Monday, November 7, 2011

ಟೆಲಿಫೋನ್ ಗೆಳತಿ


ಮೂಲೆಯಲ್ಲಿರುವ ನನ್ನ ಸೀಟಿನಲ್ಲಿ ಕುಳಿತುಕೊಂಡು ಕಂಪ್ಯೂಟರನ್ನೇ ದಿಟ್ಟಿಸುತ್ತಿದ್ದೆ, ಸುಟ್ಟು ಬಿಡುವ ಹಾಗೆ. 'ಟ್ರಿನ್ ಟ್ರಿನ್ ಟ್ರಿನ್ ಟ್ರಿನ್', ಪಕ್ಕದಲ್ಲಿ ಕುಳಿತ್ತಿದ್ದ ಗಿರೀಶ್ ಫೋನು ಜೋರಾಗಿ ರಿಂಗಾಗುತ್ತ ಇತ್ತು. ಗಿರೀಶ್ ಹಲೋ ಎನ್ನುವಾಗಲೇ ಆ ಕಡೆಯಿಂದ ಇಂಪಾದ ಧ್ವನಿ, ಕಂಪ್ಯೂಟರ್ ಮೇಲಿದ್ದ ನನ್ನ ಸಿಟ್ಟೆಲ್ಲ ಒಮ್ಮೆಲೇ ಕರಗಿ ಹೋಗಿತ್ತು ಆ ಸ್ವರದ ಮಾಧುರ್ಯಕ್ಕೆ. 'ಗುಡ್ ಮಾರ್ನಿಂಗ್ ಸರ್, ದಿಸ್ ಈಸ್ ಪ್ರಿಯಾ ಫ್ರಂ ಎಬಿಎನ್ ಬ್ಯಾಂಕ್' ಎನ್ನುವಂತೆಯೇ ಫೋನೆತ್ತಿ ಕೊಂಡು ಹೊರಗಡೆ ನಡೆದಿದ್ದ ಗಿರೀಶ್. ಲೋನ್ ಬೇಕಿಲ್ಲ ಅಂದರೂ ಕೂಡ ಹದಿನೈದು ನಿಮಿಷಗಳ ಕಾಲ ಪ್ರಿಯಾಳ ಹತ್ತಿರ ಏನೇನೋ ಪ್ರೀತಿಯಿಂದ ಮಾತನಾಡಿ ಬಂದ. ನನಗಂತೂ ಕರಗಿದ ಸಿಟ್ಟೆಲ್ಲ ದುಪ್ಪಟ್ಟಾಗಿ ಬಂದಿತ್ತು. ಸಾಲ ಬೇಕಿಲ್ಲ ಅಂದರೂ ಸಾಲು ಸಾಲಾಗಿ ಗಿರಿಶನಿಗೆ ಕರೆ ಮಾಡುವ ಪ್ರಿಯಾ, ರಮ್ಯ, ಅಮೂಲ್ಯರು ನಿಜವಾಗಲು ಸಾಲ ಬೇಕಿದ್ದ ನನಗೆ ಒಮ್ಮೆಯೂ ಕರೆ ಮಾಡುವ ಪ್ರಯತ್ನ ಮಾಡಿರಲಿಲ್ಲ. ಖುಷಿಯಲ್ಲಿ ತೇಲಾಡುತ್ತ ಬಂದ ಗಿರೀಶನಿಗೂ ಅದನ್ನೇ ಹೇಳಿದೆ, 'ಅಯ್ಯೋ ಅದಕ್ಯಾಕ್ಕೆ ಅಳ್ತೀಯಪ್ಪಾ, ನನಗೂ ಎಲ್ಲರನ್ನು ಮೈಂಟೈನ್ ಮಾಡಕ್ಕಾಗಲ್ಲ, ಇನ್ನು ಮೇಲೆ ಬಂದ ಮೊದಲ ನಂಬರಿಗೆ ನಿನ್ನನ್ನೇ ರೆಫರ್ ಮಾಡ್ತೇನೆ' ಅಂದ. 

ಗಿರೀಶನ ಜೊತೆ ಕಷ್ಟ ಹೇಳಿಕೊಂಡ ಮರುದಿನವೇ ನನ್ನ ಮೊಬೈಲ್ ಟ್ರಿನ್ ಟ್ರಿನ್ ಟ್ರಿನ್ ಅನ್ನ ತೊಡಗಿತ್ತು. ಫೋನೆತ್ತಿದೊಡನೆ ಅತ್ತ ಕಡೆಯಿಂದ ಮಧುರವಾದ ಧ್ವನಿ, 'ಗುಡ್ ಮಾರ್ನಿಂಗ್ ಸರ್, ದಿಸ್ ಇಸ್ ಕಾವ್ಯ ಫ್ರಂ ಎಬಿಎನ್ ಅಮ್ರೋ ಬ್ಯಾಂಕ್. ಆಂ ಐ ಸ್ಪೀಕಿಂಗ್ ಟು ಕಿರಣ್?'. ಫೋನನ್ನು ಬಾಯಿಯ ಹತ್ತಿರ ತಂದು ನಿದಾನವಾಗಿ 'ಎಸ್ ಎಸ್' ಎನ್ನುತ್ತಲೇ ಹೊರಗಡೆ ಓಡಿದೆ. ಸುತ್ತಿ ಬಳಸದೆ ನೇರವಾಗಿ ವಿಷಯಕ್ಕೆ ಬಂದ ಕಾವ್ಯ, ಸಾಲದ ವಿವರಗಳನ್ನು ಕೇಳುತ್ತ ಹೋದಳು. ಸೂತ್ರದ ಬೊಂಬೆಯಂತೆ ಅವಳ ಪ್ರಶ್ನೆಗಳಿಗೆಲ್ಲ ಉತ್ತರ ನೀಡುತ್ತ ನಾನು ಹೋಗಿದ್ದೆ. ನನಗೆ ಬೇಕಿದ್ದ ಮೂರು ಲಕ್ಷಕ್ಕೆ ಬದಲಾಗಿ ನಾಲ್ಕು ಲಕ್ಷ ತೆಗೆದುಕೊಳ್ಳಿ, ಬಡ್ಡಿ ದರ ಕಡಿಮೆ ಇದೆ ಎಂದು ಮೂರ್ ನಾಲ್ಕು ಸಲ ಒತ್ತಾಯದಿಂದ ಹೇಳಿದ್ದು ಬಿಟ್ಟರೆ ಬೇರೆ ಯಾವ ವಿಷಯವನ್ನು ತೆಗೆಯಲಿಲ್ಲ. ಸದ್ಯಕ್ಕೆ ನಾಲ್ಕು ಲಕ್ಷದ ಅಗತ್ಯವಿಲ್ಲ ಎಂದು ಹೇಳೋದು ಬಿಟ್ಟರೆ ಹೇಗೆ ಸಂಭಾಷಣೆ ಮುಂದುವರಿಸುವುದೆಂದೂ ನನಗೂ ತೋಚಲಿಲ್ಲ. ಮೊದಲ ಕರೆ ಐದೇ ನಿಮಿಷಗಳಲ್ಲಿ ಮುಗಿಯಿತು. ನನ್ನ ಮೇಲೆ ನನಗೆ ಸಿಟ್ಟು, ಉಳಿದವರೆಲ್ಲ ಸಾಲ ತೆಗೆದುಕೊಳ್ಳದೆ ಗಂಟೆಗಟ್ಟಲೆ ಮಾತನಾಡುವಾಗ ನಾನು ಸಾಲ ತೆಗೆದು ಕೊಳ್ಳುವವ ಐದೇ ನಿಮಿಷದಲ್ಲಿ ಫೋನ್ ಇಟ್ಟೆನಲ್ಲ ಅಂತ. ಅವಳಿಗಾದರೂ ಬೇರೆ ಏನಾದರು ವಿಷಯ ಎತ್ತಿ ಸ್ವಲ್ಪ ಮಾತು ಮುಂದುವರಿಸಬಹುದಿತ್ತಲ್ಲ, ಅಷ್ಟು ಬೇಗ ಸಾಲಕ್ಕೆ ಒಪ್ಪಿಗೆ ಕೊಟ್ಟಿಲ್ಲವ ನಾನು ಅಂತನಿಸುತ್ತಿತ್ತು. ಬಹುಶ ಸ್ವಲ್ಪ ಒಳ್ಳೆಯ ಮನೆತನದವಳಿರಬೇಕು, ಸ್ವರ ಕೇಳಿದರೆ ಸುಮ್ಮ ಸುಮ್ಮನೆ ಯಾರ್ಯಾರ ಜೊತೆಗೆ ಮಾತನಾಡುವ ಹುಡುಗಿಯರಂತಿಲ್ಲ ಅಂದು ನನ್ನನ್ನೇ ಸಮಾದಾನಿಸಿಕೊಂಡೆ. ಬಂದ ನಂಬರಿಗೆ ಮತ್ತೊಮ್ಮೆ ಕರೆ ಮಾಡೋಣ ಅನ್ನಿಸಿತು, ಆದರೆ ಹೇಗೆ ಮಾತು ಮುಂದುವರಿಸಬೇಕೆಂದು ಇವಾಗಲೂ ತೋಚುತ್ತಿರಲಿಲ್ಲ. ನಿದಾನವಾಗಿ ನನ್ನ ಸೀಟಿನತ್ತ ವಾಪಾಸು ಹೋಗಿ ಮತ್ತೆ ಗಿರೀಶನ ಶರಣು ಹೋದೆ. 

ಮರುದಿನ ಮತ್ತೆ ಕಾವ್ಯಳ ಕರೆ ಬಂತು. ನಿನ್ನೆಗಿಂತ ಜಾಸ್ತಿ ದೈರ್ಯವಿತ್ತು ಇಂದು, ಹಾಗೆ ಗಿರೀಶನ ಅನುಭವದ ಸಲಹೆಗಳೂ ಜೊತೆಗಿದ್ದವು. 
'ಸರ್, ಫೋರ್ ಲ್ಯಾಕ್ಸ್ ತಗೊಳ್ಳಿ ಸರ್, ತುಂಬಾ ಕಡಿಮೆ ಇದೆ ಇಂಟರೆಸ್ಟ್'
'ನಂಗೆ ಮೂರೇ ಸಾಕು, ಬೇಕಿದ್ರೆ ಒಂದು ನಿಮ್ಮ ಹೆಸರಲ್ಲಿ ತಗೊಳ್ಳೋಣ' ಅಂದೆ
'ಅಯ್ಯೋ, ಅಷ್ಟೆಲ್ಲ ಸಾಲ ತೀರಿಸೋಕೆ ನನ್ನ ಕೈಲಿ ಆಗಲ್ಲಪ್ಪ'
'ಯಾಕ್ರೀ, ಬೇರೆಯವರಿಗೆ ಅಷ್ಟೊಂದೆಲ್ಲ ಸಾಲ ಕೊಡಿಸ್ತ ಇದ್ದೀರಾ'
'ಇಲ್ಲ ಸರ್, ಇವಾಗಿನ್ನು ನನ್ನ ಕಾಲೇಜೆ ಮುಗಿದಿಲ್ಲ'
'ಸರ್ ಅಂತ ಕರೀಬೆಡ್ರಿ, ಬೈಯ್ತ ಇದ್ದಾಗೆ ಅನ್ಸತ್ತೆ, ಕಿರಣ್ ಅಂತಾನೆ ಕರೀರಿ. ಅಂದ್ ಹಾಗೆ ನೀವು ಇನ್ನು ಓದ್ತಾನೆ ಇದ್ದೀರಾ'?

ಹಾಗೆ ಮಾತಾಡ್ತಾ ಆಡ್ತಾ ಅರ್ಧ ಗಂಟೆ ಆಗಿದ್ದೆ ಗೊತ್ತಾಗಿರಲಿಲ್ಲ. ಗಿರೀಶ್ ಒಳಗಡೆಯಿಂದ ಸನ್ನೆ ಮಾಡಿದಾಗಲೇ ಗೊತ್ತಾಗಿದ್ದುದು, ಮೀಟಿಂಗ್ ಟೈಮ್ ಆಯಿತು ಅಂತ. ಒಲ್ಲದ ಮನಸ್ಸಿಂದ ಕಾವ್ಯಳಿಗೆ ಬೈ ಹೇಳಿದೆ, ಹೇಳಿದಂತೆ ಒಂದೇ ನಿಮಿಷದಲ್ಲಿ ಮೆಸೇಜ್ ಬಂದಿತು, ಅವಳ ಮೊಬೈಲ್ ನಿಂದ. ಎಲ್ಲೋ ಗಾಳಿಯಲ್ಲಿ ಹಾರಿದ ಅನುಭವ. ಕಾಲೇಜಿನಲ್ಲಿ ಸಹ ಯಾವ ಹುಡುಗಿಯರೊಂದಿಗು ಮಾತಾಡದ ನಾನು, ಮೊದಲ ಬಾರಿ ಯಾರೋ ಅಪರಿಚಿತ ಹುಡುಗಿಯೊಂದಿಗೆ ಅರ್ಧ ಗಂಟೆ ಮಾತನಾಡಿದ್ದೆ, ಒಂಥರಾ ಬೇರೆ ಲೋಕದಲ್ಲಿ ಸಂಚರಿಸಿದ ಅನುಭವ.

ಸಂಜೆ ರೂಮಿಗೆ ಹೋದೊಡನೆ ಹೊಸ ಅನುಭವವನ್ನ ಎಲ್ಲರ ಜೊತೆ ಮಸ್ಸಾಲೆ ಹಾಕಿ ಹಂಚಿ ಕೊಂಡೆ, ಕಾವ್ಯಳಿಗೆ ಕಳಿಸೋಕೆ ಬೇಕಿದ್ದ ಎಸ್ಸೆಮ್ಮೆಸ್ ಗಳು ಅವರುಗಳು ತಾನೇ ಕಳಿಸಬೇಕು, ನನಗೆ ಕಳಿಸೋಕೆ ಇದು ತನಕ ಯಾರೂ ಸಿಕ್ಕಿರಲಿಲ್ಲ. ಗುಡ್ ನೈಟ್ ಎಸ್ಸೆಮ್ಮೆಸ್ ಕಳಿಸೋದರಲ್ಲಿ ಅಷ್ಟೊಂದು ಕಾತರ ಇರುತ್ತೆಂತ ನನಗಾವಾಗಲೇ ಗೊತ್ತಾಗಿದ್ದುದು. ನನ್ನ ಮೆಸೇಜ್ ಹೋದ ಐದೇ ನಿಮಿಷಗಳಲ್ಲಿ ಬಂದಿತ್ತು ಕಾವ್ಯಳ ಉತ್ತರ. ಒಬ್ಬಳು ಹುಡುಗಿ ನನಗೆ ಕಳಸಿದ ಮೊತ್ತ ಮೊದಲ ಮೆಸೇಜ್. ಎಷ್ಟು ಬಾರಿ ಓದಿದರೂ ತ್ರಪ್ತಿಯಿರಲಿಲ್ಲ. ಕಾವ್ಯ ಎಂಬ ಹೆಸರೇ ನನಗೆ ತುಂಬಾ ಕುತೂಹಲ ಹಿಡಿಸಿತ್ತು, ಹೆಸರು ಕೇಳಿದರೆ ನೋಡಲೂ ಕೂಡ ಚೆನ್ನಾಗೆ ಇರುತ್ತಾಳೆ ಅಂತ ಮನಸ್ಸು ಒತ್ತಿ ಒತ್ತಿ ಹೇಳುತ್ತಿತ್ತು.

ಮುಂದಿನ ಮೂರು ದಿನಗಳಲ್ಲೇ ನನ್ನ ಲೋನ್ ವ್ಯವಹಾರವೆಲ್ಲ ಮುಗಿದಿತ್ತು, ಹಾಗೆ ಕಾವ್ಯಳ ಜೊತೆಗಿನ ಹೊಸ ಫೋನ್ ವ್ಯವಹಾರ ಶುರುವಾಗಿತ್ತು. ಪ್ರತಿ ದಿನ ಎರೆಡೆರಡು ಘಂಟೆ ಮಾತಾಡಿದರೂ ಮರುದಿನ ಮತ್ತೆ ಮಾತನಾಡಲಿಕ್ಕೆ ವಿಷಯ ಎಲ್ಲಿಂದ ಬರುತ್ತೆ ಅಂತ ನನಗೆ ಆಶ್ಚರ್ಯವಾಗುತ್ತಿತ್ತು. ಹಿಂದೆ ಮನಸೋ ಇಚ್ಛೆ ಗಿರೀಶನಿಗೆ ಬಯ್ಯುತ್ತಿದ್ದ ನಾನು ಈವಾಗ ಅವನ ದಾರಿಯನ್ನೇ ಅನುಸರಿಸೋದು ನೋಡಿ ಆಶ್ಚರ್ಯ ಅನಿಸುತ್ತಿತ್ತು. ಎಟುಕದ ದ್ರಾಕ್ಷಿ ಬೇರೆಯವರಿಗೆ ಹುಳಿ ಎಂಬ ಸತ್ಯ ಅರಿವಾಗಿತ್ತು.

ಹತ್ತಿರ ಹತ್ತಿರ ಮೂರು ತಿಂಗಳಾಗಿತ್ತು, ಇನ್ನೂರು ರೂಪಾಯೀ ತುಂಬಿಸುತ್ತಿದ್ದ ಫೋನಿಗೆ ಸಾವಿರ ರುಪಾಯೀ ತುಂಬಿಸಲು ಶುರು ಮಾಡಿ. ಆದರೂ ಮುಖತಃ ಕಾವ್ಯಳನ್ನು ಭೇಟಿಯಾಗಲು ಆಗೇ ಇರಲಿಲ್ಲ. ಎರಡು ಮೂರು ಬಾರಿ ಪ್ರಯತ್ನಿಸಿದಾಗಲೆಲ್ಲ ಏನಾದರು ನೆಪ ಮಾಡಿ ತಪ್ಪಿಸಿಕೊಳ್ಳುತ್ತಿದ್ದಳು. ಒಮ್ಮೊಮ್ಮೆ ನನ್ನಲ್ಲೆಭಯ, ಎಲ್ಲಾದರೂ ನಾನು ಅಂದು ಕೊಂಡಷ್ಟು ಚೆನ್ನಾಗಿರಲಿಲ್ಲ ಅಂದರೆ ಏನು ಮಾಡೋದು ಅಂತ, ದಿನಾ ಎರೆಡೆರಡು ಘಂಟೆ ಮಾತಾಡುವವರು ಹೇಗೆ 'ಸ್ನೇಹ' ಕಳೆದುಕೊಳ್ಳೋದು ಅಂತ. ಒಮ್ಮೆ ಅವಳಲ್ಲಿ ನೇರವಾಗಿಯೂ ಕೇಳಿದ್ದೆ. ಕೋಪಿಸಿಕೊಳ್ಳದೆ ನಗುತ್ತ ಹೇಳಿದ್ದಳು 'ಒಮ್ಮೆ ನೋಡಿದರೆ, ಪ್ರತಿ ದಿನಾ ಕೂಡ ಬರ್ತೀರಿ, ಅದಕ್ಕೆ ಸ್ವಲ್ಪ ಕಾಯಿಸುತ್ತಾ ಇರೋದು' ಅಂತ. ಆ ದಿನವಂತೂ ರಾತ್ರಿಯೆಲ್ಲ ಅವಳದೇ ಕನಸು, ಬಿಳಿಯ ಬಟ್ಟೆಯಲಿ ಅಪ್ಸರೆಯಂತೆ ನನ್ನ ಸುತ್ತ ಸುತ್ತಾಡಿದಂತೆ.

ಮತ್ತೆ ಕೆಲ ದಿನಗಳು ಹಾಗೆ ಕಳೆದವು. ಪ್ರತಿದಿನದಂತೆ ಮಧ್ಯಾಹ್ನ ಊಟದ ಬಳಿಕ ಕಾವ್ಯಳಿಗೆ ಕರೆ ಮಾಡಿದೆ. ಕಾವ್ಯಳ ಸ್ವರದಲ್ಲಿ ಏನೋ ಸಣ್ಣ ಬದಲಾವಣೆ
'ಕಿರಣ್, ನಾನು ಏನೋ ಕೇಳಿದರೆ ಬೇಜಾರ್ ಮಾಡಲ್ಲ ತಾನೇ'
'ಇಲ್ಲ ಕಣೆ, ಕೇಳು'
'ನನ್ನ ಎಕ್ಷಾಮ್ ಹತ್ತಿರ ಬಂತು, ಹತ್ತು ಸಾವಿರ ಫೀ ಕೊಡಬೇಕು, ಐದುಸಾವಿರ ಒಟ್ಟು ಮಾಡಿದ್ದೇನೆ, ಇನ್ನೈದು ಸಾವಿರ ಆಗ್ತಾ ಇಲ್ಲ, ಐದಾರು ದಿನದಲ್ಲಿ ನನ್ನ ಸಂಬಳ ಬರುತ್ತೆ, ತೀರಿಸಿಬಿಡುತ್ತೇನೆ, ಪ್ಲೀಸ್' ಅಂದಳು.
'ಅರೆ ಐದೇಕೆ, ಹತ್ತು ಕೇಳಿದ್ದರೂ ಕೊಡುತ್ತಿದ್ದೆ', ಕ್ಷಣವೂ ಯೋಚಿಸದೆ ಹೇಳಿದೆ 'ಆದರೆ, ಒಂದು ಕಂಡಿಶನ್ ಮೇಲೆ'
'ತುಂಬಾ ಥ್ಯಾಂಕ್ಸ್ ಕಿರಣ್, ಆದರೆ ಕಂಡಿಶನ್ ಏನು?'
'ಹಣ ಮಾತ್ರ ನಿಮ್ಮ ಕೈಯಲ್ಲೇ ಕೊಡೋದು' 
ಸ್ವಲ್ಪ ಯೋಚನೆಗಿಟ್ಟುಕೊಂಡಳನ್ನಿಸುತ್ತೆ, ಸ್ವಲ್ಪ ಹೊತ್ತಿನ ಮೇಲೆ ಹೇಳಿದಳು 'ಆಯಿತು ಕಿರಣ್, ನಾಳೆ ಸಿಗ್ತೀನಿ ನಿಮಗೆ, ನಮ್ಮ ಆಫೀಸ್ ಹತ್ತಿರ 'ನಂದಿನಿ' ಹೋಟೆಲ್ ಇದೆಯಲ್ಲ, ಅಲ್ಲಿ ಬರ್ತೇನೆ ಮಧ್ಯಾಹ್ನ' 
ನನಗೋ ಆಕಾಶ ನಾಲ್ಕೇ ಗೇಣು ಅನಿಸಿತ್ತು.

ಮರುದಿನ ಸ್ವಲ್ಪ ಬೇಗನೆ ಎದ್ದೆ. ಕಾವ್ಯಳ ಭೇಟಿ ಮಧ್ಯಾಹ್ನವಾದರೂ ಕೂಡ ಹೊತ್ತಿಗೆ ಮುಂಚೆಯೇ ಎಚ್ಚರವಾಗಿತ್ತು. ಇರುವುದರಲ್ಲೇ ಚೆನ್ನಾಗಿರೋ ಬಟ್ಟೆ ಹಾಕಿಕೊಂಡು ಬೇಗನೆ ಹೊರಟೆ. ಕಂಪ್ಯೂಟರ್ ಮುಂದೆ ಕೂತಿದ್ದರೂ ಕೂಡ ಯೋಚನೆಯೆಲ್ಲ ಮಧ್ಯಾಹ್ನದ ನನ್ನ ಪ್ರಥಮ ಭೇಟಿಯ ಮೇಲೆಯೇ ಇತ್ತು. ನಂದಿನಿ ಹೋಟೆಲ್ ನಮ್ಮ ಕಂಪನಿಯಿಂದ ಬರಿ ಹತ್ತು ನಿಮಿಷದ ದಾರಿ, ಆದರೂ ಕೂಡ ಅರ್ಧ ಘಂಟೆ ಮುಂಚೆಯೇ ಹೊರಟು ಮುಟ್ಟಿದೆ. ಚೆನ್ನಾಗಿರೋ ಯಾವ ಹುಡುಗಿ ಬಂದಾಗಲೆಲ್ಲ ಇವಳೇ ಆಗಿರಬಾರದೆ ಕಾವ್ಯ ಎಂದು ಮನಸ್ಸು ಹಂಬಲಿಸುತ್ತಿತ್ತು. ಎರಡು ಘಂಟೆಗೆ ಹತ್ತು ನಿಮಿಷವಿರುವಾಗ ಪಕ್ಕದ ಬಸ್ಸು ನಿಲ್ದಾಣದಲ್ಲಿ ಸ್ವಲ್ಪ ಕಂದು ಬಣ್ಣದ ಹುಡುಗಿಯೊಬ್ಬಳು ಬಂದು ನಿಂತದನ್ನು ನೋಡಿದೆ.  ನನ್ನ ಕಾವ್ಯ ಇವಳಾಗದಿರಲಿ ಇವಳಾಗದಿರಲಿ ಅಂತ ಮನಸ್ಸು ಕೂಗುತ್ತಿತ್ತು. ಸ್ವಲ್ಪ ಆ ಕಡೆ ಈ ಕಡೆ ನೋಡಿ ತನ್ನ ಮೊಬೈಲ್ ಎತ್ತಿ ಯಾರಿಗೋ ಕರೆ ಮಾಡತೊಡಗಿದಳು. ನನ್ನ ದುರಾದ್ರಷ್ಟಕ್ಕೆ ನನ್ನ ಮೊಬೈಲೇ ಕಂಪಿಸ ತೊಡಗಿತ್ತು. ಒಮ್ಮೇಲೆ ಏನೂ ಮಾಡುವುದೆಂದೇ ತೋಚಲಿಲ್ಲ. ಅಲ್ಲಿಂದ ಓಡಿ ಬಿಡೋಣ ಅಂತ ಮನಸ್ಸು ಒತ್ತಿ ಒತ್ತಿ ಹೇಳುತ್ತಿತ್ತು, ಆದರೆ ಕಾಲು ಮನಸ್ಸು ಮಾಡುತ್ತಿರಲಿಲ್ಲ. ಯಾಂತ್ರಿಕವಾಗಿ ಫೋನೆತ್ತಿ ಅವಳ್ಲಿದ್ದಲ್ಲಿಗೆ ನಡೆದೆ, ಒಲ್ಲದ ಕಾಲನ್ನು ಎಳೆಯುತ್ತ. 'ಹಾಯ್, ಅಯ್ ಯಾಮ್ ಕಿರಣ್' ಅಂತ ಪರಿಚಯ ಹೇಳಿದೆ. ಮುಂದೆಲ್ಲ ಅವಳೇ ಮಾತನಾಡಿದಳು, ನನಗೆ ಮಾತನಾಡಲೂ ಏನೂ ಉಳಿದಿರಲಿಲ್ಲ. ಒಲ್ಲದ ಮನಸ್ಸಿನಿಂದ ನನ್ನಲ್ಲಿದ ಐದು ಸಾವಿರ ರುಪಾಯಿಯನ್ನು ಕೊಟ್ಟು ಬಂದೆ.

ವಾಪಾಸ್ ಬಂದವನಿಗೆ ಮುಂದೆ ಹೇಗೆ ಅವಳಿಂದ ತಪ್ಪಿಸಿಕೊಳ್ಳುವುದೆಂಬುದೆ ದೊಡ್ಡ ಚಿಂತೆಯಾಗಿತ್ತು. ಇಷ್ಟು ದಿನಗಳ ತನಕ ಹಾಳುಮಾಡಿದ ಸಮಯ ಸಾಯಲಿ, ಇನ್ನು ಮುಂದೆಯಾದರೂ ಹೇಗಾದರೂ ಮಾಡಿ ಅವಳೊಂದಿಗೆ ಮಾತನಾಡುವುದು ನಿಲ್ಲಿಸ ಬೇಕೆನಿಸಿತ್ತು. ಆದರೆ ಒಮ್ಮೆಲೇ ಹೇಗೆ ಮಾಡಲಿ, ಈವತ್ತಷ್ಟೇ ದಾನಶೂರನಂತೆ ಐದು ಸಾವಿರ ಕೊಟ್ಟಿದ್ದೆ, ಐದು ದಿನಗಳ ನಂತರ ಅದನ್ನು ವಾಪಸು ತಗೆದುಕೊಳ್ಳಬೇಕಲ್ಲ. ಹಾಗೆಯೇ ಏನೋ ಒಂದು ತರ ಪಾಪಪ್ರಜ್ಞೆ ಕಾಡುತ್ತಿತ್ತು, ಕಾವ್ಯಳಿಗೆ ಮೊಸಮಾಡುತ್ತಿರುವ ನನ್ನ ಬಗ್ಗೆಯೇ ಜಿಗುಪ್ಸೆ ಬರುತ್ತಿತ್ತು. ನಾನಾಗಿಯೇ ಅವಳ ಸ್ನೇಹಕ್ಕೆ ಹಾತೊರೆದಿದ್ದೆ ಮೊದಲಿಗೆ, ಅವಳು ಸುಮ್ಮನೆ ನನ್ನ ಸ್ನೇಹಕ್ಕೆ ಸ್ಪಂದಿಸಿದ್ದಳಷ್ಟೇ. ಪ್ರತಿದಿನ ಕೂಡ ಎರೆಡೆರಡು ಘಂಟೆ ಮಾತನಾಡುತ್ತಿದ್ದ ನಾನು ಅವಳನ್ನು ನೋಡಿದ ನಂತರ ಎರಡು ನಿಮಿಷ ಸಹ ಮೊದಲಿನಂತೆ ಮಾತನಾಡಲು ತಡಪಡಿಸಿದ್ದೆ. ನಾಳೆ ಅವಳು ಕರೆ ಮಾಡಿದಾಗ ಹೇಗೆ ಉತ್ತರಿಸಬೇಕೆಂಬುದೆ ಹೊಳೆಯುತ್ತಿರಲಿಲ್ಲ. ಮೂರು ತಿಂಗಳ ಸೆಳೆತವನ್ನೆಲ್ಲ ಮುಖ ನೋಡಿದ ಮೂರೇ ಸೆಕೆಂಡುಗಳಲ್ಲಿ ಕೊಡವಿದ ನನ್ನ ಮೇಲೆಯೇ ಅಸಹ್ಯವಾಗಲು ಶುರುವಾಗಿತ್ತು. ನನ್ನ ಹೊಸ ರೂಪ ನೋಡಿದಾಗ ಅವಳಿಗೆ ಹೇಗನ್ನಿಸಬೇಡ? ಆದರೂ ಕೂಡ ನನ್ನ ನಿರ್ಧಾರ ಅಚಲವಾಗಿತ್ತು, ಆದಷ್ಟು ಬೇಗ ಅವಳ ಸ್ನೇಹ ಕಳೆದುಕೊಳ್ಳಲು ನಿರ್ಧರಿಸಿದ್ದೆ. ಒಂದೇ ಸಲ ಮಾತಾನಾಡುವುದು ನಿಲ್ಲಿಸಿ ತುಂಬಾ ನೋಯಿಸುವುದು ಬೇಡವೆಂದು  ಐದು ನಿಮಿಷ ಮಾತನಾಡಿ ಮುಗಿಸೋಣವೆಂದು ಮರುದಿನ ಕರೆ ಮಾಡಿದೆ, ಆ ಕಡೆಯಿಂದ ಯಾವ ಪ್ರತಿಕ್ರಿಯೆ ಸಹ ಬರಲಿಲ್ಲ. ಒಂದು ಘಂಟೆ ಬಿಟ್ಟು ಮತ್ತೆ ಕರೆಮಾಡಿದೆ, ಆಗಲೂ ಸಹ ಯಾವುದೇ ಪ್ರತಿಕ್ರಿಯೆ ಇರಲಿಲ್ಲ ಕಾವ್ಯಳ ಕಡೆಯಿಂದ. ಮರುದಿನ ಇನ್ನೊಮ್ಮೆ ಕರೆ ಮಾಡಿದೆ. ನಿಬ್ಬೆರೆಗಾಗಿ ಮೌನವಾದ ನನ್ನ ಫೋನನ್ನೇ ದಿಟ್ಟಿಸುತ್ತ ನಿಂತೆ. ಯಾರು ಯಾರಿಗೆ ಮೋಸ ಮಾಡಿದರೆನ್ನುವುದೇ ತಿಳಿಯಲಿಲ್ಲ. 

1 comment:

Vidya S said...

Tumba sogasagi moodi bandide. Idu naija ghataneyo?