Wednesday, April 30, 2008

ದೇವರಿದ್ದಾರ?

ಅದ್ಯಾಕೊ ಗೊತ್ತಿಲ್ಲ, ನಾನು ಈ ತನಕ ನೋಡಿದವರಲ್ಲಿ ಹತ್ತರಲ್ಲಿ ಎಂಟು ಜನ ಸಾಫ್ಟ್ ವೇರ್ ವೃತ್ತಿ ಬಗ್ಗೆ ಬಯ್ಯುವವರೆ. 'ಅಯ್ಯೊ ನನ್ನ ಮ್ಯಾನೇಜರ್ ಸರಿ ಇಲ್ಲ', 'ಅಯ್ಯೊ ಕ್ಲೈಂಟ್ ಸರಿ ಇಲ್ಲ', 'ಕರ್ಮ ಕರ್ಮ, ಮಾಡಿದ್ದನ್ನೆ ಮತ್ತೆ ಮತ್ತೆ ಮಾಡ್ತ ಇರಬೇಕು' ಅಂತ ಒಂದಲ್ಲ ಒಂದು ಕತೆ ಇದ್ದದ್ದೆ. ಆದ್ರೆ ನನಗಂತು ನನ್ನ ವೃತ್ತಿ ಬಗ್ಗೆ ನಿಜವಾಗ್ಲು ಹೆಮ್ಮೆ ಇದೆ.ಪ್ರತಿಯೊಂದು ವಿಷಯಾನ ಸರಿಯಾಗಿ ಲಾಜಿಕ್ಕಲ್ಲಾಗಿ ವಿಮರ್ಷೆ ಮಾಡಕ್ಕೆ ಕಲಿಸಿ ಕೊಟ್ಟದ್ದೆ ಈ ವೃತ್ತಿ. ಕೆಲವೊಂದು ಬಾರಿ ತಪ್ಪೆನಿಸಿದ್ರೂನು, ನಷ್ಟ ಕಡಿಮೆ ಮಾಡಕ್ಕೋಸ್ಕರ ತಪ್ಪನ್ನೆ ಮುಂದುವರಿಸಿ ಕೊಂಡು ಹೋಗೋದನ್ನ ಹೇಳಿ ಕೊಟ್ಟದ್ದು ಇದೇ ವೃತ್ತಿ. ಯಾಕಪ್ಪಾ ಇವ್ನು, ಟೈಟಲ್ ಏನೋ ಇಟ್ಕೊಂಡು ಯಾವ್ದೊ ರೀಲು ಬಿಡ್ತಾ ಇದ್ದಾನೆ ಅಂದ್ಕೊಂಡ್ರ, ಇಲ್ಲ ಇಲ್ಲ ಅದೇ ವಿಷಯ ಹೇಳೋಕ್ಕೆ ಹೊರಟವನು.

ಚಿಕ್ಕಂದಿನಿಂದಲೂ ನಾನು ದೇವರ ಬಗ್ಗೆ ಕೇಳಿ ಕೊಂಡೆ ಬೆಳೆದವನು. ನಮ್ಮ ಮನೆಯವರು ದೇವರಿಗಿಂತಲೂ ದೈವವನ್ನು ಜಾಸ್ತಿ ನಂಬಿದವರು. ದೈವಗಳು ಅಂದ್ರೆ ಒಂತರ ದೇವರ ಕೈ ಕೆಳಗೆ ಕೆಲಸ ಮಾಡುವವರು. ಅದರಲ್ಲಿ ಬೇರೆ ಬೇರೆ ನಮೂನೆ ದೈವಗಳಿರತ್ತೆ. ಸ್ವಲ್ಪ ಜಾಸ್ತಿ ಫೇಮಸ್ ಇರೊದ್ರಂದ್ರೆ ಪಂಜುರ್ಲಿ, ಹಾಯ್ಗುಳಿ etc. ಇವೆಲ್ಲ ಈಶ್ವರನ ಗಣಗಳು. ನನ್ನ ಪ್ರಕಾರ ದೇವ್ರನ್ನ ನಂಬೋದಕ್ಕು, ದೈವಗಳನ್ನ ನಂಬೋದಕ್ಕು, ಭೂತಗಳನ್ನ ನಂಬೋದಕ್ಕೂತುಂಬಾ ವ್ಯತ್ಯಾಸ ಏನೂ ಇಲ್ಲ. ದೇವ್ರು ಇರೋದು ಸತ್ಯ ಆದ್ರೆ ದೆವ್ವ ಭೂತ ಇರೋದು ಯಾಕೆ ಸತ್ಯ ಆಗಬಾರದು? ಆದ್ರೆ ನಮ್ಮ ಕುಲದವ್ರು ದೇವರನ್ನ ಬಿಟ್ಟು ದೈವಗಳನ್ನ ಯಾಕೆ ನಂಬ್ತಾರೆ ಅಂತ ನನಗೆ ಅಷ್ಟು ಚೆನ್ನಾಗಿ ತಿಳಿದಿಲ್ಲ. ಬಹುಶ: ಮೇಲ್ಜಾತಿಯವರು ದೇವರನ್ನು ಭೇಟಿ ಮಾಡಲು ಅಷ್ಟು ಬಿಡದೆ ಇರುವುದು ಒಂದು ಕಾರಣ ಇರಬಹುದು. ನಾನು ಐದನೆ ತರಗತಿಗೆ ಹೋಗೋ ತನಕ ನಮ್ಮೊರಿನಲ್ಲಿ ಇರೊ ಈಶ್ವರನ ಗುಡಿಗೆ ನಮಗೆ ಪ್ರವೇಶ ಇರಲಿಲ್ಲ. ಆ ನಂತರ ನಾನೆ ಆ ಕಡೆ ತಲೆ ಹಾಕಿರಲಿಲ್ಲ. ಇನ್ನೊಂದು ಕಾರಣ ಅಂದ್ರೆ ದೈವಗಳ ಜೊತೆ ನೇರವಾಗಿ ಮಾತಾಡ ಬಹುದು, ದೇವರ ತರ ಅಲ್ಲ.

ಮೊದಲು ನಂಗೆ ದೇವರು ಅಂದ್ರೆ ತುಂಬ ಪ್ರೀತಿ ಇತ್ತು. ಮೊರನೆ ಕ್ಲಾಸಿಂದ ರಾಮಾಯಣ ಮಹಾಭಾರತ ನೋಡಲು ಒಂದು ಮೈಲು ಬರಿಗಾಲಲ್ಲಿ ನಡಕೊಂಡೆ ಹೋಗ್ತಾ ಇದ್ದೆ. ನಮ್ಮ ಮನೆಯಲ್ಲಿ ಟೀವಿ ಬಂದದ್ದು ಹತ್ತನೆ ಕ್ಲಾಸಲ್ಲಿ. ಲೆಕ್ಕವಿಲ್ಲದಷ್ಟು ಕತೆ ಪುಸ್ತಕಗಳನ್ನು ಬೇರೆ ಓದ್ತ ಇದ್ದೆ. ಅವೆಲ್ಲ ಸೇರಿ ದೇವರ ಬಗ್ಗೆ ಒಳ್ಳೆ ಅಭಿಪ್ರಾಯವನ್ನು ಮೊಡಿಸಿತ್ತು. ಆದ್ರೆ ದೈವಗಳ ಬಗ್ಗೆ ಹೆದರಿಕೆಯಿದ್ರೂ ಕೂಡ ಅಷ್ಟೊಂದು ಒಳ್ಳೆ ಭಾವನೆ ಇರಲಿಲ್ಲ. ನಮ್ಮ ತಂದೆ ಮನೆಯಲ್ಲಿ ವರ್ಷಕ್ಕೆ ಒಂದು ಬಾರಿ ಭೂತ ಸೇವೆ ನಡೆಯುತ್ತಿತ್ತು. ಭೂತ ಸೇವೆ ಅಂದ್ರೆ ನಂಬಿದ ದೈವಗಳಿಗೆ ವಿಶೇಷ ರೀತಿಯ ಪೂಜೆ. ಕುಟುಂಬದ ಎಲ್ಲ ಜನರು ಸೇರಿ ಕೋಳಿ, ಕುರಿ, ಹೂವು ಅಂತ ಕೊಟ್ಟು ಸೇವೆ ಮಾಡೊದು. ಆಗ ದೈವ ಪಾತ್ರಿಯ ಮೇಲೆ ಆಹ್ವಾಹನೆಯಾಗಿ ಎಲ್ಲರ ಯೋಗ ಕ್ಶೇಮ ವಿಚಾರಿಸಿ ಕೊಂಡು ಒಳ್ಳೆ ಮಾರ್ಗದಲ್ಲಿ ಹೇಗೆ ಹೋಗಬೇಕೆಂದು ಸಲಹೆ ಕೊಡುತ್ತಿತ್ತು. ಅದಕ್ಕೆ ನಾವು 'ದರ್ಶನ' ಅಂತ ಕರೀತೇವೆ. ದೈವ ಹಾಗೆ ಎಲ್ಲರ ಮೇಲೂ ಬರಲ್ಲ. ಪಾತ್ರಿ ಆಗಬೇಕೆಂದ್ರೆ ದೈವದ ಆಹ್ವಾಹನೆಯಾದ ಮೇಲೆ ಧರ್ಮಸ್ಥಳಕ್ಕೆ ಹೋಗಿ ಹೂ ನೀರು ತಗೊಂಡು ಬರಬೇಕು. ಅದಿಲ್ಲದೆ ಆಹ್ವಾಹನೆಯಾದ್ರು ಕೂಡ ಅವರಿಗೆ 'ದರ್ಶನ' ಮಾಡೋ ಅಧಿಕಾರ ಇರಲ್ಲ.

ನಮ್ಮ ತಂದೆ ಮನೆ ಭೂತ ಸೇವೆ ವಿಶೇಷ ಅಂದ್ರೆ ಒಬ್ಬರು 'ದರ್ಶನ' ಪಾತ್ರಿಯಾದ್ರೆ ಇನ್ನೊಂದು ಏಳೆಂಟು ಜನ ಹಾಗೆ ಕುಣಿಯುವವರು. ಒಬ್ಬಬ್ಬರ ಮೇಲೂ ಒಂದೊಂತರ ದೈವ ಬರುತ್ತಿತ್ತು. ದೇವರ ಮನೆ ಒಳಗೆ ಕೇಳುವವರಿಗಿಂತ ಕುಣಿಯುವವರೆ ಜಾಸ್ತಿ ಜನ ಇರ್ತ ಇದ್ದಿದ್ರು. ಪ್ರತಿ ಸಲಾನು ಯಾವುದಾದರೂ ಒಂದು ವಿಷಯಕ್ಕೆ ದೈವ ದೈವಗಳೆ ಸೇರಿ ಜೋರಾಗಿ ಕಿತ್ತಾಡಿ ಕೊಳ್ತ ಇದ್ದವು. ನಮ್ಮ ಮನೆ ಹಿರಿಯರಿಗೆ ಆ ದೈವಗಳನ್ನು ಸಮಾದಾನ ಮಾಡೋದೆ ಒಂದು ದೊಡ್ಡ ಕೆಲಸವಾಗಿತ್ತು. ನಮ್ಮನ್ನ ಕಾಪಾಡ ಬೇಕಿದ್ದ ದೈವಗಳೆ ಕಿತ್ತಾಡೋದು ನನಗೊಂತರ ಹೊಸ ವಿಷಯವಾಗಿತ್ತು.

ಒಂದು ಸಲ ನಮ್ಮಮ್ಮನ ಮನೆ ಭೂತ ಕೋಲಕ್ಕೆ ಹೋಗಿದ್ದೆ. ಅಲ್ಲಿ ತಂದೆ ಮನೆಯವರ ತರ ಹತ್ತಾರು ದೈವಗಳು ಕುಣಿಯಲ್ಲ. ಒಬ್ಬ ಪಾತ್ರಿ ಮಾತ್ರ 'ದರ್ಶನ' ಮಾಡೋದು. ಆ ದಿನ ದರ್ಶನದಲ್ಲಿ ದೇವರು ಮನೆ ಪಾಲಿನ ಬಗ್ಗೆ ಮಾತಾಡೋಕೆ ಶುರು ಮಾಡಿತು. ನಮ್ಮಮ್ಮನ ಮನೆ ಆಸ್ತಿ ಎಲ್ಲ ನಮ್ಮ ಅಜ್ಜ ನೋಡಿಕೊಳ್ತ ಇದ್ರು. ಅವ್ರು ಇರೋವಾಗ ನಮ್ಮ ಚಿಕ್ಕ ಅಜ್ಜಂಗೆ ಸ್ವಲ್ಪ ಪಾಲು ಕೊಡ್ತೀನಿ ಅಂತ ಹೇಳಿದ್ರಂತೆ. ಅದನ್ನೆ ಮುಂದೆ ಇಟ್ಕೊಂಡು ನಮ್ಮ ಚಿಕ್ಕ ಅಜ್ಜ ಯಾವಾಗ್ಲು ಪಾಲಿನ ವಿಷಯಾನೆ ಮಾತಾಡ್ತ ಇದ್ರು. ಆವತ್ತಂತು ಚಿಕ್ಕ ಅಜ್ಜ ಜೋರು ಜೋರಾಗೆ ಮಾತಾಡ್ತ ಇದ್ರು, ದೇವ್ರು ಬೇರೆ ಅವ್ರಿಗೆ ಸಪೋರ್ಟ್ ಇದ್ರಲ್ಲ.ದರ್ಶನ ಮುಗಿಯೋ ತನಕ ಸುಮ್ನೆ ಇದ್ದ ನಮ್ಮ ಮಾವ, ದರ್ಶನ ಮುಗಿದ ಕೂಡಲೆ ಅವೇಶ ಬಂದವರಂತೆ ಪಾತ್ರಿ ಮತ್ತು ಚಿಕ್ಕ ಅಜ್ಜ ಇಬ್ಬರಿಗೂ ಹೊಡೆಯೋಕೆ ಹೋದ್ರು. ಮತ್ತೆ ನೋಡಿದ್ರೆ ಪಾತ್ರಿಯವರನ್ನು ಕರೆದು ಕೊಂಡು ಬಂದಿದ್ದೆ ಚಿಕ್ಕ ಅಜ್ಜ, ದಾರಿಯಲ್ಲಿ ಬರೋವಾಗ್ಲೆ ಅವರ ನಡುವೆ ಮಾತುಕತೆ ಆಗಿತ್ತಂತೆ.

ದೈವಗಳ ನಡುವೇನೆ ಬೆಳೆದ ನಾನು ಕ್ರಮೇಣ ದೈವಗಳ ಮೇಲೆ ನಂಬಿಕೇನೆ ಕಳ ಕೊಂಡಿದ್ದೆ. ಬರ ಬರುತ್ತ ದೇವರ ಮೇಲಿನ ನಂಬಿಕೇನೂ ಅದೆ ದಾರಿಗೆ ಬಂದಿತ್ತು. ಜಾಸ್ತಿ ವಿಚಾರ ಮಾಡ್ತ ಹೋದಾಗ್ಲೆಲ್ಲ ದೇವ್ರು ಅನ್ನಿಸ್ಕೊಂಡೋನು ಅವ್ನ ಕೆಲಸ ಸರಿಯಾಗಿ ಮಾಡ್ತ ಇಲ್ಲ ಅನ್ನಿಸಿತ್ತು. ನಮ್ಮ ಊರಲ್ಲಿ ಒಂದು ದೇವಿ ಮಂದಿರ ಇತ್ತು. ಮೊದ್ಲು ಆ ದೇವಸ್ಥಾನದಲ್ಲಿ ಬ್ರಾಹ್ಮಣರು ಪೂಜೆ ಮಾಡ್ತ ಇದ್ದರು. ಅಮೇಲೆ ಬಹುಶ: ಪೂಜೆಯವರಿಗೂ ಊರಿನ ಹೆಗ್ಡೆಯವರಿಗೂ ಜಗಳ ಆಯ್ತು ಅನ್ಸತ್ತೆ, ಆ ದೇವಿಗೆ ಮಾಂಸಾಹಾರ ಬೇಕು, ಹಾಗಾಗಿ ಬ್ರಾಹ್ಮಣರು ಪೂಜೆ ಮಾಡೋದು ಸರಿ ಅಲ್ಲ ಅಂತ ಬೇರೆ ಜಾತಿಯವರನ್ನು ಪೂಜೆಗೆ ಬಿಟ್ಟರು. ಆ ದೇವಸ್ಥಾನದ ಗರ್ಭ ಗುಡಿ ಒಳಗೆ ಪೂಜೆಯವರಿಗೆ ಮಾತ್ರ ಪ್ರವೇಶ ಇತ್ತು. ಗರ್ಭ ಗುಡಿ ಹೊರಗೆ ಎತ್ತರದಲ್ಲಿ ಜಗುಲಿ ತರ ಸ್ವಲ್ಪ ಜಾಗ ಇತ್ತು. ಅಲ್ಲಿಗೆ ಮೇಲ್ಜಾತಿಯವರಿಗೆ ಮಾತ್ರ ಪ್ರವೇಶ. ಅವರ ಪ್ರಕಾರ ಮೇಲ್ಜಾತಿ ಅಂದ್ರೆ ಏನೆಂದು ನಂಗೆ ಇನ್ನೂ ಅರ್ಥ ಆಗಿಲ್ಲ. ನಾವು ಮತ್ತೆ ಉಳಿದ ಕೆಲವು ಜಾತಿಯವ್ರು ಕೆಳಗಡೆ ಕುಳಿತುಕೊಳ್ಳ ಬೇಕಿತ್ತು. ಒಮ್ಮೆ ದೇವಸ್ತಾನದಲ್ಲಿ ಏನೋ ಪೂಜೆ ನಡೀತ ಇತ್ತು. ಪೂಜೆ ಜೊತೆಗೆ 'ದರ್ಶನ' ಕೂಡ ನಡೀತ ಇತ್ತು. ಸಡನ್ನಾಗಿ ಎಲ್ಲಿಂದಲೋ ಒಬ್ಬಳು ದೇವರನ್ನು ಹತ್ತಿರದಿಂದ ನೋಡಬೇಕೆಂದು ಗರ್ಭಗುಡಿ ಹೊರಗಿನ ಜಗುಲಿ ಹತ್ತಿದಳು. ಉಳಿದವರಿಗೆ ಹೇಗೆ ಗೊತ್ತಾಯಿತೊ ಅವಳು ಕೆಳ ಜಾತಿಯವಳು ಅಂತ, ಹೆಂಗಸೆನ್ನೋದು ನೋಡದೆ ಅವಳ ಕೈ ಹಿಡಿದು ದರದರನೆ ಎಳೆದು ಕೆಳಗೆ ನೂಕೇ ಬಿಟ್ಟರು. ಪಾತ್ರಿ ಮೈಮೇಲೆ ಬಂದಿದ್ದ ದೇವರು ಇದರಿಂದ ಸಂತೋಷವಾದಂತೆ ಜೋರಾಗಿ ಕುಣಿಯುತ್ತಿತ್ತು.

ಇನ್ನೊಮ್ಮೆ ಅದೇ ದೇವಸ್ಥಾನದಲ್ಲಿ ಕಳವು ಆಯ್ತು. ಕಳವಾಗೋದು ಮೊದಲೇ ಗೊತ್ತಿತ್ತು ಅನ್ನೊ ಹಾಗೆ ಅದಕ್ಕೂ ಒಂದು ಕತೆ ರೆಡಿಯಾಗಿಟ್ಟಿದ್ದರು. ಕಳವು ಮಾಡಿದವನು ತುಂಬಾ ಬಡವನಂತೆ, ಅದಕ್ಕೆ ದೇವರೆ ಅವನಿಗೆ ಆ ಬುದ್ಧಿ ಕೊಟ್ಟನಂತೆ. ಇದೆ ವಾದವನ್ನ ತುಂಬ ಕಡೆ ಕೇಳಿದ್ದೆ, ದೇವಸ್ಥಾನದಲ್ಲಿ ಕಳವಾಗುವುದು ಒಂದು ಸಾಮಾನ್ಯ ವಿಷಯ ತಾನೆ ಈಗ. ಕಳವು ಮಾಡೊ ಬುದ್ದಿ ಕೊಡೋ ಬದಲು ದೇವರಿಗೆ ಬೇರೆ ಯಾವದಾದ್ರೂ ಒಳ್ಳೆ ದಾರಿ ತೊರಿಸೋಕೆ ಆಗಲ್ವ? ಒಂದು ವೇಳೆ ಕಳವು ಮಾಡೊ ಬುದ್ದಿ ಅವನು ಕೊಟ್ಟಿಲ್ಲ ಅಂದ್ರೆ, ತನ್ನ ಗುಡಿಯನ್ನೆ ರಕ್ಷಣೆ ಮಾಡೊವಷ್ಟು ಶಕ್ತಿ ಇಲ್ವ? ತನ್ನ ಗುಡಿಯಲ್ಲಾಗೊ ಅಧರ್ಮಾನ ತಪ್ಪಿಸೋಕೆ ಆಗದವನು ಬೇರೆ ಎಲ್ಲೊ ಆಗುವ ತಪ್ಪನ್ನು ಹೇಗೆ ತಾನೆ ಸರಿ ಮಾಡ ಬಲ್ಲನು?

ಗುಡಿಯಂತಲ್ಲ, ನನಗಿದು ತನಕ ದೇವರ ಪ್ರವೇಶದಿಂದ ಯಾವುದೆ ಕೆಟ್ಟ ಕೆಲಸ ನಿಂತದ್ದಾಗಲಿ, ಯಾರಿಗಾದರೂ ಕೆಟ್ಟ ಕೆಲಸ ಮಾಡುವಾಗ ತೊಂದರೆ ಆಗಿದ್ದಾಗಲಿ ಗೊತ್ತಿಲ್ಲ. ಇದಂತು ತುಂಬಾ ಚಿಕ್ಕ ವಿಷಯ. ಇದರಲ್ಲೆಲ್ಲ ಮೊಗು ತೂರಿಸೋಕೆ ದೇವರಿಗೆ ಸಮಯ ಇಲ್ಲದೆ ಇರಬಹುದು. ಆದರೆ ಚರಿತ್ರೆ ಪುಟವನ್ನ ಒಮ್ಮೆ ತಿರುಗಿ ಹಾಕಿ ನೋಡಿದರೆ ದೊಡ್ಡ ವಿಷಯದಲ್ಲಿ ಕೂಡ ದೇವರು ಮಧ್ಯ ಪ್ರವೇಶ ಮಾಡಿಲ್ಲ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತೆ. ಘಜನಿ ಘೋರಿಗಳು ಹಲವಾರು ಬಾರಿ ದಂಡೆತ್ತಿ ಸಾವಿರಾರು ಜನ ಪ್ರಾಣ ಕಳಕೊಂಡಾಗ ಆ ದೇವರು ಏನು ಮಾಡ್ತ ಇದ್ದನೊ ನನಗೊತ್ತಿಲ್ಲ. ಮತ್ತೆ ಔರಂಗಜೇಬನ ಕಾಲದಲ್ಲಂತು ಲಕ್ಶಾಂತರ ಜನ ವಿನಾ ಕಾರಣ ಸಾವಿನ ಮನೆ ಬಾಗಿಲು ತಟ್ಟುವಾಗ ದೇವರು ಸುಮ್ಮನೆ ಕೂತಿದ್ದ ಅಂದರೆ ನಿಜವಾಗ್ಲು ಆಶ್ಚರ್ಯವಾಗತ್ತೆ. ಅದೆಲ್ಲ ಬಿಡಿ, ಒಮ್ಮೆ ಹಂಪಿ ಕಡೆ ಹೋಗಿ ಬನ್ನಿ, ಖಂಡಿತ ನೀವೆ ಕೇಳ್ತೀರ, ದೇವ್ರು ನಿಜವಾಗಿ ಇದ್ದನ ಅಂತ. ಹೆಣ್ಣು, ಹೊನ್ನು ಮತ್ತೆ ಮಣ್ಣು ಎಂತವರನ್ನು ಹಾಳು ಮಾಡತ್ತೆ ಅಂತಾರೆ, ಆದ್ರೆ ದೇವರ ಹೆಸರಲ್ಲಿ ಅಷ್ಟೆ ಪ್ರಾಣ ಹಾನಿ ಮಾನ ಹಾನಿ ಆಗಿದ್ದನ್ನ ಯಾರೂ ಹೇಳಲ್ಲ.

ನೀನು ದೇವರನ್ನು ನಂಬ್ತೀರಾ ಅಂತ ಎರಡು ವರುಷದ ಹಿಂದೆ ಕೇಳಿದ್ರೆ ಖಡಾ ಖಂಡಿತವಾಗಿ ಇಲ್ಲ ಅಂತ ಹೇಳ್ತಿದ್ದೆ. ನಾನು ದೇವರನ್ನು ನೋಡಿಲ್ಲ ಅಂತಲ್ಲ. ನೋಡಿಲ್ಲ ಅನ್ನೋದು ಇಲ್ಲ ಅಂತ ಹೇಳಕ್ಕೆ ಕಾರಣ ಆಗಲ್ಲ. ನಾನು ನೋಡಿಲ್ಲದ ವಿಷಯ ಎಷ್ಟೋ ಇದೆ. ಆದ್ರೆ ಚಿಕ್ಕದಿರುವಾಗ ದೇವರನ್ನು ಯಾವ ತರ ಪ್ರಾಜೆಕ್ಟ್ ಮಾಡಿದ್ದರೋ, ಆ ರೀತಿಯಲ್ಲಿ ದೇವರು ಇಲ್ಲ ಅನ್ನೋದು ಸ್ಪಷ್ಟವಾಗಿ ಗೊತ್ತಾಗಿತ್ತು. ನನ್ನ ಆಲೋಚನೆಗಳು ಎಷ್ಟೇ ಚೆನ್ನಾಗಿದ್ದರೂ ಕೂಡ ದೇವರಿಂದ ಯಾವ ತರದ ಸಹಾಯಾನು ಅಗಲ್ಲ ಅನ್ನಿಸ್ಸಿತ್ತು. ಲಾಜಿಕಲ್ಲಾಗಿ ದೇವರಿಲ್ಲ ಅನ್ನೊ ನಿರ್ಧಾರಕ್ಕೆ ಬಂದಿದ್ದೆ. ಹಾಗಾಗಿ ಅಪರೂಪಕ್ಕೊಮ್ಮೆ ದೇವಸ್ಥಾನಕ್ಕೆ ಹೋದರೂನು, ನನಗಾಗಿ ಬೇಡಿಕೊಳ್ಳೋದನ್ನೆ ಬಿಟ್ಟು ಬಿಟ್ಟಿದ್ದೆ.

ಈವಾಗ ಸಾಫ್ಟ್ ವೇರಲ್ಲಿ ಮೊದಲಿಗಿಂತ ಸ್ವಲ್ಪ ಜಾಸ್ತಿ ಅನುಭವ ಆಗಿದೆ. ಲಾಜಿಕ್ಕಲ್ಲಾಗಿ ಸರಿ ಇದೆ ಅಂದ ಮಾತ್ರಕ್ಕೆ ಯಾವುದನ್ನು ಮಾಡಕ್ಕೆ ಹೋಗಲ್ಲ. ಅದರಿಂದ ಆಗೊ ಲಾಭ ನಷ್ಟಾನ ಮೊದಲು ಲೆಕ್ಕಚಾರ ಹಾಕ್ತೀನಿ. ದೇವರ ಬಗ್ಗೆ ಕೂಡ ಈವಾಗ ಅದೆ ದಾಟಿಯಲ್ಲಿ ಯೋಚನೆ ಮಾಡೋದು. ಇದುವರೆಗೆ ದೇವರಿಂದ ಯಾರಿಗೂ ಏನೂ ಲಾಭ ಆಗದೆ ಇರಬಹುದು, ಇದುವರೆಗೆ ದೇವರು ಪ್ರತ್ಯಕ್ಷವಾಗೊ ಪರೋಕ್ಷವಾಗೊ ಕಾಣಿಸದೆ ಇರಬಹುದು. ಆದರೂ ಕೂಡ ದೇವರು ಇಲ್ಲ ಅಂತ ಹೇಳಿ ನಾನು ಸಾದಿಸೋದಾದ್ರೂ ಏನು? ಬರೀ ವಾದ ಗೆದ್ದು ಏನು ಪ್ರಯೋಜನ? ಒಂದು ವೇಳೆ ದೇವರು ನಿಜವಾಗ್ಲೂ ಇದ್ದು ಯಾವುದೊ ಕಾರಣಕ್ಕೊಸ್ಕರ ತೋರಿಸ್ಕೊಳ್ಳದೆ ಹೋಗಿದ್ದಿದ್ರೆ? ಸುಮ್ನೆ ಯಾಕೆ ರಿಸ್ಕ್?

ಹೆದರ್ತ ಇದ್ದೀನಿ ಅಂತಲ್ಲ. ದೇವರಿಲ್ಲ ಅಂತ ನಾನು ಯಾವತ್ತು ಹೇಳಲ್ಲ. ಆ ರೀತಿ ಪ್ರೂವ್ ಮಾಡೋದು ತುಂಬಾ ಕಷ್ಟಾನೆ. ಬದಲಾಗಿ ನಾನು ದೇವರನ್ನ ನಂಬಲ್ಲ ಅಂತ ಅರಾಮಾಗಿ ಹೇಳ್ತೀನಿ. ದೇವರನ್ನು ನಂಬಲ್ಲ ಅಂದ್ರೆ ಏನರ್ಥ? ನನಗನಿಸ್ಸಿದ್ದನ್ನು ಮಾಡಬಹುದು ಅಂತಾನ? ಖಂಡಿತ ಅಲ್ಲ, ದೇವರನ್ನೊ ಒಂದು ಶಕ್ತಿ ಇಲ್ಲ ಅಂದ್ರೂನು ತಪ್ಪು ಕೆಲಸ ಮಾಡೋಕೆ, ವಿನಾ ಕಾರಣ ಬೇರೆಯವರ ಮನಸ್ಸು ನೋಯಿಸ್ಸಕ್ಕೆ ಖಂಡಿತ ಮನಸ್ಸು ಒಪ್ಪಲ್ಲ. ಇದ್ಯಾಕೆ ಹೀಗೆ? ಲಾಭ ಆಗೋದಾದ್ರೆ, ಶಿಕ್ಷೆ ಕೊಡೋವವ್ರು ಇಲ್ಲ ಅಂದ್ರೆ ಬೇರೆಯವರ ಮನಸ್ಸು ನೋಯಿಸ್ಸೋಕೆ ಏನು ತೊಂದ್ರೆ? ಬಹುಶ: ಇದು ನಮ್ಮ ಸಂಸ್ಕೃತಿ ಇರಬಹುದು. ಸಂಸ್ಕೃತಿ ಅನ್ನೊದಕ್ಕಿಂತ ಧರ್ಮ ಅನ್ನೋದು ಸರಿಯಾಗಿದೆ ಅನ್ಸತ್ತೆ. ಆದ್ರೆ ನಾನು ದೇವ್ರನ್ನೆ ನಂಬಲ್ಲ ಅಲ್ವ? ಧರ್ಮವನ್ನ ಹ್ಯಾಗೆ ನಂಬೋದು? ಹ್ಯಾಗಂತ ಗೊತ್ತಿಲ್ಲ, ಈ ಲಾಜಿಕ್ ಪ್ರಕಾರ ನಾನು ದೇವರನ್ನು ನಂಬಲ್ಲ, ಆದ್ರೆ ಧರ್ಮದ ಮೇಲೆ ಶ್ರದ್ದೆ ಇದೆ, ಅದನ್ನ ನಂಬ್ತೀನಿ.

ಧರ್ಮದ ಬಗ್ಗೆ ನನಗೆ ಹ್ಯಾಗೆ ಶ್ರದ್ದೆ ಬೆಳೀತು? ದೇವರ ಮೇಲಿನ ನಂಬಿಕೆಯಿಂದ ತಾನೆ? ಅದೂ ಹೌದು, ಹಾಗಾಗಿ ನಾನು ದೇವರನ್ನು ಈಗ ನಂಬುತ್ತ ಇಲ್ಲ ಅನ್ನೋದೆ ಒಂದು ಸುಳ್ಳು. ದೇವರು ಇಲ್ಲ ಇಲ್ಲ ಅಂತಾನೆ ನಾನು ಇನ್ನೊಂದು ರೀತಿಯಲ್ಲಿ ಅವನನ್ನ ನಂಬೋಕೆ ಶುರು ಮಾಡಿದ್ದೀನಿ. ನಾನು ನಂಬದೇ ಇದ್ದದ್ದು ದೇವರನ್ನಲ್ಲ. ಚಿಕ್ಕಂದಿನಿಂದ ಎಲ್ಲರೂ ಹೇಳ್ತ ಇದ್ದ ದೇವರ ಸ್ವರೂಪವನ್ನ. ಹೌದು, ನನಗೆ ಇದೇ ಸರಿ ಅನ್ನಿಸ್ತ ಇದೆ ಈಗ. ದೇವರೆನ್ನೊ ಒಂದು ಶಕ್ತಿ ಇದೆ, ಆದ್ರೆ ಅದಕ್ಕೋಸ್ಕರ ಯಾರೂ ದೇವಸ್ಥಾನಕ್ಕೆ ಹೋಗಬೇಕೆಂದಿಲ್ಲ. ದೇವರಿಗೆ ಬೇಕಾಗಿರೋದು ಭಕ್ತೀನು ಅಲ್ಲ, ನಮ್ಮ ಸೇವೇನೂ ಅಲ್ಲ. ಜನರು ತನಗೆ ಮಾಡೋ ಸೇವೆ ಆಧಾರದ ಮೇಲೆ ಸಹಾಯ ಮಾಡೋದಕ್ಕೆ ಅವನೇನೂ ನಮ್ಮ ಸರಕಾರಿ ನೌಕರ ಅಲ್ಲ. ನಮ್ಮೆಲ್ಲರನ್ನ ನೋಡಿಕೊಳ್ಳೊ ಅವನಿಗೆ ತನ್ನನ್ನು ನೋಡಿಕೊಳ್ಳಾಕೆ ಆಗಲ್ಲ ಅಂದುಕೊಳ್ಳೋದು ಮೊರ್ಖತನ. ಅವನಿಗೆ ಬೇಕಾಗಿರೋದು ಒಂದೆ. ಧರ್ಮದಿಂದ ನಡೆಯುವುದು, ತನ್ನಿಂದ ಆದಷ್ಟು ಬೇರೆಯವರಿಗೆ ಉಪಕಾರ ಮಾಡೋದು. ಸೇವೆ ಬಯಸೋ ಚಿಕ್ಕ ಚಿಕ್ಕ ದೇವ್ರುಗಳು ಇದ್ದಾವೊ ಇಲ್ಲವೊ ಗೊತ್ತಿಲ್ಲ, ಇದ್ರೂನು ಅವುಗಳ ಬಗ್ಗೆ ನಾನು ಅಷ್ಟು ತಲೆ ಕೆಡಿಸಿ ಕೊಳ್ಳಲ್ಲ. ಪ್ರತಿಫಲ ಬಯಸಿ ಕೆಲಸ ಮಾಡಬಾರದು ಅಂತ ದೇವರೆ ಹೇಳಿದ್ದಾನಂತೆ. ಹಾಗಿರುವಾಗ ದೇವರೆನಿಸಿಕೊಂಡವನು ಯಾವ ಬಾಯಿಂದ ಸೇವೆ ಅಥವ ಭಕ್ತಿ ಬಯಸಿಯಾನು?

ಹೌದು, ದೇವ್ರನ್ನು ಮನುಶ್ಯರ ತರ ನೋಡೋದು ಸರಿಯಲ್ಲ. ಮನುಶ್ಯರ ಸ್ವಭಾವಗಳನ್ನ ದೇವರಿಗೆ ಅನ್ವಯಿಸಿ ನಮ್ಮ ಲಾಭಕ್ಕಾಗಿ ದೇವರನ್ನ ಉಪಯೋಗಿಸೋದು ಒಳ್ಳೇದಲ್ಲ. ನಾವೂ ದೇವರ ಹಾಗೆ ಇರಬೇಕೆಂದೆ ದೇವರು ಬಯಸ್ತಾನೆ. ಅದಕ್ಕಾಗಿ ದೇವರ ಭಜನೆ ಮಾಡ್ತಾ ಕೂತ್ರೆ ಏನೂ ಪ್ರಯೋಜನ ಇಲ್ಲ, ನಾವು ದೇವರ ಭಕ್ತಿ ಮಾಡೋ ಬದಲು ನಾವೇ ದೇವರಾಗೋ ಪ್ರಯತ್ನ ಮಾಡಬೇಕು. ಒಂದು ವೇಳೆ ದೇವರು ಇರೋದೆ ಆದ್ರೆ ಮನುಶ್ಯರೂ ದೇವರ ತರ ಆಗೋದು ಅವನಿಗೆ ಇಷ್ಟ ಆಗತ್ತೆ ಅಂತನೆ ನನ್ನ ಭಾವನೆ. ಅವನಿಲ್ಲ ಅಂದ್ರೂ ಪರವಾಗಿಲ್ಲ, ನನ್ನ ಮನಸ್ಸಿಗೆ ತಕ್ಕ ಹಾಗೆ ನಡಕೊಂಡ ತೃಪ್ತಿಯಾದ್ರೂ ಸಿಗತ್ತೆ.

No comments: