Thursday, April 24, 2008

ರಂಗಯ್ಯನ ಕತೆ

ಆಗಿನ್ನೂ ನಾನು ತುಂಬಾ ಚಿಕ್ಕವನು. ಯಾರ ಮಾತು ಕೇಳದ ವಯಸ್ಸು, ಯಾರಿಗೂ ಹೆದರದ ಮನಸ್ಸು. ಇಡೀ ರಾತ್ರಿ ಅಳೋ ಸ್ವಭಾವ ಬೇರೆ. ಆದ್ರೆ ರಂಗಯ್ಯನ ಹೆಸರು ಕೇಳಿದ್ರೆ ಮಾತ್ರ ಗಪ್ ಚುಪ್. ರಂಗಯ್ಯ ನನಗಾಗಲಿ ನಮ್ಮ ಮನೆಯವರಿಗಾಗಲಿ ಏನೂ ತೊಂದರೆ ಮಾಡಿದವನಲ್ಲ, ಆದರೂ ರಂಗಯ್ಯನ ಭಯ ನಮಗೆ ಮಾತ್ರವಲ್ಲ, ಇಡೀ ಊರವರಿಗೆ ಇತ್ತು. ಅದಕ್ಕೆ ತಾನೆ, ಸಂಜೆ ಆರು ಗಂಟೆಗೆ ಎಲ್ಲ ಊಟ ಮಾಡಿ ಬಾಗಿಲು ಮುಚ್ಚಿ ಮಲಗಕ್ಕೆ ರೆಡಿ ಆಗ್ತ ಇದ್ದಿದ್ದು.

ರಂಗ ಪಂಡಿತರ ಮನೆಯವನು, ನಮ್ಮ ಮೇಷ್ಟ್ರ ಕೊನೆಯ ತಮ್ಮ. ಅವರು ನಮ್ಮ ಊರಿನವರಲ್ಲವಂತೆ, ದೂರದ ವೇಣೂರಿನಿಂದ ಬಂದು ನಮ್ಮ ಊರಿನಲ್ಲಿ ನೆಲೆ ನಿಂತವರು. ಉಳಿದವರಿಗೆ ಹೋಲಿಸಿದರೆ ತುಂಬಾ ದೊಡ್ಡ ಶ್ರೀಮಂತರು. ನೂರಾರು ಎಕರೆ ಭೂಮಿಯನ್ನು ಗೇಣಿ ಕೊಟ್ಟವರು. ಅದಕ್ಕೆ ರಂಗ ಎಲ್ಲರು ಬಾಯಲ್ಲು ರಂಗಯ್ಯ ಆಗಿದ್ದು.

ರಂಗಯ್ಯನ ಮನೆಯವರು ಶ್ರೀಮಂತರು ಮಾತ್ರ ಅಲ್ಲ, ವಿದ್ಯಾವಂತರು ಕೂಡ. ಪಂಡಿತರ ಮಕ್ಕಳ್ಳೆಲ್ಲ ಕೆಲಸದಲ್ಲಿ ಇದ್ದವರೆ, ರಂಗಯ್ಯನೊಬ್ಬನನ್ನು ಬಿಟ್ಟು. ಕಲಿತಿದ್ದರೂ ಕೂಡ ಯಾವ ಕೆಲಸಕ್ಕೂ ಸೇರದ ರಂಗಯ್ಯ, ಒಂದು ರೀತಿ ಉಂಡಾಡಿ ಗುಂಡನಾಗಿ ಬೆಳೆದಿದ್ದ. ಹಗಲ್ಲೆಲ್ಲ ಹುಡುಗರ ಜೊತೆ ಸೇರಿ ಊರೆಲ್ಲ ಸುತ್ತೋದು, ಹೊತ್ತು ಮುಳುಗೋ ಸಮಯ ಹೊಟ್ಟೆ ಹಸಿವೆ ಶುರು ಆದಾಗ ಮನೆ ದಾರಿ ನೋಡೋದು. ಊರೆಲ್ಲ ಸುತ್ತೊ ರಂಗಯ್ಯ ಸ್ವಲ್ಪ ಹುಡುಗು ಬುದ್ದಿ ಪುಂಡಾಟ ಮಾಡಿರಬಹುಡು, ಆದ್ರೆ ಯಾರಿಗೂ ಕೆಟ್ಟದ್ದು ಮಾಡಿದವನಂತು ಅಲ್ಲವೆ ಅಲ್ಲ. ನಾಲ್ಕು ಜನರ ಕೈಲಿ ಒಳ್ಳೆ ಹುಡ್ಗ ಅಂತಾನೆ ಅನ್ನಿಸ್ಕೊಂಡೊವ್ನು. ಆದ್ರೆ ಅವ್ನ ದುರದ್ರಷ್ಟ, ಒಂದು ದಿನಾನು ಮನೆಯವರ ಹತ್ರ ಒಂದು ಒಳ್ಳೆ ಮಾತು ಕೇಳಿಸ್ಕೊಂಡವನಲ್ಲ.ಒಂತರ ಊರಿಗೆ ಉಪಕಾರಿ ಮನೆಗೆ ಮಾರಿ ಅನ್ನೊ ಹಾಗೆ. ಎಲ್ಲ ಉದ್ಯೋಗದಲ್ಲೆ ಇರುವ ಮನೆಯಲ್ಲಿ ಇವನೊಬ್ಬ ಯಾರಿಗೂ ಬೇಡದವನಾಗಿದ್ದ. ಪ್ರತಿ ದಿನಾನು ಕೂಳಿಗೆ ದಂಡ ಎಂದು ಅಣ್ಣ ಅತ್ತಿಗೆಯವರ ಕೈಲಿ ಬೈಸಿ ಕೊಳ್ಳೋದೆ ರಂಗಯ್ಯನ ಜೀವನವಾಗಿತ್ತು.

ಮೊದ ಮೊದಲು ಸ್ವಲ್ಪ ದಿನ ಕ್ಯಾರೇ ಅನ್ನದ ರಂಗಯ್ಯ, ಕ್ರಮೇಣ ಸ್ವಲ್ಪ ಚಿಂತೆ ಮಾಡೋಕೆ ಶುರು ಮಾಡ್ಕೊಂಡ. ಬರುತ್ತ ಬರುತ್ತ ಅತ್ತಿಗೆಯವರ ಬಯ್ಗುಳ ಕೇಳಿ ಕೇಳಿ ಬೇಸರ ಪಟ್ಟು ಕೊಂಡ ರಂಗಯ್ಯ ಒಂತರ ಜೀವನದ ಮೇಲೆ ಜಿಗುಪ್ಸೆ ತಂದು ಕೊಂಡಿದ್ದ. ಒಂದು ದಿನ ಅಂತೂ ಜಗಳ ವಿಪರೀತಕ್ಕೆ ಹೋಗಿ ತಡೀಲಾರದೆ ಹಿತ್ತಲ ಮನೆಗೆ ಹೋಗಿ ಕುತ್ತಿಗೆಗೆ ನೇಣು ಹಾಕೊಂಡೇ ಬಿಟ್ಟ. ಮನೆಯವರು ಬಂದು ನೋಡೋದರ ಒಳಗೆ ಅರ್ಧ ಪ್ರಾಣ ಹೋಗಿತ್ತು. ಗಾಬರಿ ಬಿದ್ದ ಮನೆಯವರು ಪೋಲಿಸ್ಗೆ ಗೊತ್ತಾಗೋದು ಬೇಡಾ ಅಂತಾನೊ ಅಥವಾ ರಗಳೆ ಹೋಯ್ತು ಅಂತಾನೋ ಹೆಣ ಸುಡೋಕೆ ರೆಡಿ ಮಾಡೇ ಬಿಟ್ಟರು. ಗಡಿಬಿಡಿಯಲ್ಲಿ ಸುಡೋಕೆ ತೋಟದಲ್ಲೆ ಏರ್ಪಾಡು ಮಾಡಿದ್ರು. ಚಟ್ಟದ ಎದುರಿಗೆ ಕಲ್ಲು ಕುಟಿಗ ದೈವದ ಕಲ್ಲಿರುವುದು ನೋಡಿದ್ರೊ, ನೋಡಿನೂ ಸುಮ್ನೆ ಇದ್ದರೊ ಯಾರಿಗೂ ಗೊತ್ತಿಲ್ಲ. ಎಲ್ಲ ರೆಡಿಯಾಗುವಾಗ ಮಧ್ಯಾನ್ನ ಮಟ ಮಟ ಬಿಸಿಲು, ಇನ್ನೇನು ಚಟ್ಟಕ್ಕೆ ಬೆಂಕಿ ಇಟ್ಟರು ಎನ್ನುವಾಗ ಹೆಣ ಅಲುಗಾಡಕ್ಕೆ ಶುರು ಆಯ್ತು! ಹೆಣ ನಿಜವಾಗಿ ಅಲುಗಿತ್ತೆ, ರಂಗಯ್ಯ ಬದುಕಿದ್ದನೆ ಇಲ್ಲವೆ ಎಂದು ನೋಡಕ್ಕೆ ಯಾರೂ ಹೋಗದೆ ಬೆಂಕಿ ಇಟ್ಟೆ ಬಿಟ್ಟರು. ಕಲ್ಲು ಕುಟಿಗ ದೇವರ ಎದುರಿಗೇನೆ ಅರೆ ಸತ್ತ ರಂಗಯ್ಯನ ತಲೆ ಬುರುಡೆ ಫಳಾರ್ ಎಂದು ಸಿಡಿದು ಹೋಯ್ತು, ದೇಹ ಬೂದಿ ಆಗಿ ಹೋಯ್ತು.

ರಂಗಯ್ಯನ ಮೇಲೆ ಮನೆಯವರಿಗೆ ನಿಜವಾಗ್ಲೂ ದ್ವೇಷವಿತ್ತೊ, ಇಲ್ಲ ಹೆಣ ಅಲುಗಾಡೋದು ನೋಡಿ ಭಯ ಆಯ್ತೊ ಯಾರಿಗೂ ಗೊತ್ತಿಲ್ಲ, ಆದ್ರೆ ಸುಡೋವಾಗ ರಂಗಯ್ಯ ಸತ್ತಿರಲಿಲ್ಲ ಅನ್ನೊದು ಎಲ್ಲಾರಿಗೂ ಗೊತ್ತಾಗಿ ಹೋಯ್ತ್ತು. ಯಾಕಂದ್ರೆ ರಂಗಯ್ಯ ಎರಡೇ ದಿನದಲ್ಲಿ ವಾಪಾಸು ಬಂದು ಬಿಟ್ಟಿದ್ದ.

ಭೂತವಾಗಿ!

ಮೊದ ಮೊದಲು ರಂಗಯ್ಯ ವಾಪಸ್ಸು ಬಂದಿದ್ದ ಅಂದ್ರೆ ಯಾರೂ ನಂಬ್ತಾನೆ ಇರ್ಲಿಲ್ಲ. ಬಾರ್ಕೂರಿನ ಬೀಡಿ ವ್ಯಾಪಾರಿ ಅಂತೂ 'ರಂಗಯ್ಯನ ಪೆಂಗಯ್ಯನ' ಅಂದು ಗೇಲಿ ಮಾಡಿದ್ದ. ಚೌಳಿ ಕೆರೆ ಹತ್ರ ಒಬ್ಬನೆ ರಾತ್ರಿ ಹೋಗುವಾಗ ಹಿಂದುಗಡೆಯಿನಂದ ನಾಲ್ಕು ಬಿದ್ದಾಗಲೆ ಅವ್ನಿಗೆ ಗೊತ್ತಾಗಿದ್ದು, ರಂಗಯ್ಯ ನಿಜವಾಗ್ಲೂ ಇದ್ದಾನೆ ಅಂದು. ನಮ್ಮ ಚಿಕ್ಕಪ್ಪನಿಗೆ ಒಂತರ ಮೊಂಡು ದೈರ್ಯ ಆವಾಗ, ಸಂಜೆ ಏಳೂವರೆ ಹೊತ್ತಿಗೆ ನಾಲ್ಕು ಜನಾನ ಒಟ್ಟು ಮಾಡಿಕೊಂಡು ಹೊರಟೇ ಬಿಟ್ಟರು, ಟಾರ್ಚ್ ಹಿಡಕ್ಕೊಂಡು ಅಂಗಯ್ಯನ ಹುಡುಕೋಣ ಅಂತ. ಒಂದು ಅರ್ಧ ಗಂಟೆ ಪಂಡಿತರ ಮನೆ ಕಡೆ ಎಲ್ಲ ಹುಡುಕಿ, ಇನ್ನೇನು ರಂಗಯ್ಯ ಇಲ್ಲ ಅಂತ ವಾಪಾಸು ತೊಟದ ದಾರಿಯಲ್ಲಿ ಬರ್ತ ಇದ್ದಿದ್ರಂತೆ, ಅಲ್ಲಿ ನೇರಳೆ ಮರದ ಮೇಲೆ ಏನೋ ಚಿಕ್ಕ ಬೆಳಕು, ಬೆಳಕಿನ ಜೊತೆಗೆ ರಂಗಯ್ಯನ ಕೀರಲು ದ್ವನಿ, ತುಳುವಿನಲ್ಲಿ 'ಎನನ ನಾಡೆರೆಗ್ ಅಲ್ಪ ಪೂರ ದಾಯೆಗ್ ಪೋಪ, ನಿನ ಎದುರೆ ಉಲ್ಲೆ, ಸರೀ ತೂಲ' ಅಂತ. ಎದ್ದೆನೊ ಬಿದ್ದೆನೊ ಅಂತ ಒಂದೇ ಉಸಿಲರಲ್ಲಿ ಮನೆಗೆ ಬಂದ ಚಿಕ್ಕಪ್ಪನಿಗೆ ಐದು ನಿಮಿಷ ಆದ ಮೇಲೇ ಗೊತ್ತಾಗಿದ್ದು, ಟಾರ್ಚ್ ತೊಟದಲ್ಲೆ ಬಿಟ್ಟು ಬಂದೆ ಅಂದು.

ಆವಾಗಷ್ಟೆ ಇಂದಿರ ಗಾಂಧಿಯವರು ಡಿಕ್ಲರೇಷನ್ ಕಾನೂನು ಜಾರಿಗೆ ತಂದಿದ್ದರು, ಉಳುವವನೆ ಹೊಲದೊಡೆಯ ಅಂತ. ಆ ಕಾನೂನು ಪ್ರಕಾರ ಪಂಡಿತರ ಮನೆಯ ಅರ್ದಕ್ಕಿಂತ ಜಾಸ್ತಿ ಭೂಮಿ ಅವರ ಒಕ್ಕಲುಗಳಿಗೆ ಹೋಗ ಬೇಕಿತ್ತು. ನಮ್ಮ ಮನೆ ಸಮೀಪಾನೆ ಇರೋ ಬೋಳು, ಕಾಳು ಹಾಗು ಚೀರು ಅನ್ನುವವರು ಅದಕ್ಕಾಗಿ ಡಿಕ್ಲರೇಷನ್ ಅಪ್ಲಿಕೇಷನ್ ಬೇರೆ ಹಾಕಿದ್ದರು. ಆದ್ರೆ ರಂಗಯ್ಯ ಬಿಡಬೇಕಲ್ಲ, ಅಪ್ಲಿಕೇಷನ್ ಹಾಕಿದವ್ರಿಗೆ ಸಾಕೋ ಬೇಕೋ ಅನ್ನುವ ಹಾಗೆ ಮಾಡಿ, ಹೊಸ ಪಂಚಾಯ್ತಿ ಸೇರಿಸಿ ಪಂಡಿತರಿಗೆ ಅರ್ಧ ಜಮೀನು ವಾಪಾಸು ತರಿಸೇ ಬಿಟ್ಟ.

ಈ ಘಟನೆ ಆದ ಮೇಲೆ, ರಂಗಯ್ಯನಿಗೆ ಜಾಸ್ತಿ ಪಬ್ಲಿಸಿಟಿ ಸಿಕ್ಕಿದ್ದು. ಎಲ್ಲೆಲ್ಲಿಂದಲೊ ರಂಗಯ್ಯನ ನೊಡ್ಬೇಕು ಅಂತ ಜನಾ ಬರ್ತ ಇದ್ದಿದ್ರು. ಒಂದು ಸಲ ಜಿಲ್ಲಾಧಿಕಾರಿಗಳು ಬಂದಿದ್ರಂತೆ. ಕೆಲವೊಮ್ಮೆ ಅಂತು ಬಾರಕೂರು ಬ್ರಿಡ್ಜ್ ತನಕ ಜನ ಇರ್ತಿದ್ರಂತೆ. ಕಳ್ಳ ಚಂದ್ರನ್ ಇದ್ದಿದ್ದು ಕೂಡ ಅದೇ ಟೈಮಲ್ಲಿ. ರಂಗಯ್ಯ ವಾಪಾಸ್ ಬಂದಿದ್ದು ಒಂದು ರೀತೀಲಿ ಜನರಿಗೆ ಒಳ್ಳೇದೆ ಆಗಿತ್ತು. ಏನೋ ಒಂದು ಧೈರ್ಯ, ರಂಗಯ್ಯ ಇರೋವಾಗ ಚಂದ್ರನ್ ಕೈಲಿ ಎನೂ ಮಾಡಕ್ಕಾಗಲ್ಲ ಅಂತ. ರಂಗಯ್ಯ ಸತ್ತ ಮೇಲೂ ಕೂಡ ಊರವರಿಗೆ ಅಷ್ಟೇನೂ ತೊಂದರೆ ಕೊಟ್ಟಿರಲ್ಲಿಲ್ಲ. ಎಷ್ಟೋ ಸಲ ಒಬ್ಬೊಬ್ಬರೆ ರಾತ್ರಿ ಹೋಗುವಾಗ ಚೌಳಿ ಕೆರೆ ತನಕ ರಂಗಯ್ಯ ಟಾರ್ಚ್ ಹಿಡಕ್ಕೊಂಡು ಬಿಟ್ಟದ್ದು ಉಂಟು.

ನಮ್ಮಮ್ಮ ತುಂಬಾ ಸಲ ರಂಗಯ್ಯ ಮಾತಾಡೊದನ್ನ ಕೇಳಿದ್ರಂತೆ. ಪಂಡಿತರ ಮನೆಯವ್ರನ್ನ ಬಿಟ್ರೆ ತುಳು ಬರ್ತ ಇದ್ದಿದ್ದು ನಮ್ಮೂರಲ್ಲಿ ನಮ್ಮಮ್ಮನಿಗೆ ಮಾತ್ರ. ಹಾಗಾಗಿ ರಂಗಯ್ಯ ಅಂದ್ರೆ ನಮ್ಮಮ್ಮನಿಗೆ ಸ್ವಲ್ಪ ವಿಶೇಷ ಆಸ್ತೆ. ಒಂದೆರಡು ಸಲ ಮಾತಡಿದ್ದೂ ಉಂಟು. ನಮ್ಮನೆಯಲ್ಲಿ ಒಂದು ಸಲ ಹರಿಕೆ ಬಯಲಾಟ ಮಾಡಿದ್ರು. ಮಾರನೆ ದಿನ ಬೆಳಿಗ್ಗೆ ಪಂಡಿತರ ಮನೆಯಲ್ಲಿ ರಂಗಯ್ಯ ಹೇಳ್ತ ಇದ್ನಂತೆ 'ತಮ್ಮಯ್ಯನ ಮನೆ ಆಟ ಏನೇನೂ ಚೆನ್ನಾಗಿರಲ್ಲಿಲ್ಲ. ನಾನು ನೇರಳೆ ಮರದಲ್ಲಿ ಕೂತು ಸ್ವಲ್ಪ ನೋಡಿ, ಬೇಜಾರಾಗಿ ಮಲಗಿ ಬಿಟ್ಟೆ' ಅಂತ.

ಪಂಡಿತರ ಕೆಲವು ಬಂಧುಗಳು ಮುಂಬೈಯಲ್ಲಿ ಇದ್ರಂತೆ. ಇದ್ದಕ್ಕಿದ್ದಂತೆ ರಂಗಯ್ಯ ಒಂದು ದಿನ ಮನೆಗೆ ಬಂದು ಹೇಳಿದ್ನಂತೆ. 'ನಂಗೆ ಇಲ್ಲಿ ಸ್ವಲ್ಪ ಬೋರಾಗ್ತ ಇದೆ, ಸ್ವಲ್ಪ ದಿನ ಬಾಂಬೆಗೆ ಹೋಗಿ ಬರ್ತೇನೆ. ಟಿಕೆಟಿಗೆ ಇಪ್ಪತ್ತು ರುಪಾಯಿ ಕೊಡಿ ಅಂತ'. ಮನೆಯವ್ರು ಇಪ್ಪತ್ತು ರುಪಾಯಿ ತೆಗೆದು ಉಪ್ಪರಿಗೆ ಮೆಟ್ಟಿಲ ಹತ್ರ ಇಟ್ರು. ಮಾರನೆ ದಿನ ನೋಡ್ತಾರೆ, ಉಪ್ಪರಿಗೆ ಹತ್ರ ಇದ್ದ ಇಪ್ಪತ್ತು ರುಪಾಯಿ ಇಲ್ಲ, ಹಾಗೆಮೂರು ದಿನ ರಂಗಯ್ಯನ ಸುದ್ದೀನೂ ಇಲ್ಲ. ನಾಲ್ಕನೆ ದಿನ ಎದ್ದು ನೋಡ್ತಾರೆ, ಉಪ್ಪರಿಗೆ ಮೆಟ್ಟಿಲ ಪಕ್ಕದಲ್ಲಿ ಇಪ್ಪತ್ತು ರುಪಾಯಿ ವಾಪಾಸು ಬಂದು ಬಿದ್ದಿದೆ, ಸ್ವಲ್ಪ ಹೊತ್ತಲಿ ರಂಗಯ್ಯನ ಕೀರಲು ದ್ವನಿ 'ಬಾಂಬೆಗೆ ಹೋಗಿ ಬಂದೆ, ಆದ್ರೆ ಬಸ್ಸಲ್ಲಿ ಯಾರೂ ಟಿಕೆಟ್ಟೆ ಕೇಳ್ಲಿಲ್ಲ. ನಿಮ್ಮ ಇಪ್ಪತ್ತು ರುಪಾಯಿ ವಾಪಾಸ್ಸು ತಗೊಳ್ಳಿ' ಅಂತ.

ಹೀಗೆ ತುಂಬಾ ಕೆಲಸ ಮಾಡಿದ್ದ ರಂಗಯ್ಯ ಭೂತವಾಗಿ, ಆದ್ರೆ ಯಾರಿಗೂ ಸುಮ್ನೆ ಸುಮ್ನೆ ಹೇಳಿ ಕೊಳ್ಳುವಂತ ತೊಂದ್ರೆ ಏನೂ ಕೊಟ್ಟಿರಲ್ಲಿಲ್ಲ. ಡಿಕ್ಲರೇಷನ್ ವಿಷ್ಯದಲ್ಲಿ ಸ್ವಲ್ಪ ಗಲಾಟೆ ಮಾಡಿದ್ದು ಬಿಟ್ರೆ, ಮನೆಯವರಿಗೆ ಸ್ವಲ್ಪ ಹೆದ್ರಿಸ್ತಿದ್ದ, ಅಷ್ಟೆ. ಯಾರಿಗೂ ಪ್ರಾಣ ಹಾನಿ ಮಾಡಿರ್ಲಿಲ್ಲ. ಮನೆಯವ್ರು ಕೊಟ್ಟ ಮಾನಸಿಕ ಹಿಂಸೆಯೆಲ್ಲ ರಂಗಯ್ಯ ಸ್ವಲ್ಪ ಮರ್ತಿದ್ದಾನೆ ಅಂದ್ಕೊಂಡಿದ್ರು. ಆದ್ರೆ ಎಲ್ಲ ಸುಳ್ಳಾಗಿತ್ತು, ಮನುಷ್ರೇ ಮರಿಯಲ್ಲ, ಇನ್ನು ಭೂತಗಳು ಮರೀತಾವ? ಸ್ವಲ್ಪ ವರ್ಷದಲ್ಲೆ ತನಗಾದ ನೋವಿಗೆ ಬಡ್ಡಿ ಹಾಕಿ ರಂಗಯ್ಯ ಪ್ರತೀಕಾರ ತೀರಿಸ್ಕೊಂಡಿದ್ದ. ಶಾಲೆ ಬಿಟ್ಟು ಕೈ ಕಾಲು ತೊಳೆದು ಕೊಂಡು ಬರ್ತೀವಿ ಅಂತ ಕೆರೆಗೆ ಹೋಗಿದ್ದ ಅತ್ತಿಗೆಯವ್ರ ಮೂರು ಮಕ್ಳೂ ವಾಪಾಸು ಬರ್ಲೇ ಇಲ್ಲ. ಮೂರು ಜನರನ್ನು ನೀರಲ್ಲೆ ಮುಳುಗಿಸಿ ಮುಗಿಸಿ ಬಿಟ್ಟಿದ್ದ ರಂಗಯ್ಯ!

ಆಗ್ಲೇ ಗೊತ್ತಾಗಿದ್ದು ಮನೆಯವ್ರಿಗೆ, ಭೂತ ಯಾವತ್ತಿದ್ರೂ ಭೂತಾನೆ ಅಂತ. ಈ ಘಟನೆ ಆದ ಕೂಡ್ಲೆ ಮಂತ್ರವಾದಿಗಳನ್ನ ಕರೆಸಿ ಕೂಡಲೆ ರಂಗಯ್ಯನಿಗೆ ದಿಗ್ಭಂದನ ಹಾಕಿಸಿ ಬಿಟ್ರು. ಆವತ್ತಿಂದ ಇವತ್ತಿನ ತನಕ ರಂಗಯ್ಯ ಯಾರಿಗೂ ಕಾಣಿಸಿ ಕೊಂಡಿಲ್ಲ.

No comments: