊರಿನಲ್ಲಿ ನೆಲೆ ನಿಂತವರು. ಉಳಿದವರಿಗೆ ಹೋಲಿಸಿದರೆ ತುಂಬಾ ದೊಡ್ಡ ಶ್ರೀಮಂತರು. ನೂರಾರು ಎಕರೆ ಭೂಮಿಯನ್ನು ಗೇಣಿ ಕೊಟ್ಟವರು. ಅದಕ್ಕೆ ರಂಗ ಎಲ್ಲರು ಬಾಯಲ್ಲು ರಂಗಯ್ಯ ಆಗಿದ್ದು.

ರಂಗಯ್ಯನ ಮನೆಯವರು ಶ್ರೀಮಂತರು ಮಾತ್ರ ಅಲ್ಲ, ವಿದ್ಯಾವಂತರು ಕೂಡ. ಪಂಡಿತರ ಮಕ್ಕಳ್ಳೆಲ್ಲ ಕೆಲಸದಲ್ಲಿ ಇದ್ದವರೆ, ರಂಗಯ್ಯನೊಬ್ಬನನ್ನು ಬಿಟ್ಟು. ಕಲಿತಿದ್ದರೂ ಕೂಡ ಯಾವ ಕೆಲಸಕ್ಕೂ ಸೇರದ ರಂಗಯ್ಯ, ಒಂದು ರೀತಿ ಉಂಡಾಡಿ ಗುಂಡನಾಗಿ ಬೆಳೆದಿದ್ದ. ಹಗಲ್ಲೆಲ್ಲ ಹುಡುಗರ ಜೊತೆ ಸೇರಿ ಊರೆಲ್ಲ ಸುತ್ತೋದು, ಹೊತ್ತು ಮುಳುಗೋ ಸಮಯ ಹೊಟ್ಟೆ ಹಸಿವೆ ಶುರು ಆದಾಗ ಮನೆ ದಾರಿ ನೋಡೋದು. ಊರೆಲ್ಲ ಸುತ್ತೊ ರಂಗಯ್ಯ ಸ್ವಲ್ಪ ಹುಡುಗು ಬುದ್ದಿ ಪುಂಡಾಟ ಮಾಡಿರಬಹುಡು, ಆದ್ರೆ ಯಾರಿಗೂ ಕೆಟ್ಟದ್ದು ಮಾಡಿದವನಂತು ಅಲ್ಲವೆ ಅಲ್ಲ. ನಾಲ್ಕು ಜನರ ಕೈಲಿ ಒಳ್ಳೆ ಹುಡ್ಗ ಅಂತಾನೆ ಅನ್ನಿಸ್ಕೊಂಡೊವ್ನು. ಆದ್ರೆ ಅವ್ನ ದುರದ್ರಷ್ಟ, ಒಂದು ದಿನಾನು ಮನೆಯವರ ಹತ್ರ ಒಂದು ಒಳ್ಳೆ ಮಾತು ಕೇಳಿಸ್ಕೊಂಡವನಲ್ಲ.ಒಂತರ ಊರಿಗೆ ಉಪಕಾರಿ ಮನೆಗೆ ಮಾರಿ ಅನ್ನೊ ಹಾಗೆ. ಎಲ್ಲ ಉದ್ಯೋಗದಲ್ಲೆ ಇರುವ ಮನೆಯಲ್ಲಿ ಇವನೊಬ್ಬ ಯಾರಿಗೂ ಬೇಡದವನಾಗಿದ್ದ. ಪ್ರತಿ ದಿನಾನು ಕೂಳಿಗೆ ದಂಡ ಎಂದು ಅಣ್ಣ ಅತ್ತಿಗೆಯವರ ಕೈಲಿ ಬೈಸಿ ಕೊಳ್ಳೋದೆ ರಂಗಯ್ಯನ ಜೀವನವಾಗಿತ್ತು.

ಮೊದ ಮೊದಲು ಸ್ವಲ್ಪ ದಿನ ಕ್ಯಾರೇ ಅನ್ನದ ರಂಗಯ್ಯ, ಕ್ರಮೇಣ ಸ್ವಲ್ಪ ಚಿಂತೆ ಮಾಡೋಕೆ ಶುರು ಮಾಡ್ಕೊಂಡ. ಬರುತ್ತ ಬರುತ್ತ ಅತ್ತಿಗೆಯವರ ಬಯ್ಗುಳ ಕೇಳಿ ಕೇಳಿ ಬೇಸರ ಪಟ್ಟು ಕೊಂಡ ರಂಗಯ್ಯ ಒಂತರ ಜೀವನದ ಮೇಲೆ ಜಿಗುಪ್ಸೆ ತಂದು ಕೊಂಡಿದ್ದ. ಒಂದು ದಿನ ಅಂತೂ ಜಗಳ ವಿಪರೀತಕ್ಕೆ ಹೋಗಿ ತಡೀಲಾರದೆ ಹಿತ್ತಲ ಮನೆಗೆ ಹೋಗಿ ಕುತ್ತಿಗೆಗೆ ನೇಣು ಹಾಕೊಂಡೇ ಬಿಟ್ಟ. ಮನೆಯವರು ಬಂದು ನೋಡೋದರ ಒಳಗೆ ಅರ್ಧ ಪ್ರಾಣ ಹೋಗಿತ್ತು. ಗಾಬರಿ ಬಿದ್ದ ಮನೆಯವರು ಪೋಲಿಸ್ಗೆ ಗೊತ್ತಾಗೋದು ಬೇಡಾ ಅಂತಾನೊ ಅಥವಾ ರಗಳೆ ಹೋಯ್ತು ಅಂತಾನೋ ಹೆಣ ಸುಡೋಕೆ ರೆಡಿ ಮಾಡೇ ಬಿಟ್ಟರು. ಗಡಿಬಿಡಿಯಲ್ಲಿ ಸುಡೋಕೆ ತೋಟದಲ್ಲೆ ಏರ್ಪಾಡು ಮಾಡಿದ್ರು. ಚಟ್ಟದ ಎದುರಿಗೆ ಕಲ್ಲು ಕುಟಿಗ ದೈವದ ಕಲ್ಲಿರುವುದು ನೋಡಿದ್ರೊ, ನೋಡಿನೂ ಸುಮ್ನೆ ಇದ್ದರೊ ಯಾರಿಗೂ ಗೊತ್ತಿಲ್ಲ. ಎಲ್ಲ ರೆಡಿಯಾಗುವಾಗ ಮಧ್ಯಾನ್ನ ಮಟ ಮಟ ಬಿಸಿಲು, ಇನ್ನೇನು ಚಟ್ಟಕ್ಕೆ ಬೆಂಕಿ ಇಟ್ಟರು ಎನ್ನುವಾಗ ಹೆಣ ಅಲುಗಾಡಕ್ಕೆ ಶುರು ಆಯ್ತು! ಹೆಣ ನಿಜವಾಗಿ ಅಲುಗಿತ್ತೆ, ರಂಗಯ್ಯ ಬದುಕಿದ್ದನೆ ಇಲ್ಲವೆ ಎಂದು ನೋಡಕ್ಕೆ ಯಾರೂ ಹೋಗದೆ ಬೆಂಕಿ ಇಟ್ಟೆ ಬಿಟ್ಟರು. ಕಲ್ಲು ಕುಟಿಗ ದೇವರ ಎದುರಿಗೇನೆ ಅರೆ ಸತ್ತ ರಂಗಯ್ಯನ ತಲೆ ಬುರುಡೆ ಫಳಾರ್ ಎಂದು ಸಿಡಿದು ಹೋಯ್ತು, ದೇಹ ಬೂದಿ ಆಗಿ ಹೋಯ್ತು.

ರಂಗಯ್ಯನ ಮೇಲೆ ಮನೆಯವರಿಗೆ ನಿಜವಾಗ್ಲೂ ದ್ವೇಷವಿತ್ತೊ, ಇಲ್ಲ ಹೆಣ ಅಲುಗಾಡೋದು ನೋಡಿ ಭಯ ಆಯ್ತೊ ಯಾರಿಗೂ ಗೊತ್ತಿಲ್ಲ, ಆದ್ರೆ ಸುಡೋವಾಗ ರಂಗಯ್ಯ ಸತ್ತಿರಲಿಲ್ಲ ಅನ್ನೊದು ಎಲ್ಲಾರಿಗೂ ಗೊತ್ತಾಗಿ ಹೋಯ್ತ್ತು. ಯಾಕಂದ್ರೆ ರಂಗಯ್ಯ ಎರಡೇ ದಿನದಲ್ಲಿ ವಾಪಾಸು ಬಂದು ಬಿಟ್ಟಿದ್ದ.

ಭೂತವಾಗಿ!

ಮೊದ ಮೊದಲು ರಂಗಯ್ಯ ವಾಪಸ್ಸು ಬಂದಿದ್ದ ಅಂದ್ರೆ ಯಾರೂ ನಂಬ್ತಾನೆ ಇರ್ಲಿಲ್ಲ. ಬಾರ್ಕೂರಿನ ಬೀಡಿ ವ್ಯಾಪಾರಿ ಅಂತೂ 'ರಂಗಯ್ಯನ ಪೆಂಗಯ್ಯನ' ಅಂದು ಗೇಲಿ ಮಾಡಿದ್ದ. ಚೌಳಿ ಕೆರೆ ಹತ್ರ ಒಬ್ಬನೆ ರಾತ್ರಿ ಹೋಗುವಾಗ ಹಿಂದುಗಡೆಯಿನಂದ ನಾಲ್ಕು ಬಿದ್ದಾಗಲೆ ಅವ್ನಿಗೆ ಗೊತ್ತಾಗಿದ್ದು, ರಂಗಯ್ಯ ನಿಜವಾಗ್ಲೂ ಇದ್ದಾನೆ ಅಂದು. ನಮ್ಮ ಚಿಕ್ಕಪ್ಪನಿಗೆ ಒಂತರ ಮೊಂಡು ದೈರ್ಯ ಆವಾಗ, ಸಂಜೆ ಏಳೂವರೆ ಹೊತ್ತಿಗೆ ನಾಲ್ಕು ಜನಾನ ಒಟ್ಟು ಮಾಡಿಕೊಂಡು ಹೊರಟೇ ಬಿಟ್ಟರು, ಟಾರ್ಚ್ ಹಿಡಕ್ಕೊಂಡು ಅಂಗಯ್ಯನ ಹುಡುಕೋಣ ಅಂತ. ಒಂದು ಅರ್ಧ ಗಂಟೆ ಪಂಡಿತರ ಮನೆ ಕಡೆ ಎಲ್ಲ ಹುಡುಕಿ, ಇನ್ನೇನು ರಂಗಯ್ಯ ಇಲ್ಲ ಅಂತ ವಾಪಾಸು ತೊಟದ ದಾರಿಯಲ್ಲಿ ಬರ್ತ ಇದ್ದಿದ್ರಂತೆ, ಅಲ್ಲಿ ನೇರಳೆ ಮರದ ಮೇಲೆ ಏನೋ ಚಿಕ್ಕ ಬೆಳಕು, ಬೆಳಕಿನ ಜೊತೆಗೆ ರಂಗಯ್ಯನ ಕೀರಲು ದ್ವನಿ, ತುಳುವಿನಲ್ಲಿ 'ಎನನ ನಾಡೆರೆಗ್ ಅಲ್ಪ ಪೂರ ದಾಯೆಗ್ ಪೋಪ, ನಿನ ಎದುರೆ ಉಲ್ಲೆ, ಸರೀ ತೂಲ' ಅಂತ. ಎದ್ದೆನೊ ಬಿದ್ದೆನೊ ಅಂತ ಒಂದೇ ಉಸಿಲರಲ್ಲಿ ಮನೆಗೆ ಬಂದ ಚಿಕ್ಕಪ್ಪನಿಗೆ ಐದು ನಿಮಿಷ ಆದ ಮೇಲೇ ಗೊತ್ತಾಗಿದ್ದು, ಟಾರ್ಚ್ ತೊಟದಲ್ಲೆ ಬಿಟ್ಟು ಬಂದೆ ಅಂದು.

ಆವಾಗಷ್ಟೆ ಇಂದಿರ ಗಾಂಧಿಯವರು ಡಿಕ್ಲರೇಷನ್ ಕಾನೂನು ಜಾರಿಗೆ ತಂದಿದ್ದರು, ಉಳುವವನೆ ಹೊಲದೊಡೆಯ ಅಂತ. ಆ ಕಾನೂನು ಪ್ರಕಾರ ಪಂಡಿತರ ಮನೆಯ ಅರ್ದಕ್ಕಿಂತ ಜಾಸ್ತಿ ಭೂಮಿ ಅವರ ಒಕ್ಕಲುಗಳಿಗೆ ಹೋಗ ಬೇಕಿತ್ತು. ನಮ್ಮ ಮನೆ ಸಮೀಪಾನೆ ಇರೋ ಬೋಳು, ಕಾಳು ಹಾಗು ಚೀರು ಅನ್ನುವವರು ಅದಕ್ಕಾಗಿ ಡಿಕ್ಲರೇಷನ್ ಅಪ್ಲಿಕೇಷನ್ ಬೇರೆ ಹಾಕಿದ್ದರು. ಆದ್ರೆ ರಂಗಯ್ಯ ಬಿಡಬೇಕಲ್ಲ, ಅಪ್ಲಿಕೇಷನ್ ಹಾಕಿದವ್ರಿಗೆ ಸಾಕೋ ಬೇಕೋ ಅನ್ನುವ ಹಾಗೆ ಮಾಡಿ, ಹೊಸ ಪಂಚಾಯ್ತಿ ಸೇರಿಸಿ ಪಂಡಿತರಿಗೆ ಅರ್ಧ ಜಮೀನು ವಾಪಾಸು ತರಿಸೇ ಬಿಟ್ಟ.

ಈ ಘಟನೆ ಆದ ಮೇಲೆ, ರಂಗಯ್ಯನಿಗೆ ಜಾಸ್ತಿ ಪಬ್ಲಿಸಿಟಿ ಸಿಕ್ಕಿದ್ದು. ಎಲ್ಲೆಲ್ಲಿಂದಲೊ ರಂಗಯ್ಯನ ನೊಡ್ಬೇಕು ಅಂತ ಜನಾ ಬರ್ತ ಇದ್ದಿದ್ರು. ಒಂದು ಸಲ ಜಿಲ್ಲಾಧಿಕಾರಿಗಳು ಬಂದಿದ್ರಂತೆ. ಕೆಲವೊಮ್ಮೆ ಅಂತು ಬಾರಕೂರು ಬ್ರಿಡ್ಜ್ ತನಕ ಜನ ಇರ್ತಿದ್ರಂತೆ. ಕಳ್ಳ ಚಂದ್ರನ್ ಇದ್ದಿದ್ದು ಕೂಡ ಅದೇ ಟೈಮಲ್ಲಿ. ರಂಗಯ್ಯ ವಾಪಾಸ್ ಬಂದಿದ್ದು ಒಂದು ರೀತೀಲಿ ಜನರಿಗೆ ಒಳ್ಳೇದೆ ಆಗಿತ್ತು. ಏನೋ ಒಂದು ಧೈರ್ಯ, ರಂಗಯ್ಯ ಇರೋವಾಗ ಚಂದ್ರನ್ ಕೈಲಿ ಎನೂ ಮಾಡಕ್ಕಾಗಲ್ಲ ಅಂತ. ರಂಗಯ್ಯ ಸತ್ತ ಮೇಲೂ ಕೂಡ ಊರವರಿಗೆ ಅಷ್ಟೇನೂ ತೊಂದರೆ ಕೊಟ್ಟಿರಲ್ಲಿಲ್ಲ. ಎಷ್ಟೋ ಸಲ ಒಬ್ಬೊಬ್ಬರೆ ರಾತ್ರಿ ಹೋಗುವಾಗ ಚೌಳಿ ಕೆರೆ ತನಕ ರಂಗಯ್ಯ ಟಾರ್ಚ್ ಹಿಡಕ್ಕೊಂಡು ಬಿಟ್ಟದ್ದು ಉಂಟು.

ನಮ್ಮಮ್ಮ ತುಂಬಾ ಸಲ ರಂಗಯ್ಯ ಮಾತಾಡೊದನ್ನ ಕೇಳಿದ್ರಂತೆ. ಪಂಡಿತರ ಮನೆಯವ್ರನ್ನ ಬಿಟ್ರೆ ತುಳು ಬರ್ತ ಇದ್ದಿದ್ದು ನಮ್ಮೂರಲ್ಲಿ ನಮ್ಮಮ್ಮನಿಗೆ ಮಾತ್ರ. ಹಾಗಾಗಿ ರಂಗಯ್ಯ ಅಂದ್ರೆ ನಮ್ಮಮ್ಮನಿಗೆ ಸ್ವಲ್ಪ ವಿಶೇಷ ಆಸ್ತೆ. ಒಂದೆರಡು ಸಲ ಮಾತಡಿದ್ದೂ ಉಂಟು. ನಮ್ಮನೆಯಲ್ಲಿ ಒಂದು ಸಲ ಹರಿಕೆ ಬಯಲಾಟ ಮಾಡಿದ್ರು. ಮಾರನೆ ದಿನ ಬೆಳಿಗ್ಗೆ ಪಂಡಿತರ ಮನೆಯಲ್ಲಿ ರಂಗಯ್ಯ ಹೇಳ್ತ ಇದ್ನಂತೆ 'ತಮ್ಮಯ್ಯನ ಮನೆ ಆಟ ಏನೇನೂ ಚೆನ್ನಾಗಿರಲ್ಲಿಲ್ಲ. ನಾನು ನೇರಳೆ ಮರದಲ್ಲಿ ಕೂತು ಸ್ವಲ್ಪ ನೋಡಿ, ಬೇಜಾರಾಗಿ ಮಲಗಿ ಬಿಟ್ಟೆ' ಅಂತ.

ಪಂಡಿತರ ಕೆಲವು ಬಂಧುಗಳು ಮುಂಬೈಯಲ್ಲಿ ಇದ್ರಂತೆ. ಇದ್ದಕ್ಕಿದ್ದಂತೆ ರಂಗಯ್ಯ ಒಂದು ದಿನ ಮನೆಗೆ ಬಂದು ಹೇಳಿದ್ನಂತೆ. 'ನಂಗೆ ಇಲ್ಲಿ ಸ್ವಲ್ಪ ಬೋರಾಗ್ತ ಇದೆ, ಸ್ವಲ್ಪ ದಿನ ಬಾಂಬೆಗೆ ಹೋಗಿ ಬರ್ತೇನೆ. ಟಿಕೆಟಿಗೆ ಇಪ್ಪತ್ತು ರುಪಾಯಿ ಕೊಡಿ ಅಂತ'. ಮನೆಯವ್ರು ಇಪ್ಪತ್ತು ರುಪಾಯಿ ತೆಗೆದು ಉಪ್ಪರಿಗೆ ಮೆಟ್ಟಿಲ ಹತ್ರ ಇಟ್ರು. ಮಾರನೆ ದಿನ ನೋಡ್ತಾರೆ, ಉಪ್ಪರಿಗೆ ಹತ್ರ ಇದ್ದ ಇಪ್ಪತ್ತು ರುಪಾಯಿ ಇಲ್ಲ, ಹಾಗೆಮೂರು ದಿನ ರಂಗಯ್ಯನ ಸುದ್ದೀನೂ ಇಲ್ಲ. ನಾಲ್ಕನೆ ದಿನ ಎದ್ದು ನೋಡ್ತಾರೆ, ಉಪ್ಪರಿಗೆ ಮೆಟ್ಟಿಲ ಪಕ್ಕದಲ್ಲಿ ಇಪ್ಪತ್ತು ರುಪಾಯಿ ವಾಪಾಸು ಬಂದು ಬಿದ್ದಿದೆ, ಸ್ವಲ್ಪ ಹೊತ್ತಲಿ ರಂಗಯ್ಯನ ಕೀರಲು ದ್ವನಿ 'ಬಾಂಬೆಗೆ ಹೋಗಿ ಬಂದೆ, ಆದ್ರೆ ಬಸ್ಸಲ್ಲಿ ಯಾರೂ ಟಿಕೆಟ್ಟೆ ಕೇಳ್ಲಿಲ್ಲ. ನಿಮ್ಮ ಇಪ್ಪತ್ತು ರುಪಾಯಿ ವಾಪಾಸ್ಸು ತಗೊಳ್ಳಿ' ಅಂತ.

ಹೀಗೆ ತುಂಬಾ ಕೆಲಸ ಮಾಡಿದ್ದ ರಂಗಯ್ಯ ಭೂತವಾಗಿ, ಆದ್ರೆ ಯಾರಿಗೂ ಸುಮ್ನೆ ಸುಮ್ನೆ ಹೇಳಿ ಕೊಳ್ಳುವಂತ ತೊಂದ್ರೆ ಏನೂ ಕೊಟ್ಟಿರಲ್ಲಿಲ್ಲ. ಡಿಕ್ಲರೇಷನ್ ವಿಷ್ಯದಲ್ಲಿ ಸ್ವಲ್ಪ ಗಲಾಟೆ ಮಾಡಿದ್ದು ಬಿಟ್ರೆ, ಮನೆಯವರಿಗೆ ಸ್ವಲ್ಪ ಹೆದ್ರಿಸ್ತಿದ್ದ, ಅಷ್ಟೆ. ಯಾರಿಗೂ ಪ್ರಾಣ ಹಾನಿ ಮಾಡಿರ್ಲಿಲ್ಲ. ಮನೆಯವ್ರು ಕೊಟ್ಟ ಮಾನಸಿಕ ಹಿಂಸೆಯೆಲ್ಲ ರಂಗಯ್ಯ ಸ್ವಲ್ಪ ಮರ್ತಿದ್ದಾನೆ ಅಂದ್ಕೊಂಡಿದ್ರು. ಆದ್ರೆ ಎಲ್ಲ ಸುಳ್ಳಾಗಿತ್ತು, ಮನುಷ್ರೇ ಮರಿಯಲ್ಲ, ಇನ್ನು ಭೂತಗಳು ಮರೀತಾವ? ಸ್ವಲ್ಪ ವರ್ಷದಲ್ಲೆ ತನಗಾದ ನೋವಿಗೆ ಬಡ್ಡಿ ಹಾಕಿ ರಂಗಯ್ಯ ಪ್ರತೀಕಾರ ತೀರಿಸ್ಕೊಂಡಿದ್ದ. ಶಾಲೆ ಬಿಟ್ಟು ಕೈ ಕಾಲು ತೊಳೆದು ಕೊಂಡು ಬರ್ತೀವಿ ಅಂತ ಕೆರೆಗೆ ಹೋಗಿದ್ದ ಅತ್ತಿಗೆಯವ್ರ ಮೂರು ಮಕ್ಳೂ ವಾಪಾಸು ಬರ್ಲೇ ಇಲ್ಲ. ಮೂರು ಜನರನ್ನು ನೀರಲ್ಲೆ ಮುಳುಗಿಸಿ ಮುಗಿಸಿ ಬಿಟ್ಟಿದ್ದ ರಂಗಯ್ಯ!

ಆಗ್ಲೇ ಗೊತ್ತಾಗಿದ್ದು ಮನೆಯವ್ರಿಗೆ, ಭೂತ ಯಾವತ್ತಿದ್ರೂ ಭೂತಾನೆ ಅಂತ. ಈ ಘಟನೆ ಆದ ಕೂಡ್ಲೆ ಮಂತ್ರವಾದಿಗಳನ್ನ ಕರೆಸಿ ಕೂಡಲೆ ರಂಗಯ್ಯನಿಗೆ ದಿಗ್ಭಂದನ ಹಾಕಿಸಿ ಬಿಟ್ರು. ಆವತ್ತಿಂದ ಇವತ್ತಿನ ತನಕ ರಂಗಯ್ಯ ಯಾರಿಗೂ ಕಾಣಿಸಿ ಕೊಂಡಿಲ್ಲ.

Tuesday, April 15, 2008

ಕೋಳಿ ತಿನ್ನೋದ್ ತಪ್ಪಾ?

ನಾವೆಲ್ಲ ಸೇರಿ ಒಟ್ಟು ಎಂಟು ಜನ ಫ್ರೆಂಡ್ಸ್. ಕಳೆದ ಐದು ವರ್ಷದಿಂದ ಏನು ಕೆಟ್ಟ ಕೆಲ್ಸ ಮಾಡಿದಿದ್ರೂ ಎಲ್ಲಾ ಸೇರಿಯೆ ಮಾಡಿದ್ದು. ಎಲ್ಲಾ ಒಂದೆ ಜಾತಿ, ಯಾರು ಜಾಸ್ತಿ ಯಾರು ಕಡಿಮೆ ಅಂತ ಗೊತ್ತಾಗಲ್ಲ. ಆದ್ರೂ ನಮ್ಮ ಗುಂಪಲ್ಲಿ ನಾನೊಬ್ಬ ಸ್ವಲ್ಪ different. ಒಂತರ ಗುಂಪಿಗೆ ಸೇರದ ಪ್ರಾಣಿ. ಯಾಕಂದ್ರೆ ನಮ್ಮ ಗ್ರೂಪಲ್ಲಿ ಕೋಳಿ ತಿನ್ನೋನು ನಾನೊಬ್ನೆ. ಕೆಲವರು ಈಗೀಗ ಮೊಟ್ಟೆ ತಿಂತಾರೆ, ಆದ್ರೆ ಮೊಟ್ಟೆ ಇಟ್ರವ್ರನ್ನ ತಿನ್ನೊ ಅಷ್ಟು ತಾಕತ್ತಿಲ್ಲ.

ಎಷ್ಟೊ ಸಲ ಆಲೋಚನೆ ಮಾಡೋನು, ಇವ್ರೆಲ್ಲ ಯಾಕೆ ಕೋಳಿ ತಿನ್ನಲ್ಲ ಅಂತ. ಎಲ್ಲ ಕೆಟ್ಟ ಕೆಲ್ಸ ಮಾಡ್ತಾರೆ, ಇದೊಂದು ಮಾಡಕ್ಕೆ ಏನು problem ಅಂತ. ಏನು ಏನು?? ಕೋಳಿ ತಿನ್ನೊದು ನಿಜವಾಗಿ ಕೆಟ್ಟ ಕೆಲ್ಸಾನ? ಇರಬಹುದು, ಯಾಕಂದ್ರೆ ಶಾಲೆಯಲ್ಲೆಲ್ಲ 'ಪ್ರಾಣಿ ಹಿಂಸೆ ಮಹಾ ಪಾಪ ಮಹಾ ಪಾಪ' ಅಂತಾನೆ ನಾನು ಓದಿದ್ದು. ಎಲ್ಲ ಕಡೆ ಭಾಷಣ ಮಾಡಿ ಕೆಲ ಕಡೆ prize ತಗೊಂಡಿದ್ದು.

ಅಂದ್ರೆ ನಿಜವಾಗ್ಲೂ ನಾನು ಇಷ್ಟು ದಿನ ಪಾಪ ಮಾಡ್ತಿದ್ನ? ಮನೆಯಲ್ಲಿ ಯಾವಗ್ಲೂ ಕೋಳಿ ಕಡಿಯುವಾಗ 'ಕೊಂದ ಪಾಪ ತಿಂದು ಪರಿಹಾರ' ಅಂತಾ ಇದ್ರು. ಚಿಕ್ಕವನಿರುವಾಗ ನಾನು ಹಾಗೆ ಅಂದು ಕೊಂಡು ತಿಂತಾ ಇದ್ದೆ. ಈವಾಗ ಬುದ್ದಿ ಬಂದಿದೆ ಅನ್ಸತ್ತೆ. Atleast'ತಿಂದು ಪರಿಹಾರ' ಅಂದ್ರೆ 'ಪ್ರಾಯಶ್ಚಿತ್ತ ಪಟ್ಟು ಮತ್ತೆ ಮಾಡದೆ ಇರುವದು' ಅಂತ ಗೊತ್ತಾಗಿದೆ. ಅಂದ್ರೆ ನಾನೀಗ ಕೋಳಿ ತಿನ್ನೊದು ಬಿಡಬೇಕಾ?

ಸ್ವಲ್ಪ ಆಲೋಚನೆ ಮಾಡೋ ವಿಷಯ. ಆದ್ರೂ ಅದು ನಿಜವಾಗಿ ತಪ್ಪಾದ್ರೆ ಬಿಡಬೇಕಾಗತ್ತೆ. ಅದ್ರೂ ನಾನು ಮಾತ್ರಾ ಯಾಕೆ ಬಿಡಬೇಕು? ಉಳಿದ ಏಳು ಜನಾನು ಬಿಡ್ಲಿ. ಅವ್ರೇನೂ ಕೋಳಿ ತಿನ್ನಲ್ವಲ್ಲ, ಹಾಗಾದ್ರೆ ಸಸ್ಯ ತಿನ್ನೋದು ಬಿಡಲಿ. ಅಯ್ಯೋ, ಅವ್ರು ತಿನ್ನೊದು ಸಸ್ಯ ಮಾತ್ರ, ಅದಿಲ್ಲಾಂದ್ರೆ ಏನು ಮಣ್ಣು ತಿನ್ನೋದಾ? ಹಾಗಾದ್ರೆ ಸ್ವಲ್ಪ ಆಲೋಚನೆ ಮಾಡೋಣ? ನಾನ್ಯಾಕೆ ಕೋಳಿ ತಿನ್ನೋದು ಬಿಡಬೇಕು? ಎಲ್ಲ ಪುಸ್ತಕದಲ್ಲಿ ಹೇಳಿದ್ದಾರೆ..ಹೌದು, ಹಂಗಂತ ನಾವೇನೂ ಎಲ್ಲ ಪುಸ್ತಕ ನೊಡೇ ಮಾಡ್ತೀವ? ಪುಸ್ತಕದಲ್ಲೆ ಯಾಕೆ ತಪ್ಪು ಇರಬಾರ್ದು? ನಮ್ಮ ಹಾಗೆ ಯಾರೊ repeat ಮಾಡ್ಕೊಂಡು ಬರ್ದಿದಿದ್ರೆ?

ok, ಕೋಳಿ ತಿನ್ನೊದ್ರಿಂದ ಪ್ರಾಣಿ ಹಿಂಸೆ ಆಗತ್ತೆ. ಕೋಳಿಗೆ ನೋವಾಗತ್ತೆ. ಆಂ..ಸಸ್ಯ ಕೊಯ್ಯೊವಾಗ ಅದಕ್ಕೆ ನೋವಾಗಲ್ವ? ಅರೆ..ಹೌದಲ್ಲ. ಐದನೆ ಕ್ಲಾಸಲ್ಲಿ ಸರ್ ಜಗದೀಶ್ ಚಂದ್ರ ಭೋಸ್ ಹೇಲಿದ್ರಲ್ಲ..ಸಸ್ಯಗಳಿಗೂ ಜೀವ ಇದೆ ಅಂತ. ಅವಕ್ಕೂ ನೋವಾಗತ್ತೆ ಅಂತ.

ಪ್ರಾಣಿ ಹಿಂಸೆ ಒಂದೆ ಕಾರಣ ಆದ್ರೆ, ಸಸ್ಯಹಾರಿಗಳೂ ಹಿಂಸೆ ಮಾಡ್ತಾರೆ. ಹಂಗ್ ನೋಡಿದ್ರೆ ಸಸ್ಯ ಹಿಂಸೇನೆ ಮಹಾ ಪಾಪ, ಕೋಳಿಗೆ atleast ಓಡಿ ಹೋಗಿ ತಪ್ಪಿಸ್ಕೊಳ್ಳ ಬಹುದು, ಪಾಪ, ಸಸ್ಯಕ್ಕೆ ಓಡಲೂ ಆಗಲ್ಲ, ಅಷ್ಟು ಪಾಪದ ಸಸ್ಯಾನ ಕೊಲ್ಲೋದಾ? ಮಹಾ ಪಾಪ, ಮಹಾ ಪಾಪ.

ಇಲ್ಲ ಇಲ್ಲ, ಸಸ್ಯ ಕೊಲ್ಲೊದೇನೂ ಪಾಪ ಅಲ್ಲ. ನಾವೇ ನೆಟ್ಟು ನೀರು ಹಾಕಿ ಬೆಳೆಸಿದ್ದದು. ನಾವು ಕಟ್ಟು ಮಾಡಿಲ್ಲ ಅಂದ್ರು, ಅದು time ಆದ ಕೂಡ್ಲೆ ತನ್ನಿಂದ ತಾನೆ ಸಾಯತ್ತೆ.

ಅರೇ..ಹೌದಾ. ಕೋಳಿ ಏನು ನಾನು ಸಾಕಿದ್ದಲ್ವ? ಅದು ಚಿಕ್ಕದಿರುವಾಗ ಎಷ್ಟು ಸರಿ ಕಾಗೆನ ದಿನಾ ಓಡ್ಸಿ ಅದನ್ನ ಕಾಪಾಡಿಲ್ಲ ನಾನು. ನಾನಿಗ ಅದನ್ನ ಕಟ್ಟ್ ಮಾಡಿಲ್ಲ ಅಂದ್ರೆ ಅದೇನು ಸಾವ್ರ ವರ್ಷ ಬದಕತ್ತ? ಇಲ್ವಲ್ಲ. ಅದೂ ಒಂತರ ನಿಮ್ಮ ಸಸ್ಯದ ಹಾಗೆ. ಜಾಸ್ತಿ ಅಂದ್ರೆ ಸ್ವಲ್ಪ ಕೂಗತ್ತೆ, ಓಡತ್ತೆ ಅಷ್ಟೆ. ಅದು ಬಿಡಿ, ಸಸ್ಯ ಆಗ್ಲಿ ಕೋಳಿ ಆಗ್ಲಿ, ಸಾಕಿದ್ದು ನಾವೇ ಅದ್ರೂ ಅದನ್ನ ಕೊಲ್ಲೋ ಅದಿಕಾರ ನಮಗಿಲ್ಲ. ನಮ್ಮನ್ನೇ ಈಗ ಸಾಕಿದವ್ರು ಕೊಲ್ಲಕ್ಕೆ ಬಂದ್ರೆ ಸುಮ್ನಿರ್ತೀವ?

ಆಲೊಚನೆ ಮಾಡ್ತಾ ಹೋದ್ರೆ, ಸಸ್ಯ ತಿನ್ನೋದು ಸರಿಯಾದ್ರೆ, ಕೋಳಿ ತಿನ್ನೊದು ಸರೀನೆ, ಕುರಿ ತಿನ್ನೋದು ಸರೀನೆ, ಮನುಶ್ಯರನ್ನ ತಿನ್ನೊದು ಸರೀನೆ. ಸಸ್ಯಕ್ಕೆ ನೋವಾದ್ರೆ ಮುಚ್ಕೊಂಡು ಕೂತ್ ಕೊಳ್ಳತ್ತೆ. ಅದಕ್ಕೆ ಯಾರೂ ಕ್ಯಾರೇ ಅನ್ನಲ್ಲ. ಕೋಳಿಗೆ ನೋವಾದ್ರೆ ಸ್ವಲ್ಪ ಕೂಗತ್ತೆ. ಅದಕ್ಕೆ ಸ್ವಲ್ಪ ಗಲಾಟೆ ಮಾಡ್ತಾರೆ. ಕುರಿಗೆ ನೋವಾದ್ರೆ ಜೋರಾಗ್ ಕೂಗತ್ತೆ, ಮೇನಕ ಗಾಂಧಿಗೆ ಕೇಳುವಷ್ಟು ಜೋರು, ಅದಕ್ಕೆ ಎಲ್ಲ ಜೋರಾಗಿ ಕಿರಿಚಾಡ್ತಾರೆ.ಅದೆ ಮನುಶ್ಯರಿಗೆ ಸ್ವಲ್ಪ ನೋವಾದ್ರೂನೂ ಆಕಾಶ ಭೂಮಿ ಒಂದು ಮಾಡ್ತಾರೆ. ಒಟ್ನಲ್ಲಿ ಯಾರು ಜೋರಾಗಿ ಕೂಗ್ತಾರೋ, ಅವ್ರ ದ್ವನಿ ಮಾತ್ರ ನಮಗೆ ಕೇಳತ್ತೆ.

ನಮ್ಮಗ ಏನಾದ್ರೂ ವಿಜ್ಞಾನಿ ಆದ್ರೆ ಮೊದ್ಲು ಅವ್ನಿಗೆ ಕೂಗ್ಲಿಕ್ಕೆ ಮತ್ತೆ ಒಡ್ಲಿಕ್ಕೆ ಆಗ್ದೆ ಇರೋ ಕೋಳಿ ಮಾಡಕ್ಕೆ ಹೇಳ್ತೀನಿ

Sunday, April 13, 2008

ಮುನ್ನುಡಿ

http://achatra.blogspot.com/2008/03/after-4-years-of-undergrads-in-computer.html
ಸುಮ್ನೆ ಯಾಕೆ ಅದನ್ನೆ ರಿಪೀಟ್ ಮಡೊದು ಅಂತ. ಈ ಆರು ವರ್ಷ ರಿಪೀಟ್ ಮಾಡಿ ಮಾಡಿ ನಂಗೂ ಬೇಜಾರಾಗಿ ಹೋಗಿದೆ. ಬೇಜಾರಾಗಿದೆ ಅಂತ ರಿಪೀಟ್ ಮಡೋದು ಶುರು ಮಾಡಿದ್ರೆ, ರಿಪೀಟ್ ಮಾಡಿ ಮಾಡಿ ಬೇಜಾರಾಗತ್ತೆ ಅಂತ ಈವತ್ತೆ ಗೊತ್ತಾಗಿದ್ದು.

ನಂದೂ ಒಂತರ ನಿಂದೇ ರಾಗ ಅಣ್ಣ, ಅದ್ರೆ ನೀ ಬರೀತಾ ಇದ್ದಿ ಅಂತ ನಾನ್ ಶುರು ಹಚ್ಕೊಲ್ಲಿಲ್ಲ. ಯಾಕಂದ್ರೆ ನಂದು Jscript ಟೀಮ್ ಅಲ್ವಲ್ಲ.

ಯಾವಾಗ್ಲೂ ಆಕಾಶ್ದಲ್ಲಿ ತೇಲಾಡುವಾಗ ಒಂದ್ ಒಂದ್ ಸಲ ಅನ್ಸೋದು, ನಾನೂ ಎನಾದ್ರೂ ಬರೀಬೇಕು ಅಂತ. ನಾನ್ ಬರ್ದಿದನ್ನ atleast ನಾನಾದ್ರೂ ಒದಿ ಕುಶಿ ಪಡ್ಬೇಕು ಅಂತ. ಆದ್ರೇನ್ಮಾಡೊದು, ಭೂಮಿ ಮೇಲೆ ಹುಟ್ಟಿ ಬೆಳೆದ ಜೀವ. ಜಾಸ್ತಿ ಹೊತ್ತು ಭೂಮಿ ಬಿಟ್ಟಿರಕ್ಕೆ ಆಗಲ್ಲ. ನಂಗಿನ್ನೂ ಅನ್ನಿಸ್ತನೆ ಇದೆ, ನಾನ್ ಬರಿಯೋದು ಅಂದ್ರೆ ಒಂತರ ಆಕಾಶಕ್ಕೆ ಏಣಿ ಇಟ್ಟಂಗೆ ಅಂತ. ಅದ್ರೂ ಒಂದ್ ಕೈ ನೋಡೇ ಬಿಡೋಣ. ಬಂದ್ರೆ ಬೆಟ್ಟ, ಹೋದ್ರೆ ..ಹೋಗ್ಲಿ ಬಿಡಿ.

ನಂಗೆ ಮೊದ್ಲಿಂದ್ಲು ಸ್ವಲ್ಪ serious ಆಗಿ ಮಾತಾಡ್ಬೇಕು, serious ಆಗಿ ಇರ್ಬೇಕು ಅಂತ. ಅದ್ರೆ ಯಾಕೊ ಹಾಗೆ ಮಾಡ್ಲಿಕ್ಕೆ ಹೋದ ಕೂಡ್ಲೆ ಎಲ್ಲ ನಗಕ್ಕೆ ಸ್ಟರ್ಟ್ ಮಾಡ್ತಾರೆ. ಅದಕ್ಕೆಲ್ಲ ಇದೆ ಒಳ್ಳೆ ಜಾಗ ಅನ್ಸತ್ತೆ, ಯಾರಿಗೂ ನನ್ ಮುಖ ಕಾಣಲ್ವಲ್ಲ.

ಇನ್ನೊಂದ್ ಅಶೆ ಅಂದ್ರೆ life ಅಲ್ಲಿ ಒಂದಾದ್ರೂ ಕವಿತೆ ಬರೀ ಬೆಕೂ ಅಂತ. ಈಗ ಅದಕ್ಕೂ ಒಂದು ದಾರಿ ಸಿಕ್ಕಿದೆ, ಕವಿತೆ ಬರೀತೀನಿ, ಅದ್ರೆ ಹಾಡಕ್ಕೆ ಕಿಶೋರ್ ಗೆ ಮಾತ್ರ ಹೇಳ್ತೀನಿ, ನಂಗೆ guarantte ಇದೆ, ಯಾರೂ ನನ್ನ ಉಗಿಯಲ್ಲ ಅಂತ :)